More

    ರಾಜ ರಾಜ ಚೋಳನಿಗೆ ಉಘೇ ಉಘೇ; ವಿಜಯವಾಣಿ ಸಿನಿಮಾ ವಿಮರ್ಶೆ

    • ಚಿತ್ರ: ಪೊನ್ನಿಯಿನ್ ಸೆಲ್ವನ್ 2 (ಕನ್ನಡ)
    • ನಿರ್ದೇಶನ: ಮಣಿರತ್ನಂ
    • ನಿರ್ಮಾಣ: ಲೈಕಾ ಪ್ರೊಡಕ್ಷನ್ಸ್
    • ತಾರಾಗಣ: ಚಿಯಾನ್ ವಿಕ್ರಮ್ ಐಶ್ವರ್ಯಾ ರೈ, ಕಾರ್ತಿ, ಜಯಂ ರವಿ, ತ್ರಿಷಾ, ಜಯರಾಮ್ ಕಿಶೋರ್, ಪ್ರಕಾಶ್ ರಾಜ್, ಪ್ರಭು, ಶರತ್ ಕುಮಾರ್, ಐಶ್ವರ್ಯ ಲಕ್ಷ್ಮಿ ಮುಂತಾದವರು

    ಕಲ್ಕಿ ಕೃಷ್ಣಮೂರ್ತಿ 1955ರಲ್ಲಿ ಬರೆದಿದ್ದ ‘ಪೊನ್ನಿಯಿನ್ ಸೆಲ್ವನ್’ ಆಧಾರಿತ, ಅದೇ ಹೆಸರಿನ ಸಿನಿಮಾ. ಕಳೆದ ವರ್ಷ ಮೊದಲ ಭಾಗ ತೆರೆಗೆ ಬಂದು, 500 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿಕೊಂಡಿತ್ತು. ಇದೀಗ ಅದರ ಸೀಕ್ವಲ್ ಬಿಡುಗಡೆಯಾಗಿದೆ. ಶೇಕಡಾ 60ರಷ್ಟು ನೈಜ ಘಟನೆಯಾಧಾರಿತ ಚಿತ್ರವಿದು. ಮೊದಲ ಭಾಗದಲ್ಲಿ ಪ್ರೇಕ್ಷಕರಿಗೆ ಪಾತ್ರಗಳನ್ನು ಪರಿಚಯಿಸಿದ್ದ ಮಣಿರತ್ನಂ ಈ ಸೀಕ್ವಲ್​ನಲ್ಲಿ ‘ಪೊನ್ನಿಯಿನ್ ಸೆಲ್ವನ್’ಗೆ ಪಟ್ಟಾಭಿಷೇಕವಾಗುವ ಕಥೆ ಹೇಳಿದ್ದಾರೆ. ಸಾವಿರ ವರ್ಷಗಳ ಹಿಂದೆ ಚೋಳರು, ಪಲ್ಲವರು, ರಾಷ್ಟ್ರಕೂಟರು, ಸಿಂಹಳೀಯರ ನಡುವಿನ ಘರ್ಷಣೆ ಹೇಗಿತ್ತು? ಅದಕ್ಕೆ ಕಾರಣಗಳೇನು? ಒಂದೆಡೆ ರಾಜಧರ್ಮ ಮತ್ತೊಂದೆಡೆ ಚೋಳ ಸಾಮ್ರಾಜ್ಯವನ್ನು ವಶಪಡಿಸಿಕೊಳ್ಳಲು ಒಳಸಂಚು… ಅವುಗಳಿಂದ ಅರುಣ್​ವೋಳಿ ವರ್ಮನ್ ಅಲಿಯಾಸ್ ಪೊನ್ನಿಯಿನ್ ಸೆಲ್ವನ್ (ಜಯಂ ರವಿ) ಹೇಗೆ ಪಾರಾಗುತ್ತಾನೆ? ಆತನ ಜತೆ ನಿಲ್ಲುವವರಾರು? ಆತನ ವಿರುದ್ಧ ಹೋಗುವವರಾರು? ಆತ ಹೇಗೆ ರಾಜ ರಾಜ ಚೋಳನಾಗಿ, ಸಾಮ್ರಾಜ್ಯ ಸ್ಥಾಪಿಸಿ ಇತಿಹಾಸ ಸೃಷ್ಟಿಸುತ್ತಾನೆ ಎಂಬುದು ‘ಪಿಎಸ್ 2’ ಕಥೆ.

