Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಬಂದ್ ಪಾಲಿಟಿಕ್ಸ್​ಗೆ ಆಕ್ರೋಶ

Tuesday, 23.01.2018, 3:06 AM       No Comments

ಬೆಂಗಳೂರು: ಉತ್ತರ ಕರ್ನಾಟಕದ ದಾಹ ತಣಿಸುವ ಮಹದಾಯಿ ನೀರಿಗೆ ಆಗ್ರಹಿಸಿ ಜ.25ರಂದು ಕರೆ ನೀಡಲಾಗಿರುವ ‘ಕರ್ನಾಟಕ ಬಂದ್’ ಹಾಗೂ ಫೆ. 4ರ ಬೆಂಗಳೂರು ಬಂದ್ ರಾಜಕೀಯಕ್ಕೆ ರಾಜ್ಯಾದ್ಯಂತ ಜನಾಕ್ರೋಶ ವ್ಯಕ್ತವಾಗಿದೆ. ಕೋಟ್ಯಂತರ ಜನರ ಜೀವನಾಧಾರವಾಗುವ ಮಹದಾಯಿ ರಾಜ್ಯಕ್ಕೆ ಹರಿಯಲೇಬೇಕೆಂಬ ಹೋರಾಟಗಾರರ ಉದ್ದೇಶಕ್ಕೆ ಎಲ್ಲರ ಸಹಮತವಿದ್ದರೂ ಸಂಬಂಧಪಟ್ಟ ಎಲ್ಲರ ಅಭಿಪ್ರಾಯ ಆಲಿಸದೆ, ಸಮಸ್ಯೆ-ಸವಾಲುಗಳ ಬಗ್ಗೆ ರ್ಚಚಿಸದೆ ಒಂದೇ ವಾರದ ಅವಧಿಯಲ್ಲಿ ಎರಡೆರಡು ಬಂದ್​ಗೆ ಕರೆಕೊಟ್ಟಿರುವ ನಿರ್ಧಾರದ ಹಿಂದಿರುವ ‘ಒತ್ತಡವೇನೆಂಬ’ ಪ್ರಶ್ನೆ ಉದ್ಭವಿಸಿದೆ. ಈಗಾಗಲೇ 2 ವರ್ಷದಲ್ಲಿ 11 ಬಂದ್​ಗೆ ಸಾಕ್ಷಿಯಾಗಿರುವ ರಾಜ್ಯದಲ್ಲಿ ಈ ಬಾರಿ ಸರ್ಕಾರವೇ ನೇರವಾಗಿ ಬಂದ್ ಬೆಂಬಲಿಸುತ್ತಿರುವುದು ಬಿಜೆಪಿಯ ಆಕ್ರೋಶಕ್ಕೆ ಗುರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕರ್ನಾಟಕ ಪ್ರವಾಸದ ಸಂದರ್ಭದಲ್ಲೇ ಬಂದ್​ಗೆ ಕರೆಕೊಟ್ಟಿರುವುದರ ಹಿಂದೆ ಸಿದ್ದರಾಮಯ್ಯ ಸರ್ಕಾರದ ಕೈವಾಡವಿದೆ ಎಂದು ಆರೋಪಿಸಿರುವ ಬಿಜೆಪಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಭೇಟಿ ವೇಳೆ ಬಂದ್ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಒಮ್ಮತವಿಲ್ಲ: ಒಂದೆಡೆ ಕಾಂಗ್ರೆಸ್-ಬಿಜೆಪಿ ಕೆಸರೆರಚಾಟ ನಡೆಯುತ್ತಿದ್ದರೆ ಮತ್ತೊಂದೆಡೆ ಜ.25ಕ್ಕೆ ಬಂದ್​ಗೆ ಕರೆ ನೀಡುವ ವಿಷಯದಲ್ಲಿ ಕನ್ನಡಪರ ಸಂಘಟನೆಗಳಲ್ಲೇ ಒಮ್ಮತವಿಲ್ಲ. ಕೆಲ ಸಂಘಟನೆಗಳು ಬಂದ್​ಗೆ ಕರೆ ನೀಡಿದ್ದರೆ ಮತ್ತೆ ಕೆಲವು ಈಗ ಬಂದ್​ನ ಅಗತ್ಯವೇ ಇಲ್ಲ. ನಾವು ಬಂದ್​ಗೆ ಬೆಂಬಲ ಸೂಚಿಸುವುದಿಲ್ಲ ಎಂದಿವೆ.

