More

  ಯು-ಟರ್ನ್ 2ನಲ್ಲಿ ಪೂಜಾ ಉಡಾಫೆ 

  ಬೆಂಗಳೂರು: ಇತ್ತೀಚೆಗಷ್ಟೇ ‘ದಾರಿ ಯಾವುದಯ್ಯಾ ವೈಕುಂಠಕೆ..’ ಎಂದು ಹೊರಟಿದ್ದ ‘ತಿಥಿ’ ಖ್ಯಾತಿಯ ನಟಿ ಪೂಜಾ, ಇದೀಗ ಯು-ಟರ್ನ್ ತೆಗೆದುಕೊಂಡಿದ್ದಾರೆ. ಹಾಗಂತ ಅವರು ‘ದಾರಿ ಯಾವುದಯ್ಯಾ ವೈಕುಂಠಕೆ..’ ಚಿತ್ರದಿಂದ ವಿಮುಖರಾಗಿಲ್ಲ. ಅದರ ಜತೆಗೆ ಅವರೀಗ ಮತ್ತೊಂದು ಸಿನಿಮಾಗೂ ಒಪ್ಪಿಕೊಂಡಿದ್ದಾರೆ. ಅಂದರೆ, ‘ಯು ಟರ್ನ್ 2’ ಚಿತ್ರಕ್ಕೆ ನಾಯಕಿಯಾಗಿ ಪೂಜಾ ಆಯ್ಕೆ ಆಗಿದ್ದಾರೆ.

  ಆನಂದ್ ಸಂಪಂಗಿ ಅವರ ನಿರ್ಮಾಣ ಹಾಗೂ ಚಂದ್ರು ಓಬಯ್ಯ ನಿರ್ದೇಶನದ ‘ಯು-ಟರ್ನ್ 2’ ಚಿತ್ರದ ನಾಯಕಿ ಪಾತ್ರಕ್ಕೆ ಪೂಜಾ ಆಯ್ಕೆ ಅಂತಿಮವಾಗಿದೆ. ನಿರ್ದೇಶನ ಮಾಡುವ ಜತೆಗೆ ನಾಯಕರಾಗಿಯೂ ಚಂದ್ರು ಅಭಿನಯಿಸುತ್ತಿರುವ ಈ ಚಿತ್ರಕ್ಕೆ ಬೇರೆ ಒಬ್ಬರನ್ನು ನಾಯಕಿ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು.

  ಆದರೆ ಸಂಭಾವನೆ ವಿಚಾರದಲ್ಲಿ ಹೊಂದಾಣಿಕೆ ಆಗದ್ದರಿಂದ ಅವರ ಬದಲಿಗೆ ಪೂಜಾ ಅವರನ್ನು ಆರಿಸಿಕೊಳ್ಳಲಾಗಿದೆ ಎಂದಿದ್ದಾರೆ ನಿರ್ದೇಶಕರು. ‘ಚಿತ್ರದಲ್ಲಿನ ಈ ಪಾತ್ರ ನನ್ನ ನಿಜ ಜೀವನಕ್ಕೆ ಹತ್ತಿರವಾದಂಥದ್ದು. ಯಾವುದಕ್ಕೂ ಕೇರ್ ಮಾಡದ, ಉಡಾಫೆ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಚಿತ್ರದಲ್ಲಿ ನಾನು ಬುಲೆಟ್ ಚಲಾಯಿಸುವಂಥದ್ದೆಲ್ಲ ಇದೆ. ಆದರೆ ಪ್ರೀತಿಯ ವಿಷಯ ಬಂದಾಗ ತುಂಬ ಗೌರವಿಸುವ ಪಾತ್ರ ನನ್ನದು’ ಎನ್ನುತ್ತಾರೆ ನಾಯಕಿ ಪೂಜಾ.

  ಶೀಘ್ರದಲ್ಲೇ ಆರಂಭವಾಗಲಿರುವ ಈ ಚಿತ್ರದ ಶೂಟಿಂಗ್​ನಲ್ಲಿ ಪಾಲ್ಗೊಂಡು ಬಳಿಕ ‘ದಾರಿ ಯಾವುದಯ್ಯಾ ವೈಕುಂಠಕೆ’ ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದೇನೆ ಎನ್ನುತ್ತಾರೆ ಪೂಜಾ.

  ‘ಇದು ನನ್ನ ಚೊಚ್ಚಲ ನಿರ್ದೇಶನದ ಸಿನಿಮಾ. ನಾಯಕನಾಗಿಯೂ ಮೊದಲ ಸಿನಿಮಾ. ಆದರೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಅನುಭವ ಇದೆ. ಈ ಹಿಂದೆ ಕೆಲವು ಚಿತ್ರಗಳಲ್ಲಿ ನಟಿಸಿದ್ದೇನೆ’ ಎನ್ನುತ್ತಾರೆ ನಾಯಕ-ನಿರ್ದೇಶಕ ಚಂದ್ರು ಓಬಯ್ಯ.

  ‘‘ಯು-ಟರ್ನ್ 2’ ಎಂದಾಕ್ಷಣ ಈ ಹಿಂದಿನ ‘ಯು-ಟರ್ನ್’ ಚಿತ್ರಕ್ಕೂ ಇದಕ್ಕೂ ಸಂಬಂಧವಿಲ್ಲ. ನಮ್ಮ ಚಿತ್ರದಲ್ಲಿನ ಕಥೆಗೆ ಸೂಕ್ತ ಎನಿಸುತ್ತದೆ ಎಂಬ ಕಾರಣಕ್ಕೆ ಈ ಟೈಟಲ್ ಇಟ್ಟಿದ್ದೇವೆ. ಇದರ ಬಗ್ಗೆ ಆ ಚಿತ್ರದವರ ಆಕ್ಷೇಪವೇನೂ ಇಲ್ಲ. ಅದಾಗ್ಯೂ ಕಥೆಯಲ್ಲಿ ರೋಡ್ ಬರುತ್ತದೆಯಾದರೂ ಥೀಮ್ ವಿಭಿನ್ನವಾಗಿರಲಿದೆ.

  ಈ ಚಿತ್ರದಲ್ಲಿ ಹಾರರ್, ಲವ್, ಕಾಮಿಡಿ, ಸಸ್ಪೆನ್ಸ್ ಇದೆ’ ಎನ್ನುತ್ತಾರೆ ನಿರ್ದೇಶಕರು. ‘ಚಿತ್ರದ ಅರ್ಧದಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಇನ್ನು ನಾಯಕಿ ಅಭಿನಯದ ದೃಶ್ಯಗಳ ಶೂಟಿಂಗ್ ಬಾಕಿ ಇದ್ದು, ಫೆಬ್ರವರಿ ಮೊದಲ ವಾರದಲ್ಲಿ ಮತ್ತೆ ಚಿತ್ರೀಕರಣ ಆರಂಭಿಸಲಾಗುವುದು’ ಎನ್ನುತ್ತಾರೆ ಚಂದ್ರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts