ಮಗನ ಸ್ಪರ್ಧೆ ವಿರೋಧಕ್ಕೆ ಮಹತ್ವ ನೀಡಲ್ಲ

ಶೃಂಗೇರಿ: ನಿಖಿಲ್ ರಾಜಕೀಯಕ್ಕೆ ಬರಬೇಕು ಎನ್ನುವವರೂ ಇರುವಂತೆ ಬರಬಾರದೆನ್ನುವವರೂ ಇರುವುದರಿಂದ ಇದಕ್ಕೆ ಹೆಚ್ಚಿನ ಮಹತ್ವ ಕೊಡಬೇಕಾಗಿಲ್ಲ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಶ್ರೀಮಠದಲ್ಲಿ ಚಂಡಿಕಾ ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡುವಾಗ, ಸಾಮಾಜಿಕ ಜಾಲತಾಣದಲ್ಲಿ ನಿಖಿಲ್ ಗೋಬ್ಯಾಕ್ ಎಂಬ ಶೀರ್ಷಿಕೆ ಇಟ್ಟುಕೊಂಡು ಅಪಪ್ರಚಾರದ ಸ್ಟೇಟಸ್ ಹಾಕಿರುವುದು ವೈರಲ್ ಆಗಿರುವುದನ್ನು ಪ್ರಸ್ತಾಪಿಸಿದರು.

ವೋಟ್ ಹಾಕುವವರು ಎಲ್ಲೋ ಇದ್ದರೆ ಈ ಸಾಮಾಜಿಕ ಜಾಲತಾಣವನ್ನು ವ್ಯವಸ್ಥಿತಗೊಳಿಸುವವರು ಇನ್ನೆಲ್ಲೋ ಇದ್ದು, ನಮ್ಮ ಪಕ್ಷದ ಮೇಲೆ ವಿಶ್ವಾಸ ಇರುವವರು ನಮಗೇ ವೋಟು ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಒಟ್ಟಾಗಿ ಹೋರಾಟಕ್ಕೆ ಒಳ್ಳೆಯ ಜಯ ಸಿಗುವುದೆಂಬ ವಿಶ್ವಾಸ ನನಗಿದೆ ಎಂದರು.

ಚನ್ನಪಟ್ಟಣದಲ್ಲಿ ಅನುಮಾನಸ್ಪದವಾಗಿ ಕಾರಿನಲ್ಲಿ ಬಂದೂಕು ಹಿಡಿದೊಯ್ದ ಪ್ರಕರಣದ ಬಗ್ಗೆ ಪ್ರಶ್ನಿಸಿದಾಗ, ಸಾರ್ವಜನಿಕರ ಸ್ಥಳದಲ್ಲಿ ಯಾರಾದರೂ ಬಂದೂಕು ಹಿಡಿದು ಓಡಾಡುತ್ತಿದ್ದಲ್ಲಿ ಅವರನ್ನು ಪೊಲೀಸರು ನಿಯಂತ್ರಿಸುತ್ತಾರೆ. ಜನರನ್ನು ಭಯಭೀತಗೊಳಿಸಲು ಯಾರಾದರೂ ಪ್ರಯತ್ನ ಮಾಡಿದಲ್ಲಿ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದರು.

ನಾಡಿನ ಜನತೆಗೆ ಒಳಿತಾಗಲೆಂದು ಪ್ರಾರ್ಥಿಸಲು ಶೃಂಗೇರಿಗೆ ಬಂದಿದ್ದೇವೆ. ರಾಜ್ಯದಲ್ಲಿ ಹಲವು ಕಡೆ ಬರಗಾಲವಿದ್ದು ಉತ್ತಮ ಮಳೆ-ಬೆಳೆ ಆಗಲೆಂದು ತಾಯಿ ಶಾರದೆಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.

ಜೆಡಿಎಸ್ ವರಿಷ್ಠರು ಕಾರ್ಯಕರ್ತರ ಜತೆ ಚರ್ಚೆ ಮಾಡಿದ ನಂತರವೇ ಮಂಡ್ಯದ ಲೋಕಸಭಾ ಚುನಾವಣೆಗೆ ನನ್ನನ್ನು ಸ್ಪರ್ಧಿಸಲು ಆಯ್ಕೆ ಮಾಡಿದ್ದಾರೆ. ಮಂಡ್ಯದ ಜನತೆಯ ನಾಡಿ ಮಿಡಿತವನ್ನು ನಾನು ಅರ್ಥಮಾಡಿಕೊಂಡಿದ್ದು ಅವರ ಸೇವೆಗೆ ನಾನು ಸಿದ್ಧನಾಗಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.

ನಮ್ಮ ಕುಟಂಬಕ್ಕೂ ಶೃಂಗೇರಿ ಶಾರದಾ ಪೀಠಕ್ಕೂ ಐದು ದಶಕಗಳ ನಂಟಿದೆ. ಹಾಗಾಗಿ ಜಗದ್ಗುರುಗಳ ಮತ್ತು ಜಗನ್ಮಾತೆಯ ಆಶೀರ್ವಾದ ಪಡೆಯಲು ಬಂದಿದ್ದೇವೆ. ಶ್ರೀಪೀಠದ ಪೂರ್ಣಾನುಗ್ರಹ ನನ್ನ ತಂದೆಯವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದೆ ಎಂಬುದು ನನ್ನ ನಂಬಿಕೆಯಾಗಿದೆ ಎಂದರು.

ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ದೇವರ ದರ್ಶನವನ್ನು ಪಡೆದು, ಗುರುಗಳ ಆಶೀರ್ವಾದದಿಂದ ಮನಸ್ಸಿಗೆ ನೆಮ್ಮದಿ ಸಿಕ್ಕಿದೆ ಎಂದರು. ಮಂಡ್ಯದ ಜನರು ನಿಖಿಲ್ ಅಭ್ಯರ್ಥಿ ಆಗಬೇಕು ಎಂದು ಬಯಸಿದ್ದಾರೆ. ಕಳೆದ ಮೇನಲ್ಲಿ ನಡೆದ ಮಂಡ್ಯದ ಉಪಚುನಾವಣೆಯಲ್ಲಿ ನಿಖಿಲ್ ಸಕ್ರಿಯವಾಗಿ ಪಾಲ್ಗೊಂಡಿದ್ದ. ಮಂಡ್ಯದ ಜನರು ನಿಖಿಲ್ ಮೇಲೆ ವಿಶ್ವಾಸ ವ್ಯಕ್ತಪಡಿಸಿ, ಸ್ಪರ್ಧಿಸುವಂತೆ ಒತ್ತಾಯಿಸಿದ್ದರಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ನಿಖಿಲ್ ಅಭ್ಯರ್ಥಿಯಾಗುವುದನ್ನು ಒಪ್ಪಿದರು. ನಿಖಿಲ್ ರಾಜಕೀಯಕ್ಕೆ ಬರಬೇಕೆಂಬ ಇಚ್ಛೆ ನಮ್ಮದಾಗಿರಲಿಲ್ಲ. ಜನರ ಅಭಿಪ್ರಾಯ, ಒತ್ತಡವನ್ನು ಒಪ್ಪಿಕೊಂಡಿದ್ದೇವೆ ಎಂದರು.