ವಿರೋಧ ಏಕೆ?

ಕಳೆದ 2 ವರ್ಷಗಳಲ್ಲಿ ನೀರಾವರಿ ಸೇರಿ ವಿವಿಧ ವಿಚಾರಗಳಿಗಾಗಿ 11 ಬಾರಿ ಕರ್ನಾಟಕ ಬಂದ್ ಆಚರಿಸಲಾಗಿದೆ. ಬಂದ್​ನಿಂದಾಗಿ ಸಾರ್ವಜನಿಕರಿಗೆ ತೊಂದರೆ ಹಾಗೂ ಆರ್ಥಿಕ ನಷ್ಟವಾಗಿದ್ದನ್ನು ಬಿಟ್ಟರೆ ಹೋರಾಟದ ಉದ್ದೇಶಗಳು ರ್ತಾಕ ಅಂತ್ಯ ಕಂಡಿಲ್ಲ. ಇದೀಗ ಮತ್ತೆ ಬಂದ್ ಸಿದ್ಧತೆ ನಡೆಸಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ. ಪದೇಪದೆ ಬಂದ್ ನಡೆಸುವ ಅಗತ್ಯವಿದೆಯೇ ಎಂಬುದು ಪ್ರಜ್ಞಾವಂತ ನಾಗರಿಕರ ಪ್ರಶ್ನೆಯಾಗಿದೆ.

ಪ್ರಯೋಜನ ಶೂನ್ಯ

2016ರಲ್ಲಿ ಅತೀ ಹೆಚ್ಚು ಬಂದ್​ಗಳಾಗಿವೆ. ಕಾವೇರಿ ನ್ಯಾಯಾಧಿಕರಣ ವಿಚಾರವಾಗಿ ಬಂದ್​ಗಳು, ಕಾರ್ವಿುಕರ ಬೇಡಿಕೆಗಳಿಗಾಗಿ ಭಾರತ ಬಂದ್, ನೋಟು ಅಮಾನ್ಯೀಕರಣ ವಿರೋಧಿಸಿ ಬಂದ್, ನೂತನ ಭವಿಷ್ಯ ನಿಧಿ ಕಾಯ್ದೆ ವಿರೋಧಿಸಿ ಗಾರ್ವೆಂಟ್ಸ್ ನೌಕರರ ಪ್ರತಿಭಟನೆ ಇತ್ಯಾದಿ ನಡೆದಿವೆ. 2016ರಲ್ಲಿ ಕಾವೇರಿ ಗಲಭೆಯಿಂದಾಗಿ ಐದು ದಿನಗಳ ಕಾಲ ಬೆಂಗಳೂರು ಬಂದ್ ಆದ ಹಿನ್ನೆಲೆಯಲ್ಲಿ 25 ಸಾವಿರ ಕೋಟಿ ರೂ. ಆರ್ಥಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿತ್ತು. 2017ರಲ್ಲಿ ಎರಡು ಬಾರಿ ಕರ್ನಾಟಕ ಬಂದ್​ಗೆ ಕರೆ ನೀಡಲಾಗಿತ್ತು.

ಮಹದಾಯಿ ಹೋರಾಟವನ್ನು ಇಡೀ ರಾಜ್ಯ ಬೆಂಬಲಿಸಿದೆ. ಇದಕ್ಕಾಗಿ ನಡೆದಿರುವ ಬಂದ್​ಗಳಿಗೆ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರೂ ಆಗಿರುವ ಪ್ರಯೋಜನವೆಷ್ಟು? ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಹೋರಾಟಗಳು ಯಶಸ್ವಿಯಾಗಿದ್ದರೂ ಈ ವಿಚಾರದಲ್ಲಿ ಆಡಳಿತಾತ್ಮಕ ನಿರ್ಧಾರಗಳು ಆಗಿಲ್ಲ. ವಾಸ್ತವ ಹೀಗಿರುವಾಗ, ಪದೇಪದೆ ಬಂದ್ ಕರೆ ನೀಡುತ್ತಿರುವ ಬಗ್ಗೆ ಹಲವು ಹೋರಾಟಗಾರರೇ ಅಸಮಾಧಾನ ಹೊರಹಾಕಿದ್ದಾರೆ.

