ಮಾನ್ವಿ: ಮುಂಗಾರು ಹಂಗಾಮು ಕೃಷಿ ಚಟುವಟಿಕೆ ಆರಂಭವಾಗುವುದರಿಂದ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಸೇರಿದಂತೆ ಗುಣಮಟ್ಟದ ಕೃಷಿ ಪರಿಕರಗಳ ದಾಸ್ತಾನು ಮಾಡಿಕೊಳ್ಳಬೇಕು ಎಂದು ಗೊಬ್ಬರ ಅಂಗಡಿ ವ್ಯಾಪಾರಿಗಳಿಗೆ ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಗುರುನಾಥ ಭೂಸನೂರ ಸೂಚಿಸಿದರು.

ಪಟ್ಟಣದ ವಿವಿಧ ಕೀಟನಾಶಕ, ಗೊಬ್ಬರದ ಅಂಗಡಿಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಅನಧಿಕೃತ ಸಂಸ್ಥೆಗಳ ಕಳಪೆ ಕೃಷಿ ಪರಿಕರಗಳನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ಮಾರಾಟ ಕೇಂದ್ರಗಳಲ್ಲಿ ರೈತರಿಗೆ ಕಾಣುವಂತೆ ಬೀಜ, ಗೊಬ್ಬರ, ಕ್ರಿಮಿನಾಶಕಗಳ ದಾಸ್ತಾನಿನ ವಿವರ, ಬೆಲೆ ಸೇರಿದಂತೆ ಅಗತ್ಯ ಮಾಹಿತಿ ಫಲಕ ಪ್ರದರ್ಶಿಸಬೇಕು.
ನಿಗದಿತ ಬೆಲೆಗಿಂತ ಹೆಚ್ಚು ಹಣ ಪಡೆದರೆ ಕ್ರಮ ಕೈಗೊಳ್ಳಲಾಗುವುದು. ರೈತರಿಗೆ ಕಡ್ಡಾಯವಾಗಿ ರಸೀದಿ ನೀಡಬೇಕು ಎಂದು ತಿಳಿಸಿದರು.