ಚಾಟ್ನಿಯ ಪ್ರಾಮುಖ್ಯತೆ

ಉತ್ತರಿಸುವವರು: ಪೂರ್ಣಪ್ರಜ್ಞ ಬೇಳೂರು

ದಾಳಿಂಬೆಯನ್ನು ಸಾಂಪ್ರದಾಯಿಕವಾಗಿ ಬೆಳೆಯುವಾಗ ಯಾವ ರೀತಿ ಚಾಟ್ನಿ ಮಾಡುತ್ತಿದ್ದರು? ಅಂದಿಗೂ ಇಂದಿಗೂ ಇರುವ ವ್ಯತ್ಯಾಸಗಳೇನು?

| ಉಮೇಶ್ ಹೊಸಪೇಟೆ

ಗಿಡ ಸವರುವುದು ಅಥವಾ ಚಾಟ್ನಿ ಮಾಡುವುದು: ಚಾಟ್ನಿಯನ್ನು ಮಳೆಗಾಲಕ್ಕೆ ಮೊದಲೇ ಮಾಡುವುದು ಹಿಂದಿನ ಪದ್ಧತಿ. ಇಂದು ಹಣ್ಣುಗಳು ಯಾವ ಸಮಯಕ್ಕೆ ಬೇಕು ಎನ್ನುವುದನ್ನು ಆಧರಿಸಿ ಚಾಟ್ನಿ ಮಾಡಲಾಗುತ್ತದೆ. ಸಾಮಾನ್ಯವಾಗಿ ದಾಳಿಂಬೆ ಗಿಡಗಳನ್ನು ಬುಡದಲ್ಲಿ ಬರುವ ಮುಖ್ಯ ರೆಂಬೆಗಳೊಂದಿಗೆ ಪೊದೆಯಾಕಾರದಲ್ಲಿರುವಂತೆ ಬೆಳೆಸುತ್ತಾರೆ. ಆದರೆ, ಒಂದೇ ಮುಖ್ಯ ರೆಂಬೆಯ ಮೇಲೆ ಎಲ್ಲ ದಿಕ್ಕುಗಳಲ್ಲಿ ಪಸರಿಸಿದ ಉಪರೆಂಬೆಗಳಿರುವಂತೆ ಆಕಾರ ಕೊಟ್ಟು ಬೆಳೆಸುವುದು ಒಳ್ಳೆಯದೆಂದು ತಿಳಿದು ಬಂದಿದೆ. ಪೊದೆಯಾಕಾರದಲ್ಲಿ ಬೆಳೆಸಿದ ಸಸಿಗಳಲ್ಲಿ ನೆಲದಿಂದ ಕೇವಲ 3-4 ಮುಖ್ಯ ರೆಂಬೆಗಳಿರುವಂತೆ ನೋಡಿಕೊಳ್ಳಬೇಕು. ಕೊಂಬೆಗಳು ದಪ್ಪವಾಗಿರುವಂತೆ ನೋಡಿಕೊಳ್ಳುವುದು ಮುಖ್ಯ ಕೆಲಸ. ಕೊಂಬೆಗಳು ದಪ್ಪವಾಗಿದ್ದರೆ ದೊಡ್ಡ ಹಣ್ಣುಗಳು, ಚಿಕ್ಕದಾಗಿದ್ದರೆ ಸಣ್ಣ ಹಣ್ಣುಗಳು ಬಿಡುತ್ತವೆ. ತುದಿಯಲ್ಲಿ ಬಿಡುವ ಹಣ್ಣುಗಳೂ ಸಹ ಚಿಕ್ಕದಾಗುತ್ತವೆ. ಅದಕ್ಕಾಗಿ ಚಾಟ್ನಿಯು ಅತ್ಯಂತ ಮುಖ್ಯ. ಪ್ರಾರಂಭದಲ್ಲಿ ಕೊಂಬೆಗಳೆಲ್ಲ ದಪ್ಪದಾಗಿ ಬೆಳೆಯಲು ಮೂರು ತಿಂಗಳಿಗೊಮ್ಮೆ ಗೊಬ್ಬರ ಹಾಕಬೇಕಾಗುತ್ತದೆ. ಗಿಡಗಳು ದೊಡ್ಡದಾದ ಮೇಲೆ ವಾರ್ಷಿಕ ಎರಡು ಸಾರಿ ಅಥವಾ ಒಮ್ಮೆ ಮಾತ್ರ ಗೊಬ್ಬರ ಹಾಕಿದರೂ ಸಾಕಾಗುತ್ತದೆ.