ಹೊಟ್ಟೆಗೆ ತಣ್ಣೀರು ಬಟ್ಟೆ

ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ದಿನದ ಆದಾಯವನ್ನು ನಂಬಿಕೊಂಡಿವೆ. ಒಂದು ದಿನದ ಬಂದ್ ಆಚರಣೆ ಅನೇಕರ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕುತ್ತದೆ. ಬೀದಿಬದಿ ವ್ಯಾಪಾರ, ಪ್ರವಾಸೋದ್ಯಮ, ಆಹಾರೋದ್ಯಮ ಸೇರಿ ಅನೇಕ ಕ್ಷೇತ್ರಗಳು ಇದರಿಂದ ಕಷ್ಟ ‘ನಷ್ಟ ಅನುಭವಿಸಬೇಕಾಗುತ್ತದೆ.

ಮುಷ್ಕರಗಳಿಗೆ ಲೆಕ್ಕವೇ ಇಲ್ಲ

ಸಾರ್ವತ್ರಿಕ ಬಂದ್ ಆಚರಣೆಗಳು ಒಂದೆಡೆಯಾದರೆ ಮತ್ತೊಂದೆಡೆ ವಿವಿಧ ಕ್ಷೇತ್ರಗಳಲ್ಲಿನ ಸಮಸ್ಯೆಗಳಿಂದಾಗಿ ನಡೆದ ಮುಷ್ಕರಗಳಿಗೆ ಲಕ್ಕವೇ ಇಲ್ಲ. ವೇತನ ಪರಿಷ್ಕರಣೆಗಾಗಿ ಸಾರಿಗೆ ನೌಕರರ ಮುಷ್ಕರ, ಖಾಸಗಿ ಆಸ್ಪತ್ರೆಗಳ ದರ ನಿಗದಿ ವಿಚಾರವಾಗಿ ಸರ್ಕಾರದ ಕ್ರಮ ಖಂಡಿಸಿ ವೈದ್ಯರ ಮುಷ್ಕರ ಸೇರಿ ಅನೇಕ ಹೋರಾಟಗಳು ನಡೆದಿವೆ

ಮಹದಾಯಿ ಮತ್ತು ಕಳಸಾ ಬಂಡೂರಿ ನಾಲೆ ಯೋಜನೆ ವಿವಾದ ಬಗೆಹರಿಸಲು ಪ್ರಧಾನಿ ಅವರು ಮಧ್ಯಸ್ಥಿಕೆ ವಹಿಸಬೇಕು. ಇಲ್ಲದಿದ್ದರೆ ನಿರಂತರ ಹೋರಾಟ ನಡೆಸಲಾಗುವುದು. ಈ ವಿಚಾರವಾಗಿ ಕನ್ನಡ ಸಂಘಟನೆಗಳು ಜ.25 ರಂದು ಕರ್ನಾಟಕ ಬಂದ್ ನಡೆಸುವುದು ಖಚಿತ.

| ವಾಟಾಳ್ ನಾಗರಾಜ್- ಮಾಜಿ ಶಾಸಕ

ಜ. 25ರಂದು ಕರ್ನಾಟಕ ಬಂದ್ ಹಾಗೂ ಫೆ. 4ರಂದು ಬೆಂಗಳೂರು ಬಂದ್​ಗೆ ಕರೆ ನೀಡಿರುವುದರ ಹಿಂದೆ ರಾಜ್ಯ ಸರ್ಕಾರ ಇದೆ. ಇದು ಅವರ ಕುತಂತ್ರ ರಾಜಕೀಯದ ದ್ಯೋತಕವಾಗಿದೆ. ಫೆ. 4ರಂದು ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅಂದು ಬಂದ್​ಗೆ ಕರೆ ನೀಡಿರುವುದು ಸರಿಯಲ್ಲ. ಕುತಂತ್ರ ರಾಜಕಾರಣ ಬಹಳ ದಿನ ನಡೆಯುವುದಿಲ್ಲ. ಜನರು ತಕ್ಕ ಪಾಠ ಕಲಿಸುತ್ತಾರೆ.

