ಔಷಧೀಯ ಗುಣಗಳ ದಾಳಿಂಬೆ ಸಿಪ್ಪೆ

ದಾಳಿಂಬೆ ಹಣ್ಣಿನ ಸಿಪ್ಪೆಯ ಬಗೆಗೆ ತಿಳಿದುಕೊಳ್ಳುತ್ತಿದ್ದೆವು. ಇಂದಿನ ಅಂಕಣದಲ್ಲಿ ಇನ್ನಷ್ಟು ಮಾಹಿತಿ. ಇಲ್ಲಾಜಿಕ್ ಆಮ್ಲವು ದಾಳಿಂಬೆ ಸಿಪ್ಪೆಯಲ್ಲಿರುತ್ತದೆ. ಇದು ಚರ್ಮ ಕೋಶಗಳ ತೇವಾಂಶ ಕಾಪಾಡಲು, ಚರ್ಮವು ಒಣಗದಂತೆ ನೋಡಿಕೊಂಡು ಕೋಶಗಳ ಹಾನಿಯನ್ನು ತಡೆಯುತ್ತದೆ. ಸೂರ್ಯ ಕಿರಣಗಳಿಂದ ಚರ್ಮಕ್ಕೆ ಆಗಬಹುದಾದ ಹಾನಿ ತಪ್ಪಿಸುವಲ್ಲಿ ದಾಳಿಂಬೆ ಸಿಪ್ಪೆ ಅನುಕೂಲಕಾರಿ. ಚರ್ಮದ ಕ್ಯಾನ್ಸರ್ ಬರುವಂತಹ ಸಂಭವತೆಯನ್ನು ಕಡಿಮೆ ಮಾಡುತ್ತದೆ.

ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡಲು, ಕಪ್ಪು ಕಲೆಗಳನ್ನು ಹೋಗಲಾಡಿಸಲು ಇದು ಬಹುಪಕಾರಿಯಾಗಿದ್ದು, ಇದರ

ಪೇಸ್ಟ್​ನ್ನು ನೀರು ಅಥವಾ ಹಾಲಿನಲ್ಲಿ ಕಲಸಿ ಮುಖಕ್ಕೆ ಹಚ್ಚಿಕೊಳ್ಳಿ. ಹೊಸ ಚರ್ಮದ ಕೋಶಗಳ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ಇದರಲ್ಲಿನ ಆಂಟಿ ಬ್ಯಾಕ್ಟೀರಿಯಲ್ ಗುಣವು ಇನ್​ಫೆಕ್ಷನ್​ಅನ್ನು ಕಡಿಮೆ ಮಾಡುವುದರಿಂದ ಮೊಡವೆಯ ಸಮಸ್ಯೆ ಸಹ ನಿವಾರಣೆ ಆಗಲು ಸಹಾಯ ಮಾಡುತ್ತದೆ. ಫೇಸ್ ಪ್ಯಾಕ್ ಮಾಡಲು ದಾಳಿಂಬೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಿ. ಅದಕ್ಕೆ ನಿಂಬೆ ರಸ ಅಥವಾ ರೋಸ್ ವಾಟರ್ ಸೇರಿಸಿ ಮುಖಕ್ಕೆ ಲೇಪಿಸಿಕೊಳ್ಳುವುದು. ಸ್ವಲ್ಪ ಹೊತ್ತು ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳುವುದು. ಕೂದಲಿನ ಆರೋಗ್ಯಕ್ಕೂ ಸಹ ದಾಳಿಂಬೆ ಸಿಪ್ಪೆ ಬಹಳ ಒಳ್ಳೆಯದು. ದಾಳಿಂಬೆ ಸಿಪ್ಪೆಯನ್ನು ರುಬ್ಬಿ ರಸ ತೆಗೆದು ಆ ಸಾರವನ್ನು ಕೂದಲಿಗೆ ಹಾಕುವುದರಿಂದ ತಲೆಹೊಟ್ಟು ಸಮಸ್ಯೆ ಕಡಿಮೆ ಆಗುತ್ತದೆ.

ಮೂಳೆಗಳ ಆರೋಗ್ಯ ವರ್ಧನೆಗೆ ದಾಳಿಂಬೆ ಸಿಪ್ಪೆ ಒಳ್ಳೆಯದು. ಮೂಳೆಗಳ ಸಾಂದ್ರತೆಯ ನಷ್ಟವನ್ನು ತಪ್ಪಿಸುತ್ತದೆ. ಆಸ್ಟಿಯೋಪೋರೋಸಿಸ್ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಎರಡು ಚಮಚ ಒಣಗಿಸಿದ ದಾಳಿಂಬೆ ಪುಡಿಯನ್ನು ಬೆಚ್ಚಗಿನ ನೀರಿನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಅದಕ್ಕೆ ಸ್ವಲ್ಪ ನಿಂಬು ಹಾಗೂ ಬೇಕಾದಲ್ಲಿ ಸ್ವಲ್ಪ ಉಪ್ಪು ಸೇರಿಸಿ ರಾತ್ರಿ ಮಲಗುವ ಮೊದಲು ಕುಡಿಯಿರಿ. ಇದರಿಂದ ಮೂಳೆಗಳು ಬಲಹೀನವಾಗಿದ್ದಲ್ಲಿ ಸರಿಯಾಗುತ್ತದೆ.