ಹಿಂದೆಯೂ ಸಾಧ್ಯವಾದಷ್ಟು ಪೊದೆಗಳಾಗುವಂತೆ ಚಾಟ್ನಿ ಮಾಡುತ್ತಿದ್ದರು. ಪೊದೆಗಳನ್ನು ಮೊಟ್ಟೆಯ ಆಕಾರದಲ್ಲಿ ಇರುವಂತೆ ಸವರಲಾಗುತ್ತಿತ್ತು. ಆದರೆ, ಅಂದಿನ ತಳಿಗಳು ಮರಗಳಾಗುವ ಗುಣ ಹೊಂದಿದ್ದ ಕಾರಣ ಎತ್ತರವಾಗುವವರೆಗೆ ಕಾದು ಚಾಟ್ನಿ ಮಾಡುತ್ತಿದ್ದರು. ಕಲಾದಗಿಯಲ್ಲಿ ಸುಮಾರು ಎಂಟು ಅಡಿಗಳ ಎತ್ತರ ಇರುವಂತೆ ಚಾಟ್ನಿ ಮಾಡುವುದು ಪದ್ಧತಿ. ಅದೇ ಮಧುಗಿರಿಯಲ್ಲಿ ಮುಖ್ಯ ಕಾಂಡದಿಂದ ಹೊರ ಬರುವ ಕವಲುಗಳೆಲ್ಲ ಸಮ ಸಂಖ್ಯೆಯಲ್ಲಿರುವಂತೆ ನೋಡಿಕೊಳ್ಳುತ್ತಾರೆ. ಪಿಂದಿಗಳನ್ನು ನಿಯಂತ್ರಿಸಲು ಬೇರು ಕಡಿಯುವ ವಿಧಾನವನ್ನು ಮೊದಲಿಗೆ ಮಾಡುತ್ತಿದ್ದರು. ಈಗ ನೀರಿನ ನಿಯಂತ್ರಣದ ಮೂಲಕ ನಿರ್ವಹಿಸಲಾಗುತ್ತದೆ. ಗಿಡಗಳನ್ನು ಚಿಕ್ಕದಾಗಿಯೇ ಇರುವಂತೆ ನೋಡಿಕೊಂಡರೆ ನಿರ್ವಹಣೆ ಇನ್ನೂ ಸುಲಭ. ಹಕ್ಕಿಗಳು, ಕೀಟ ರೋಗಗಳ ನಿಯಂತ್ರಣಕ್ಕಾಗಿ ಕಾಗದದ ಟೋಪಿ ಹಾಕುವುದು, ಹತ್ತಿ ಬಟ್ಟೆಗಳನ್ನು ಗಿಡಕ್ಕೆ ಹೊದಿಸುವುದು, ಚಿಕ್ಕ ಬಲೆಗಳನ್ನು ಸುತ್ತ್ತುವುದು ಮುಂತಾದ ಉಪಾಯಗಳಿಗೆಲ್ಲ ಎತ್ತರದ ಗಿಡಗಳು ಉಪಯುಕ್ತವಲ್ಲ. ಹೀಗಾಗಿ ಕೊಂಬೆಗಳನ್ನು ಸವರುತ್ತ, ಬೇರುಗಳನ್ನು ಕತ್ತರಿಸುತ್ತ ಬೆಳವಣಿಗೆ ನಿಯಂತ್ರಿಸುವುದು ಅಗತ್ಯ.

