ವೇಣುವಿನೋದ್ ಕೆ.ಎಸ್, ಮಂಗಳೂರು
ದೇಶದೆಲ್ಲೆಡೆ ಕರೊನಾ ಪ್ರಸರಣ ಭೀತಿ ನಡುವೆಯೂ ಕರ್ನಾಟಕ ಔಷಧ ಮತ್ತು ಲಾಜಿಸ್ಟಿಕ್ಸ್ ಸೊಸೈಟಿ ವತಿಯಿಂದ ವೈದ್ಯಕೀಯ ಸಿಬ್ಬಂದಿಗಳಿಗೆ ವಿವಿಧ ಜಿಲ್ಲೆಗಳಲ್ಲಿ ವಿತರಿಸಲಾಗಿರುವ ಸುರಕ್ಷತಾ ಕವಚ(ಪಿಪಿಇ-ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್‌ಮೆಂಟ್) ತೀರಾ ಕಳಪೆ ಎನ್ನುವ ಮಾಹಿತಿ ಬಯಲಾಗಿದೆ.
‘ವಿಜಯವಾಣಿ’ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಸರ್ಕಾರ ಹಲವು ಜಿಲ್ಲೆಗಳಿಗೆ ಈ ರೀತಿಯ ಜನರಲ್ ಪಿಪಿಇಗಳನ್ನು ಪೂರೈಕೆ ಮಾಡಿದೆ. ಇದನ್ನು ಪಿಪಿಇ ಎಂದು ಕರೆಯುವಂತೆಯೇ ಇಲ್ಲ, ಕೇಂದ್ರ ಆರೋಗ್ಯ ಇಲಾಖೆ ನಿಗದಿಪಡಿಸಿರುವ ಗುಣಮಟ್ಟ ಅರ್ಹತೆಗೆ ಸಮೀಪದಲ್ಲೂ ಇಲ್ಲ.
ಕೊವಿಡ್‌ನಂತಹ ಅತ್ಯಂತ ಅಪಾಯಕಾರಿ ವೈರಸ್ ಸೋಂಕಿನೊಂದಿಗೆ ಕೆಲಸ ಮಾಡುವ ವೈದ್ಯಕೀಯ ಸಿಬ್ಬಂದಿಗಳು, ಪಾಸಿಟಿವ್ ರೋಗಿಗಳ ಚಿಕಿತ್ಸೆ ವೇಳೆ ಇದನ್ನು ಬಳಸಬೇಕಾಗುತ್ತದೆ. ಅಂತಹ ವೇಳೆ ಅವರು ತಮ್ಮನ್ನು ವೈರಸ್ ಸೋಂಕಿನಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಪಿಪಿಇ ಧರಿಸುತ್ತಾರೆ. ಆದರೆ ಈ ಪಿಪಿಇ ಧರಿಸಿದರೆ ಸೋಂಕು ಸುಲಭದಲ್ಲಿ ಬರಬಹುದು ಎಂದು ವೈದ್ಯರೊಬ್ಬರು ವಿಜಯವಾಣಿಗೆ ತಿಳಿಸಿದರು.
ಟ್ರಿಪಲ್ ಲೇಯರ್‌ವುಳ್ಳ ಪಿಪಿಇಗಳನ್ನು ಆರೋಗ್ಯ ಸಹಾಯಕರು, ಐಸಿಯು, ಹೆಲ್ತ್‌ಡೆಸ್ಕ್, ಒಳರೋಗಿ ವಾರ್ಡ್ ಮುಂತಾದೆಡೆಗಳಲ್ಲಿ ಬಳಸಲಾಗುತ್ತದೆ.
ಹೇಗಿವೆ ಸುರಕ್ಷಾ ಕವಚ?: ಬುಧವಾರ ಒಟ್ಟು 6000ದಷ್ಟು ಪಿಪಿಇ ಕಿಟ್‌ಗಳು ಜಿಲ್ಲೆಗೆ ಆಗಮಿಸಿವೆ, ಇದರಲ್ಲಿ ತರಕಾರಿ ಒಯ್ಯುವ ಪ್ಲಾಸ್ಟಿಕ್ ಚೀಲದ ಹಾಗಿರುವ ಶೂ ಕವರ್, ಕುತ್ತಿಗೆ ಪ್ರದೇಶವನ್ನು ರಕ್ಷಿಸದ ಗೌನ್, ಮುಖಕವಚವೂ ಇಲ್ಲ ಹೆಡ್‌ಕವರ್ ಇಲ್ಲ, ಗುಣಮಟ್ಟವಿಲ್ಲದ ಗಾಗಲ್ಸ್ ಕಿಟ್ ಇದರಲ್ಲಿ ಒಳಗೊಂಡಿದೆ.