| ಜಗದೀಶ್ ಶೆಟ್ಟರ್- ವಿಧಾನಸಭೆ ವಿಪಕ್ಷ ನಾಯಕ

ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕನ್ನಡಪರ ಸಂಘಟನೆಗಳ ಹೋರಾಟದ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂಬ ಆರೋಪ ಸತ್ಯಕ್ಕೆ ದೂರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡುವುದು ಸಂಘಟನೆಗಳ ಹಕ್ಕು. ನೆಲ, ಜಲ ಮತ್ತು ಭಾಷೆ ವಿಚಾರದಲ್ಲಿ ಕನ್ನಡಪರ ಸಂಘಟನೆಗಳು ಹೋರಾಟ ಮಾಡಿಕೊಂಡು ಬಂದಿವೆ. ಕಾಂಗ್ರೆಸ್ ವಿರುದ್ಧ ಸಹ ಹೋರಾಟ ಮಾಡಿದ್ದಾರೆ. ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ.

|ಡಿ.ಕೆ.ಶಿವಕುಮಾರ್- ಇಂಧನ ಸಚಿವ

 ಮಹದಾಯಿ ವಿಚಾರವಾಗಿ ಕರೆ ನೀಡಿರುವ ಬಂದ್ ಸಂಬಂಧ ಕರವೇ ನಿಲುವು ಏನಾಗಿರಬೇಕೆಂಬುದನ್ನು ತೀರ್ವನಿಸಲು ಜ. 24 ರಂದು ಸಭೆ ನಡೆಸಲಾಗುತ್ತಿದೆ. ಪದೇಪದೆ ಬಂದ್ ಆಚರಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿಯೇ ಹೋರಾಟಗಳಲ್ಲಿ ಕರವೇ ಮುಂಚೂಣಿಯಲ್ಲಿದ್ದರೂ ಬಂದ್​ಗಳ ವಿಚಾರದಲ್ಲಿ ಅಂತರ ಕಾಯ್ದುಕೊಂಡಿದೆ.

|ಟಿ.ಎ.ನಾರಾಯಣಗೌಡ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ

 

ಬಂದ್​ಗೆ ಬೆಂಬಲವಿಲ್ಲ

ಜ.25ರಂದು ಕರೆ ನೀಡಿರುವ ಕರ್ನಾಟಕ ಬಂದ್​ಗೆ ವಾಟಾಳ್ ಪಕ್ಷ ಹಾಗೂ ಕರ್ನಾಟಕ ಸಂಘಟನೆಗಳ ಒಕ್ಕೂಟದಲ್ಲಿ ಪರ-ವಿರೋಧ ವ್ಯಕ್ತವಾಗಿದೆ. ಮಹದಾಯಿ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ ವಾಟಾಳ್ ನಾಗರಾಜ್ ಕರೆ ನೀಡಿರುವ ಬಂದ್​ಗೆ ಕರ್ನಾಟಕ ಸಂಘಟನೆ ಒಕ್ಕೂಟ ಬೆಂಬಲ ನೀಡುವುದಿಲ್ಲ ಎಂದು ಒಕ್ಕೂಟದ ಅಧ್ಯಕ್ಷ ನಾಗೇಶ್ ಹೇಳಿದ್ದಾರೆ.