ಚಾಟ್ನಿಗೂ ಮೊದಲು ಹಾಗೂ ಬಳಿಕ ಮಾಡಬೇಕಾದ್ದು…

  1. ದಾಳಿಂಬೆ ತೋಟವನ್ನು ಸ್ವಚ್ಛವಾಗಿಡುವದು, ರೋಗಪೀಡಿತ ಎಲೆ, ಕಾಂಡ ಮತ್ತು ಕಾಯಿಗಳನ್ನು ಕಿತ್ತು ಸುಡಬೇಕು. ಇದರಿಂದ ರೋಗ ಪ್ರಸಾರವನ್ನು ತಡೆಗಟ್ಟಬಹುದು.
  2. ಚಾಟ್ನಿಯ ಪೂರ್ವದಲ್ಲಿ ರೋಗ ತಗುಲಿದ ಎಲೆಗಳ ಸೋಂಕನ್ನು ಕಡಿಮೆ ಮಾಡಲು ಶೇ. 1ರ ಬೋಡೋ ದ್ರಾವಣ ಸಿಂಪಡಿಸುವದು. ನಂತರ ಒಂದು ಲೀಟರ್ ನೀರಿಗೆ 2.0 ರಿಂದ 2.5 ಇಥ್ರೇಲ್ ಬೆರೆಸಿ ಸಿಂಪಡಿಸಿ ಎಲೆ ಉದುರಿಸಬೇಕು, ಉದುರಿಸಿದ ಎಲೆಗಳನ್ನು ಸಂಗ್ರಹಿಸಿ ಸುಟ್ಟು ಹಾಕಬೇಕು.
  3. ಚಾಟ್ನಿ ಮಾಡುವಾಗ, ಕತ್ತರಿಯನ್ನು ಒಂದು ಲೀಟರ್ ನೀರಿಗೆ 25 ಮಿಲಿಲೀಟರ್ ಸೋಡಿಯಂ ಹೈಪೋಕ್ಲೋರೈಡ್ ಬೆರೆಸಿದ ದ್ರಾವಣದಲ್ಲಿ ಅದ್ದಿ ಚಾಟ್ನಿ ಮಾಡುವುದರಿಂದ ರೋಗಾಣುಗಳ ಹರಡುವಿಕೆಯನ್ನು ತಡೆಗಟ್ಟಬಹುದು.
  4. ಚಾಟ್ನಿ ಬಳಿಕ ನೆಲದ ಮೇಲೆ ಬಿದ್ದ ಅಳಿದುಳಿದ ಎಲೆಗಳ ಮೇಲೆ ಹೆಕ್ಟೇರಿಗೆ 20-25 ಕಿಲೋಗ್ರಾಂ ಬ್ಲೀಚಿಂಗ್ ಪೌಡರನ್ನು ಹರಡಬೇಕು.
  5. ಚಾಟ್ನಿ ನಂತರ ರೋಗ ತಗುಲಿದ ಗಿಡದ ಕಾಂಡಕ್ಕೆ ಸ್ಟ್ರೆಪ್ಟೋಸೈಕ್ಲೀನ್ ಅಥವಾ ಸ್ಟ್ರೆಪ್ಟೋಮೈಸಿನ್ ಸಲ್ಪೇಟ್ (0.5 ಗ್ರಾಂ) ಅಥವಾ ಬ್ರೋಮೋ ಅಥವಾ ನೈಟ್ರೋಪೇನ್ ಅಥವಾ ಡಯೋಲ್ (ಬ್ಯಾಕ್ಟ್ರಿನಾಶಕ್ 0.5 ಗ್ರಾಂ) ಮತ್ತು ತಾಮ್ರದ ಆಕ್ಸಿಕ್ಲೋರೈಡ್ (3.0 ಗ್ರಾಂ) ಒಂದು ಲೀಟರ್ ನೀರಿನಲ್ಲಿ ಬೆರೆಸಿ ಕಾಂಡಕ್ಕೆ ಲೇಪಿಸಬೇಕು. ಲೇಪನ ಸುಲಭವಾಗಲು ಕೆಂಪು ಹುರಿಮಂಜು ಅಥವಾ ಕೆಂಪಗಿನ ನುಣ್ಣನೆಯ ಮಣ್ಣನ್ನು ಸೇರಿಸಿಕೊಳ್ಳಬೇಕು. ನೀವು ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುವವರಾದರೆ ಯಾವುದೇ ಶಿಲೀಂಧ್ರನಾಶಕಗಳನ್ನೂ ಸಹ ಬಳಸಬಹುದು.

ಓದುಗರ ಪ್ರಶ್ನೆ

ದಾಳಿಂಬೆಯ ಕೊಯ್ಲನ್ನು ಯಾವಾಗ ಮಾಡಬೇಕು. ಅದು ಹಣ್ಣಾಗಿದ್ದು ತಿಳಿಯುವುದು ಹೇಗೆ? ಸ್ಥಳೀಯ ಮಾರುಕಟ್ಟೆಯಲ್ಲಿ ಯಾವಾಗಲೂ ಅರೆಹಣ್ಣಾಗಿರುವ ದಾಳಿಂಬೆಯೇ ಬರಲು ಕಾರಣವೇನು? ಅವು ರೋಗ ಪೀಡಿತವೇ?

| ಶಂಸುದ್ದೀನ್ ಹಣ್ಣು ಮಾರಾಟಗಾರ, ತುಮಕೂರು

Leave a Reply

Your email address will not be published. Required fields are marked *