ಬಂದಿರುವ ಕಿಟ್‌ನಲ್ಲಿ ಕೆಳದರ್ಜೆಯ ಒಂದು ಸೆಟ್ ಗ್ಲವ್ಸ್ ನೀಡಲಾಗಿದೆ. ಆದರೆ ಎರಡು ಸೆಟ್ ಅದರಲ್ಲೊಂದು ಅರ್ಧ ಕೈಗಳ ವರೆಗೂ ಬರುವಂಥದ್ದು ಇರಬೇಕು. ನೀಡಿರುವ ಮಾಸ್ಕ್ ಸರ್ಜಿಕಲ್ ತ್ರೀಲೇಯರ್ ಮಾಸ್ಕ್, ಸಾಮಾನ್ಯ ಗುಣಮಟ್ಟದ್ದು. ಅಗತ್ಯವಿರುವುದು ಎನ್-95 ದರ್ಜೆಯ ಮಾಸ್ಕ್.
ಪಿಪಿಇ ಗೌನ್ ಉತ್ತಮ ಗುಣಮಟ್ಟದ್ದಾಗಿದ್ದು ನೀರು ಅಥವಾ ಯಾವುದೇ ದ್ರವ ಒಳಗೆ ಬರುವ ಹಾಗಿರಬಾರದು. ಕುತ್ತಿಗೆ ಮುಚ್ಚುವಂತಹ ಹುಡ್ ಇರಬೇಕು, ಕನಿಷ್ಠ 90 ಜಿಎಸ್‌ಎಂಗಿಂತ ಹೆಚ್ಚು ದಪ್ಪ ಇರಬೇಕು.
ಶೂಕವರ್‌ಗಳೂ ಅದೇ ಗುಣಮಟ್ಟ ಹೊಂದಿರಬೇಕು. ಪ್ಯಾಡೆಡ್ ಆಗಿರಬೇಕು. ಗಾಗಲ್ಸ್‌ಗಳು ಸಾಕಷ್ಟು ಅಗಲವಾಗಿದ್ದು, ತಲೆಗೆ ಅಳವಡಿಸಲು ಬ್ಯಾಂಡ್ ಹೊಂದಿರಬೇಕು. ಈಗ ನೀಡಿರುವುದು ಗಾಗಲ್ಸ್ ಅಲ್ಲ ಬದಲು ಕಳಪೆ ಐ-ವೇರ್.
ಈ ಎಲ್ಲ ಪರಿಕರಗಳು ಐಎಸ್‌ಒ ಪ್ರಮಾಣ ಪತ್ರ ಮತ್ತು ಐಎಸ್‌ಐ ಮಾರ್ಕ್ ಹೊಂದಿರುವುದು ಅಗತ್ಯ. ಅದರಲ್ಲಿ ಇಲ್ಲಿಗೆ ಬಂದ ಪರಿಕರಗಳಲ್ಲಿ ಅದ್ಯಾವುದೂ ಇಲ್ಲ.
ಆದರೆ ಈಗಿನ ಕಿಟ್‌ಗಳಲ್ಲಿ ವೈರಸ್ ಸುಲಭವಾಗಿ ದೇಹದೊಳಗೆ ಸೇರಿಕೊಳ್ಳುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲೂ ಭ್ರಷ್ಟಾಚಾರ, ಕಳಪೆ ಸುರಕ್ಷಾ ಕವಚ ಪೂರೈಸುವುದು ನಿಜಕ್ಕೂ ಕ್ರಿಮಿನಲ್ ಅಪರಾಧ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.
ಇಂತಹ ಪಿಪಿಇ ಕಿಟ್ ಧರಿಸಿ ಕೊವಿಡ್ ಚಿಕಿತ್ಸೆ ನೀಡಲು ಹೋದರೆ ವೈದ್ಯಕೀಯ ಸಿಬ್ಬಂದಿಗಳೆಲ್ಲರೂ ಕ್ವಾರಂಟೈನ್ ಆಗಬೇಕಾದೀತು. ಇದು ದೊಡ್ಡ ಮಟ್ಟದಲ್ಲಿ ಕೊವಿಡ್ ಪ್ರಸರಣಕ್ಕೆ ಕಾರಣವಾಗಬಹುದು ಎಂದು ವೈದ್ಯರು ಭೀತಿ ವ್ಯಕ್ತಪಡಿಸಿದ್ದಾರೆ.