ಆರೋಪ-ಪ್ರತ್ಯಾರೋಪ

ಜ.25ರಂದು ಮೈಸೂರಿನಲ್ಲಿ ನಡೆಯುವ ಪರಿವರ್ತನಾ ರ‍್ಯಾಲಿ ಸಮಾವೇಶಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆಗಮಿಸುತ್ತಿದ್ದಾರೆ. ರ‍್ಯಾಲಿ ಯಶಸ್ವಿಯಾಗಬಾರದೆಂದು ಸರ್ಕಾರಿ ಪ್ರಾಯೋಜಿತ ಬಂದ್ ನಡೆಸಲಾಗುತ್ತಿದೆ ಎಂದು ಮೈಸೂರಲ್ಲಿ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ. ಈ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತೀಕ್ಷ ್ಣವಾಗಿ ಪ್ರತಿಕ್ರಿಯಿಸಿದ್ದು, ಅವರಿಗೆ ಸಾಮಾನ್ಯ ಜ್ಞಾನ- ಬುದ್ಧಿ ಇದೆಯೋ ಇಲ್ಲವೋ ಗೊತ್ತಿಲ್ಲ. ಬೇರೆ ಕನ್ನಡ ಸಂಘಟನೆಗಳ ನಾಯಕರು ಸರ್ಕಾರದ ಮಾತು ಕೇಳುತ್ತಾರೆಯೇ? ಬಿಜೆಪಿ ಸರ್ಕಾರ ಇದ್ದಾಗ ಇವರ ಮಾತು ಕೇಳುತ್ತಿದ್ದರೆ? ಇದೆಲ್ಲ ಆಧಾರ ರಹಿತ ಆರೋಪಗಳು ಎಂದಿದ್ದಾರೆ.

ಬೆಂಗಳೂರಲ್ಲಿ ಮಾತನಾಡಿದ ಆರ್.ಅಶೋಕ್, ಸಿಎಂ ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಅಂದುಕೊಂಡಿರಲಿಲ್ಲ, ಅಮಿತ್ ಷಾ, ಪ್ರಧಾನಿ ಆಗಮಿಸುವಾಗ ಕನ್ನಡ ಸಂಘಟನೆಗಳನ್ನು ಬಳಸಿಕೊಳ್ಳಲು ಮುಂದಾಗಿರುವುದು ಹೇಡಿತನದ ರಾಜಕೀಯ ಎಂದು ಟೀಕಿಸಿದ್ದಾರೆ. ನಮ್ಮ ಕಾರ್ಯಕ್ರಮಗಳಿಗೆ ಅಡ್ಡಿ ಮಾಡಿದರೆ, ರಾಹುಲ್ ಗಾಂಧಿ ಬಂದಾಗಲೂ ಅದೇ ಆಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್, ಕೇಂದ್ರ ಸರ್ಕಾರ ಮಹದಾಯಿ ವಿಚಾರದಲ್ಲಿ ರಾಜ್ಯದ ಬೆನ್ನಿಗೆ ನಿಲ್ಲಲಿಲ್ಲ, ಇದು ರಾಜ್ಯದ ಜನತೆಯಲ್ಲಿ ಬೇಸರ ತರಿಸಿದೆ. ಈ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ನಾವು ಬೆಂಬಲ ನೀಡುತ್ತಿದ್ದೇವೆ. ಜ.26ರಂದು ಗಣರಾಜ್ಯೋತ್ಸವ ಕಾರಣಕ್ಕೆ 25ಕ್ಕೆ ಹೋರಾಟ ಮಾಡಿ ಎಂದು ಸಿಎಂ ಹೇಳಿದರು. ನಮಗೆ ಅಮಿತ್ ಷಾ, ಮೋದಿ ಯಾವತ್ತು ಬರುತ್ತಾರೆಂದು ಗೊತ್ತಿಲ್ಲ ಎಂದು ಹೇಳಿದ್ದಾರೆ.

ಪರಿಣಾಮ ಏನು?

