ಗೋಕಾಕ: ಗೋಕಾಕ 1934ರಲ್ಲಿ ಜಿಲ್ಲಾ ಕೇಂದ್ರವನ್ನಾಗಿಸುವ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, 90 ವರ್ಷಗಳಿಂದ ಹೋರಾಟ, ಧರಣಿ, ಪತ್ರಚಳವಳಿ ಸೇರಿದಂತೆ ಎಲ್ಲ ಪ್ರಯತ್ನ ಮಾಡಿದ್ದರೂ ಗೋಕಾಲ ಜಿಲ್ಲೆ ಕನಸು ಇನ್ನು ನನಸಾಗದೇ ಉಳಿದಿದೆ.
ಕಳೆದ ಕೆಲ ದಶಕಗಳಿಂದ ಜಿಲ್ಲಾ ವಿಭಜನೆ ವಿಷಯ ಸರ್ಕಾರದ ಮುಂದಿದೆ. ಸರ್ಕಾರ ಹೊಸ ಜಿಲ್ಲೆ ರಚನೆಗಾಗಿ ವಾಸುದೇವ, ಹುಂಡೇಕಾರ ಮತ್ತು ಗದ್ದಿಗೌಡರ ಆಯೋಗಗಳನ್ನು ನೇಮಿಸಿತ್ತು. ಆಯೋಗಗಳು ಜಿಲ್ಲಾ ವಿಭಜನೆ ಪ್ರಸ್ತಾಪವನ್ನು ಬೆಂಬಲಿಸುತ್ತ ಹೊಸ ಜಿಲ್ಲೆಯಾಗಲು ಗೋಕಾಕ ಸೂಕ್ತ ಹಾಗೂ ಸಪರ್ಮಕವಾಗಿದ್ದು ಎಂಬ ಅಧ್ಯಯನಪೂರ್ಣ ವರದಿ ಸಲ್ಲಿಸಿವೆ. ಗೋಕಾಕ ಜನತೆಯ ನ್ಯಾಯಯುತ ಬೇಡಿಕೆಯನ್ನು ಆಯೋಗಗಳ ವರದಿ ಪ್ರಸ್ತಾವನ್ನು ಗೌರವಿಸಿ ಅಂದಿನ ಮುಖ್ಯಮಂತ್ರಿ ದಿ.ಜೆ.ಎಚ್.ಪಟೇಲ ಗೋಕಾಕ ಜಿಲ್ಲಾ ರಚನೆಗೆ ಅಧಿಕತ ಮುದ್ರೆ ಒತ್ತಿದ್ದರು. ಆದರೆ ಭಾಷಾ ಹಾಗೂ ಗಡಿ ಸಮಸ್ಯೆ,ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಮಧ್ಯೆ ಈ ನಿರ್ಣಯ ಕಾರ್ಯರೂಪಕ್ಕೆ ಬರದೇ ಹಾಗೆಯೇ ಉಳಿದಿದೆ.
ಕಗ್ಗಂಟಾಗಿ ಉಳಿದ ಜಿಲ್ಲೆ ವಿಭಜನೆ: ಗೋಕಾಕ ಜಿಲ್ಲೆ ರಚನೆಯಾದರೆ ಇತರ ತಾಲೂಕಿನವರೂ ನಮಗೂ ಜಿಲ್ಲೆ ಸ್ಥಾನ ಬೇಕೆಂದು ಬೇಡಿಕೆ ಇಡುತ್ತಿದ್ದಾರೆ. ಆಯಾ ತಾಲೂಕಿನ ರಾಜಕಾರಣಿಗಳು, ಮುಖಂಡರು, ಸ್ಥಳೀಯರ ಧ್ವನಿಯಾಗಿ ಜಿಲ್ಲಾ ವಿಭಜನೆ ವಿಷಯವನ್ನು ಕಗ್ಗಂಟಾಗಿಸಿದ್ದಾರೆ. ಈಗಂತೂ ದೊಡ್ಡಜಿಲ್ಲೆ ವಿಭಜನೆಯಾಗಬೇಕೆಂದು ಎಲ್ಲರೂ ಒಪ್ಪುತ್ತಾರೆ. ಆದರೆ ಜಿಲ್ಲಾ ವಿಭಜನೆ ಕಗ್ಗಂಟನ್ನು ಬಿಡಿಸುವವರಾರು? ಎಂಬ ಪ್ರಶ್ನೆಯೇ ಜಟಿಲವಾಗಿದೆ.
