ಹರಾವರಿ ದುರ್ಗಾಂಬಾ ರಥೋತ್ಸವ

ಶೃಂಗೇರಿ: ಶ್ರೀ ಆದಿ ಶಂಕರಾಚಾರ್ಯರಿಂದ ಶೃಂಗೇರಿ ತಾಲೂಕಿನ ದಕ್ಷಿಣದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ರಕ್ಷಣಾ ದೇವತೆ ಹರಾವರಿ ದುರ್ಗಾಂಬಾದೇವಿ ರಥೋತ್ಸವ ಗುರುವಾರ ನೆರವೇರಿತು. ಶ್ರೀಮಠದ ಆನೆಗಳು, ವಾದ್ಯಗೋಷ್ಠಿಗಳು, ಛತ್ರಿಚಾಮರಗಳು, ರಸ್ತೆಗಳ ಇಕ್ಕೆಲೆಗಳಲ್ಲಿ ಬಿಡಿಸಿದ ರಂಗವಲ್ಲಿ ಚಿತ್ತಾರಗಳು, ವಿದ್ಯುತ್ ದೀಪಾಲಂಕಾರಗಳು ಉತ್ಸವಕ್ಕೆ ಮೆರುಗು ನೀಡಿದವು.

ಬೆಳಗ್ಗೆಯಿಂದಲೇ ತಾಲೂಕಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿ ದೇವಿಗೆ ಹೂವು, ಹಣ್ಣು ಕಾಯಿ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು.

ಶ್ರೀ ಭಾರತೀ ತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಬೆಳಗ್ಗೆ ದೇವಾಲಯಕ್ಕೆ ಆಗಮಿಸಿ ದುರ್ಗೆಗೆ ಪೂಜೆ ಸಲ್ಲಿಸಿದರು. ವಿವಿಧ ಪುಷ್ಪಗಳಿಂದ ರಥವನ್ನು ಅಲಂಕಾರ ಮಾಡಲಾಗಿತ್ತು. ದೇವಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಭಕ್ತರು ರಥವನ್ನು ಎಳೆದರು. ಬಳಿಕ ಸಂಜೆ ರಥವನ್ನು ಪುನಃ ಎಳೆಯಲಾಯಿತು.

ಇಷ್ಟಾರ್ಥ ಕರುಣಿಸುವ ದೇವಿ

ಮಕ್ಕಳ ಆರೋಗ್ಯ, ಸಂತಾನಭಾಗ್ಯ, ಜಾನುವಾರುಗಳು ಕಳೆದುಹೋದಾಗ ದುರ್ಗಾಂಬೆಗೆ ಭಕ್ತರು ಹರಕೆ ಸಲ್ಲಿಸುವ ಪದ್ಧತಿ ಇಂದಿಗೂ ಇದೆ. 20ನೇ ಶತಮಾನದಲ್ಲಿ ಪ್ಲೇಗ್ ಹರಡಿದಾಗ ಶೃಂಗೇರಿ ಜಹಗೀರು ಪ್ರದೇಶಗಳಲ್ಲೂ ವ್ಯಾಪಿಸಿತ್ತು. ಅಂದಿನ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನರಸಿಂಹಭಾರತೀ ಸ್ವಾಮೀಜಿ ಜನರ ದೀನಸ್ಥಿತಿಗೆ ಮರುಗಿ ತಾವೇ ದುರ್ಗಾಂಬೆ ಸ್ತೋತ್ರ ರಚಿಸಿ ಸ್ತುತಿಸಿದರು. ಅಂದಿನಿಂದ ಪ್ಲೇಗ್ ರೋಗ ಕಾಣಿಸಿಕೊಂಡಿಲ್ಲ ಎನ್ನುತ್ತಾರೆ ಭಕ್ತರು.