# ಒಂದು ದಿನದ ರಾಜ್ಯ ಬಂದ್​ನಿಂದ ವ್ಯಾಪಾರ, ವಹಿವಾಟಿಗೆ 140 ಕೋಟಿ ರೂ. ಪಾಲು ಖೋತಾ.

# ಸರ್ಕಾರಿ ಬಸ್​ಗಳ ಸಂಚಾರ ಸ್ಥಗಿತದಿಂದ ದಿನಕ್ಕೆ ಸರಾಸರಿ 8.25 ಕೋಟಿ ನಷ್ಟ ಆಗುತ್ತದೆ.

# ಹೋಟೆಲ್, ಪ್ರವಾಸೋದ್ಯಮ, ಖಾಸಗಿ ಬಸ್, ಲಾರಿ, ಎಪಿಎಂಸಿಗಳಿಂದ ಸಾವಿರಾರು ಕೋಟಿ ರೂ.ನಷ್ಟ.

 

ಸಿಎಂ ಸಿದ್ದರಾಮಯ್ಯ ಕುಮ್ಮಕ್ಕಿನಿಂದ ಜ.25ರಂದು ಕರ್ನಾಟಕ ಬಂದ್ ಸೇರಿದಂತೆ ಸಾಲು ಸಾಲು ಪ್ರತಿಭಟನೆಗಳು ನಡೆಯುತ್ತಿವೆ. ಬಂದ್​ನ ಅವಶ್ಯಕತೆ ಇಲ್ಲ. ಮೈಸೂರು ಭಾಗಕ್ಕೂ ಮಹದಾಯಿ ಬಂದ್​ಗೂ ಏನು ಸಂಬಂಧ? ಇದೆಲ್ಲ ಸಿದ್ದರಾಮಯ್ಯನವರ ಕುತಂತ್ರ.

| ಬಿ.ಎಸ್.ಯಡಿಯೂರಪ್ಪ

 

ಬಂದ್​ಗೆ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ. ವಾಟಾಳ್ ನಾಗರಾಜ್ ಮುಂತಾದ ಸಂಘಟನೆ ಗಳು ನನ್ನ ಮಾತು ಕೇಳು ತ್ತಾರಾ? ಬಂದ್ ಮಾಡುವುದರಿಂದ ಸರ್ಕಾರಕ್ಕೆ ನಷ್ಟ ಅಲ್ಲವೇ? ಎಲ್ಲವನ್ನೂ ರಾಜಕೀಯದ ಕಣ್ಣುಗಳಿಂದ ನೋಡುವುದು ತಪು್ಪ.

| ಸಿದ್ದರಾಮಯ್ಯ

 

ಪ್ರಮುಖ ಬಂದ್

# 2017 ಜೂ.12 ಮತ್ತು ಡಿ.27ಕ್ಕೆ ಮಹದಾಯಿ ಯೋಜನೆ ಜಾರಿಗೆ ಬಂದ್.

# 2016 ಏ.18- ನೂತನ ಭವಿಷ್ಯ ನಿಧಿ (ಪಿಎಫ್) ನೀತಿ ಖಂಡಿಸಿ ಗಾರ್ವೆಂಟ್ಸ್ ನೌಕರರ ಬಂದ್.

# 2016 ಜು.30- ಮಹದಾಯಿ ನ್ಯಾಯಮಂಡಳಿಯ ಮಧ್ಯಂತರ ತೀರ್ಪು ಖಂಡಿಸಿ ಬಂದ್.

# 2016 ಸೆ.2-ಕೇಂದ್ರ ಸರ್ಕಾರದ ಕಾರ್ವಿುಕ ವಿರೋಧಿ ನೀತಿ ವಿರುದ್ಧ ಭಾರತ ಬಂದ್.

# 2016 ಸೆ.9- ಕಾವೇರಿ ನೀರಿಗಾಗಿ ಬಂದ್.

# 2016 ನ.12- ಕಾವೇರಿ ನ್ಯಾಯಾಧೀಕರಣದಲ್ಲಿ ರಾಜ್ಯಕ್ಕೆ ಹಿನ್ನಡೆಗೆ 5 ದಿನಗಳ ಕಾಲ ಅಘೋಷಿತ ಬಂದ್.

# 2016 ನ.28- ನೋಟ್ ಬ್ಯಾನ್ ವಿರೋಧಿಸಿ ರಾಷ್ಟ್ರವ್ಯಾಪಿ ಬಂದ್.

Leave a Reply

Your email address will not be published. Required fields are marked *

Back To Top