ಮಾಲಿನ್ಯ ನಿಯಂತ್ರಣ ಅಗತ್ಯ

ಮಡಿಕೇರಿ: ಬ್ಯಾಟರಿ ಚಾಲಿತ ವಾಹನದಲ್ಲಿ ದೇಶದಾದ್ಯಂತ ಸಾವಿರಾರು ಕಿಲೋಮೀಟರ್ ಸಂಚರಿಸುವ ಮೂಲಕ ಕ್ಯಾನ್ಸರ್ ಕುರಿತು ಜಾಗೃತಿ ಸಂದೇಶ ಸಾರಿದ ತೆಲಂಗಾಣದ ಸರ್ಕಾರಿ ಆಸ್ಪತ್ರೆ ಅಧಿಕಾರಿ ಕಷ್ಣರೆಡ್ಡಿ ಅವರನ್ನು ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಸನ್ಮಾನಿಸಲಾಯಿತು.

ರೋಟರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಲಯ ಕಾರ್ಯದರ್ಶಿ ಎಚ್.ಟಿ. ಅನಿಲ್, ವಲಯ ಟೀಚ್ ಯೋಜನಾ ಸಮಿತಿ ಅಧ್ಯಕ್ಷ ಅಂಬೆಕಲ್ ವಿನೋದ್ ಕುಶಾಲಪ್ಪ ಎಂ.ವಿ. ಕೃಷ್ಣರೆಡ್ಡಿ ಅವರನ್ನು ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೃಷ್ಣರೆಡ್ಡಿ, ದೇಶಾದ್ಯಂತ ನಗರ ಪ್ರದೇಶಗಳು ಬೆಳೆಯುತ್ತಿರುವಂತೆಯೇ ಕ್ಯಾನ್ಸರ್‌ನಂತಹ ಮಾರಕ ರೋಗ ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಮಾಲಿನ್ಯವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬೇಕಾದ ಅಗತ್ಯವಿದೆ. ಇಲ್ಲದಿದ್ದಲ್ಲಿ ಮಾರಕ ರೋಗಗಳಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಎಚ್ಚರಿಸಿದರು.

ಲಂಡನ್ ವ್ಯಕ್ತಿಯೊಬ್ಬರು 23 ದಿನದಲ್ಲಿ 1,333 ಕಿ.ಮೀ. ಕ್ರಮಿಸಿದ್ದು, ತಾನು 9 ದಿನದಲ್ಲಿ 1,665 ಕಿ.ಮೀ. ಕ್ರಮಿಸಿದ್ದೇನೆ. ಬ್ಯಾಟರಿ ಚಾಲಿತ ವಾಹನದಲ್ಲಿ ಸಂಚರಿಸುವ ಮೂಲಕ ಕ್ಯಾನ್ಸರ್ ಮತ್ತು ಮಾಲಿನ್ಯ ನಿಯಂತ್ರಣ ಬಗ್ಗೆ ತಿಳಿವಳಿಕೆ ಮೂಡಿಸುತ್ತಿದ್ದೇನೆಂದು ಗಿನ್ನಿಸ್ ದಾಖಲೆಗೆ ಸೇರಿಸಲಾಗಿದೆ. ಬ್ಯಾಟರಿ ಚಾಲಿತ ವಾಹನದಲ್ಲಿ ವಿಶ್ವ ಪರ್ಯಟನೆ ನಡೆಸುವ ಚಿಂತನೆ ಹೊಂದಿದ್ದೇನೆ ಎಂದು ಹೇಳಿದರು.

ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಎಂ.ಆರ್. ಜಗದೀಶ್, ಕಾರ್ಯದರ್ಶಿ ಪ್ರಮೋದ್‌ಕುಮಾರ್ ರೈ , ಖಚಾಂಜಿ ಪ್ರಸಾದ್ ಗೌಡ, ಕ್ಲಬ್ ಸರ್ವೀಸ್ ನಿರ್ದೇಶಕಿ ಲೀನಾ ಪೂವಯ್ಯ, ಕೃಷ್ಣರೆಡ್ಡಿ ಅವರ ಪತ್ನಿ ಪ್ರಿಯಾ ಕೃಷ್ಣರೆಡ್ಡಿ ಇದ್ದರು.

Leave a Reply

Your email address will not be published. Required fields are marked *