    ಸಾಮಾನ್ಯವಾಗಿ ಕನ್ನಡದಲ್ಲಿ ಡಬ್ ಆಗುವ ಸಿನಿಮಾಗಳು, ಬೆರಳೆಣಿಕೆಯಷ್ಟು ಚಿತ್ರಮಂದಿರಗಳಲ್ಲಷ್ಟೇ ಬಿಡುಗಡೆಯಾಗುವ ಕಾರಣ, ಚಿತ್ರತಂಡಗಳು ಗುಣಮಟ್ಟದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ‘ಪಿಎಸ್ 2’ ತಂಡ ಪರಭಾಷೆಗಳ ಡಬ್ಬಿಂಗ್​ನಲ್ಲೂ ಹೆಚ್ಚು ಗಮನ ಹರಿಸಿದೆ. ಪಾತ್ರಗಳ ಹೆಸರು ಕನ್ನಡಿಗರಿಗೆ ಹೊಸತು ಅನ್ನಿಸಿದರೂ, ಭಾವನೆ, ಕಥೆ, ಮೇಕಿಂಗ್, ಪ್ರತಿಯೊಬ್ಬರ ನಟನೆ ಚಿತ್ರವನ್ನು ಹತ್ತಿರವಾಗಿಸುತ್ತದೆ. ಎ.ಆರ್.ರೆಹ್ಮಾನ್ ಸಂಗೀತ, ಜಯಂತ್ ಕಾಯ್ಕಿಣಿ ಸಾಹಿತ್ಯದಲ್ಲಿ, ಹಾಡುಗಳು ಚಿತ್ರವನ್ನು ಮತ್ತಷ್ಟು ಆಪ್ತವಾಗಿಸುತ್ತವೆ. ಒಂದು ಸಾವಿರ ವರ್ಷಗಳ ಹಿಂದೆ ನಡೆದ ಘಟನೆಯನ್ನು, ನೈಜತೆಗೆ ಹತ್ತಿರವಾಗಿ ಪ್ರೇಕ್ಷಕರ ಮುಂದಿಡಲು ಮಣಿರತ್ನಂ ಪ್ರಯತ್ನಿಸಿರುವ ಕಾರಣ ಅಲ್ಲಲ್ಲಿ ನಿಧಾನ ಎನಿಸಬಹುದು. ಆದರೆ, ಮೊದಲ ಭಾಗಕ್ಕಿಂತ ಈ ಸೀಕ್ವಲ್ ವೇಗವಾಗಿದೆ. ಹಲವು ಟ್ವಿಸ್ಟ್​ಗಳಿಂದ ಕೂಡಿದೆ.

    15 ಮಂದಿ ನಾಯಕರು, ನಾಯಕಿಯರು ಒಂದೇ ಚಿತ್ರದಲ್ಲಿ ನಟಿಸುವುದು ಅಂದರೆ ಅದು ಸಾಮಾನ್ಯದ ಮಾತಲ್ಲ. ಅಂತಹ ದೊಡ್ಡ ತಾರಾಬಳಗದೊಂದಿಗೆ ಸಿನಿಮಾ ಮಾಡುವುದು ಇನ್ನೂ ಕಷ್ಟ. ಹೀಗಿರುವಾಗ ಎಲ್ಲರಿಗೂ ಸಮಾನ ಪ್ರಾಮುಖ್ಯತೆ ನೀಡುವಲ್ಲಿ ಮಣಿರತ್ನಂ ಗೆದ್ದಿದ್ದಾರೆ. ಆದಿತ್ಯ ಕರಿಕಾಳನ್ ಪಾತ್ರದಲ್ಲಿ ಚಿಯಾನ್ ವಿಕ್ರಮ್ ನಂದಿನಿ ಪಾತ್ರದಲ್ಲಿ ಐಶ್ವರ್ಯಾ ರೈ, ನಂಬಿ ಪಾತ್ರದಲ್ಲಿ ಜಯರಾಮ್ ಅರುಣ್​ವೋಳಿ ವರ್ಮನ್ ಆಗಿ ಜಯಂ ರವಿ ವಿಶೇಷವಾಗಿ ಗಮನ ಸೆಳೆಯುತ್ತಾರೆ. ಅದರಲ್ಲಂತೂ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ಐಶ್ವರ್ಯಾ ರೈ ಸೌಂದರ್ಯದಿಂದ ಮಾತ್ರವಲ್ಲ, ನಟನೆಯಿಂದಲೂ ಇಷ್ಟವಾಗುತ್ತಾರೆ. ವಿಎಫ್​ಎಕ್ಸ್​ಗಿಂತ ಹೆಚ್ಚು ನೈಜತೆಗೆ ಒತ್ತು ನೀಡಿರುವ ಕಾರಣ ಹೆಚ್ಚು ಆಡಂಬರವಿಲ್ಲದೆ ಸಿನಿಮಾ ಸರಳವಾಗಿ ಮೂಡಿಬಂದಿದೆ. ಮೊದಲ ಭಾಗ ನೋಡಿದವರಿಗೆ ಈ ಸೀಕ್ವಲ್ ಹೆಚ್ಚು ಇಷ್ಟವಾಗಲಿದೆ.

    ಭ್ರಷ್ಟ ಅಧಿಕಾರಿಗೆ 15 ವರ್ಷಗಳ ಬಳಿಕ 2 ವರ್ಷ ಸಜೆ, 60 ಲಕ್ಷ ರೂ. ದಂಡ!

    ಸಿಂಹವನ್ನೇ ಹೋಲುವ ಕರುವಿಗೆ ಜನ್ಮ ನೀಡಿದ ಹಸು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts