ಲೋಕಸಭೆ ಚುನಾವಣೆ ಜತೆಗೇ ಆಂಧ್ರಪ್ರದೇಶ, ಸಿಕ್ಕಿಂ ಸೇರಿ 4 ರಾಜ್ಯಗಳ ವಿಧಾನಸಭೆಗೂ ಚುನಾವಣೆ?

ನವದೆಹಲಿ: ಮುಂಬರುವ 2019ರ ಲೋಕಸಭಾ ಚುನಾವಣೆಯೊಂದಿಗೆ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಹಾಗೂ ಸಿಕ್ಕಿಂ ವಿಧಾನಸಭೆ ಚುನಾವಣೆಯನ್ನು ನಡೆಸಲು ಚುನಾವಣೆ ಆಯೋಗ ನಿರ್ಧರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ನಾಲ್ಕು ರಾಜ್ಯಗಳ ವಿಧಾನಸಭೆ ಅವಧಿಯು 2019ರ ಮೇ, ಜೂನ್‌ನಲ್ಲಿ ಕೊನೆಯಾಗಲಿದ್ದು, ಅವಧಿಗೆ ಮುನ್ನವೇ ಕಳೆದ ತಿಂಗಳಷ್ಟೇ ವಿಧಾನಸಭೆ ವಿಸರ್ಜಿಸಿದ್ದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೂ ಕೂಡ ಸಾರ್ವತ್ರಿಕ ಚುನಾವಣೆ ಜತೆಯಲ್ಲಿಯೇ ಮತದಾನ ನಡೆಯಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ವಿಧಾನಸಭೆಗೆ ಲೋಕಸಭೆ ಚುನಾವಣೆಯ ಜತೆಜತೆಗೇ ಚುನಾವಣೆಯನ್ನು ನಡೆಸಲಿದೆ ಎನ್ನಲಾಗಿದ್ದು, ಜಮ್ಮು ಕಾಶ್ಮೀರ ವಿಧಾನಸಭೆ ವಿಸರ್ಜನೆಯಾದ ಆರು ತಿಂಗಳೊಳಗೆ ಚುನಾವಣೆ ನಡೆಸುವುದು ಚುನಾವಣಾ ಆಯೋಗದ ಯೋಜನೆಯಾಗಿದೆ ಎನ್ನಲಾಗಿದೆ.

2021ರ ಮೇಗೆ ಅವಧಿ ಪೂರ್ಣವಾಗಬೇಕಿದ್ದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ವಿಸರ್ಜನೆಯಾಗಿ ಮೇಗೆ ಆರು ತಿಂಗಳು ಪೂರ್ಣಗೊಳ್ಳಲಿದೆ. ಹಾಗಾಗಿ ಲೋಕಸಭೆ ಚುನಾವಣೆ ಜತೆಗೆ ಅಥವಾ ಅದಕ್ಕೂ ಮುನ್ನವೇ ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಯಬಹುದು, ಇದು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಗೆಂದು ರಾಜ್ಯದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಿದಾಗಲೇ ಏಕಕಾಲದಲ್ಲಿ ವಿಧಾನಸಭೆ ಚುನಾವಣೆ ನಡೆಯುವುದರಿಂದ ಚುನಾವಣಾ ಅಧಿಕಾರಿಗಳಿಗೆ ಅನುಕೂಲವಾಗಲಿದೆ ಎಂದು ಸರ್ಕಾರದ ಮೂಲಗಳು ಹೇಳಿದೆ.

ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆಗಳೂ ಕೂಡ ಈ ನಾಲ್ಕು ರಾಜ್ಯದ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯೊಂದಿಗೇ ನಡೆದರೆ 2019ರಲ್ಲಿ ಬೇರೆ ಯಾವುದೇ ಚುನಾವಣೆಗಳು ಇರುವುದಿಲ್ಲ. ಈ ಎರಡೂ ರಾಜ್ಯಗಳ ವಿಧಾನಸಭೆ ಅವಧಿಯು ನವೆಂಬರ್ 2019ರಲ್ಲಿ ಮುಗಿಯಲಿವೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದ್ದು, ಯಾವುದನ್ನೂ ಅಲ್ಲಗಳೆಯುವಂತಿಲ್ಲ. (ಏಜೆನ್ಸೀಸ್)

Leave a Reply

Your email address will not be published. Required fields are marked *