ನಾಲ್ಕು ದಶಕಗಳಿಂದ ಜಿಲ್ಲಾ ಸ್ಥಾನದ ಹೋರಾಟಕ್ಕೆ ಇನ್ನೂ ಲ ಸಿಕ್ಕಿಲ್ಲ. ಸಿದ್ದರಾಮಯ್ಯ ಸೇರಿದಂತೆ ಹಲವು ಮುಖ್ಯಮಂತ್ರಿಗಳು ಜಿಲ್ಲೆಯ ಶಾಸಕರ ಸಭೆ ಕರೆದು ಶೀಘ್ರ ಜಿಲ್ಲಾ ರಚನೆ ಮಾಡುವುದಾಗಿ ಹೇಳುತ್ತಲೇ ಬಂದಿದ್ದಾರೆ ಸರ್ಕಾರ ವರದಿಗಳ ಆಧಾರದಲ್ಲಿ ಜಿಲ್ಲಾ ವಿಭಜನೆ ಮಾಡುವುದೇ ಅಥವಾ ಒತ್ತಡಕ್ಕೆ ಮಣಿದಾದರೂ ನಿರ್ಧಾರ ತೆಗೆದುಕೊಳ್ಳುವುದೇ ಕಾದುನೋಡಬೇಕು.
ಜಾರಕಿಹೊಳಿ ಕುಟುಂಬ ಮನಸ್ಸು ಮಾಡಿದರೆ ಜಿಲ್ಲೆ ವಿಭಜನೆ
ಬೆಳಗಾವಿ ಜಿಲ್ಲೆಯ ವಿಭಜನೆ ವಿಷಯ ಬಂದಾಗ ವಿವಿಧ ಪಕ್ಷಗಳ ಮುಖಂಡರು ಸ್ವಪ್ರತಿಷ್ಠೆ ಮರೆತು ಪ್ರತಿಭಟನೆಗಳನ್ನು ಬೆಂಬಲಿಸಿದ್ದಾರೆ. ಗೋಕಾಕ ಜಿಲ್ಲೆ ಮಾಡಲು ಗೆಜೆಟ್ ನೋಟಿಪಿಕೇಷನ್ ಆಗಿದ್ದು, ಅದನ್ನು ತಡೆಹಿಡಿಯಲಾಗಿದೆ. ಇದರಲ್ಲಿ ರಾಜಕೀಯ ಪಿತೂರಿಯಿದೆ ಎಂದು ಕೆಲ ಮುಖಂಡರು ಹೇಳಿದ್ದಾರೆ. ಆದರೆ, ಕೆಲವರು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮನಸ್ಸು ಮಾಡಿದರೆ ಸಂಜೆಯೊಳಗೆ ಗೋಕಾಕ ಜಿಲ್ಲೆಯಾಗುತ್ತದೆ ಎಂದು ಹೇಳುತ್ತಾರೆ. ಅದೇ ರೀತಿ ಈ ಹಿಂದೆ ನಡೆದ ಹೋರಾಟದಲ್ಲಿ ಸತೀಶ ಜಾರಕಿಹೊಳಿ ಪಾಲ್ಗೊಂಡು ಕೆಲವೊಬ್ಬರು ಬಾಳ ಮಾತಾಡಿ, ಏನೂ ಕೆಲಸ ಮಾಡಂಗಿಲ್ಲ. ಕೆಲವೊಬ್ಬರು ಮಾತಾಡಿ ಸ್ವಲ್ಪ ಕೆಲಸ ಮಾಡ್ತಾರ. ಕೆಲವರು ಏನೂ ಮಾತಾಡಲ್ಲ ಬಾಳ ಕೆಲಸ ಮಾಡ್ತಾರ. ಅದರಲ್ಲಿ ಮೂರನೇ ಗುಂಪಿಗೆ ಸೇರಿದವ ನಾನು. ಗೋಕಾಕದಲ್ಲಿ ಹುಟ್ಟಿ ಗೋಕಾಕ ಹೆಸರು ದಿಲ್ಲಿಯಲ್ಲಿ ವಿಜಂಭಿಸಬೇಕೆಂದು ಬಯಸುವವ. ಜಿಲ್ಲೆಯಾಗಬೇಕೆಂಬ ಬಯಕೆ ನನಗೆ ಅಪಾರವಾಗಿದೆ ಎಂದು ಹೇಳಿದ್ದರು. ಆದರೆ, ಆಗ ಅವರು ಆಡಿದ ಮಾತುಗಳು ಇಂದಿಗೂ ಈಡೇರಿಲ್ಲ. ಸದ್ಯ ಅವರದ್ದೇ ಸರ್ಕಾರ ಇದೆ. ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಇದಷ್ಟೇ ಅಲ್ಲದೇ ಜಾರಕಿಹೊಳಿ ಕುಟುಂಬದಲ್ಲಿ ಇಬ್ಬರು ಶಾಸಕರು, ಒಬ್ಬರು ಸಚಿವರು, ಒಬ್ಬರು ಸಂಸದರು, ವಿಪ ಸದಸ್ಯರಿದ್ದಾರೆ. ಹೀಗಾಗಿ ಇವರೆಲ್ಲರ ಬಲದಿಂದ ಗೋಕಾಕ ಜಿಲ್ಲೆ ಆಗುತ್ತದೆ. ಇವರು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಜನರ ಅಭಿಪ್ರಾಯವಾಗಿದೆ.
| ದಿಲೀಪ ಮಜಲೀಕರ ಗೋಕಾಕ