ಬೆಳಗಾವಿ: ರಾಜಕಾರಣ ಕೆಳಮಟ್ಟಕ್ಕೆ ಹೋಗಿದ್ದು ನಾಚಿಕೆಗೇಡು

ಬೆಳಗಾವಿ:  ಇಂದಿನ ರಾಜಕಾರಣ ಬಹಳ ಕೆಳಮಟ್ಟಕ್ಕೆ ಹೋಗಿದ್ದು ನಾಚಿಕೆಗೇಡಿನ ಸಂಗತಿ. ಉತ್ತಮ ಆಡಳಿತಕ್ಕಾಗಿ ನಮ್ಮನ್ನು ಆಯ್ಕೆ ಮಾಡಿದ ಜನರು, ಈ ಬೆಳವಣಿಗೆ ಕಂಡು ನಮ್ಮ ಮುಖಕ್ಕೆ ಉಗಿಯದಿದ್ದರೆ ರಾಜಕಾರಣ ಇನ್ನಷ್ಟು ಕೆಳಮಟ್ಟಕ್ಕೆ ಹೋಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ.

ಒಂದೆಡೆ ಬಿಜೆಪಿಯವರು ತಾವು ಪ್ರಾಮಾಣಿಕರು, ನಿಷ್ಠಾವಂತರು ಮತ್ತು ದೇಶಭಕ್ತರು ಎನ್ನುತ್ತಿದ್ದಾರೆ. ಮತ್ತೊಂದೆಡೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಂತವರು ಶಾಸಕರ ಖರೀದಿಗೆ 5 ರಿಂದ 10 ಕೋಟಿ ರೂ. ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. 5, 10 ಕೋಟಿ ರೂ.ಗೆ ಶಾಸಕರ ಖರೀದಿ ನಡೆಯುತ್ತಿದೆ ಎಂದರೆ ರಾಜಕಾರಣ ಎಲ್ಲಿಗೆ ಹೋಗುತ್ತಿದೆ?, ಒಂದು ಕಡೆ ಬಾಯಲ್ಲಿ ರಾಮ, ಮತ್ತೊಂದೆಡೆ ಬಗಲಲ್ಲಿ ಚೂರಿ ಎಂಬುವುದೇ ಬಿಜೆಪಿ ಸಿದ್ಧಾಂತವಾಗಿದೆ ಎಂದು ಲೇವಡಿ ಮಾಡಿದರು.

ಕೋಮುವಾದಿ ಪಕ್ಷಕ್ಕೆ ಅಧಿಕಾರ ನೀಡಬಾರದೆಂದು ನಾವು ಜೆಡಿಎಸ್ ಜತೆ ಕೈಜೋಡಿಸಿದ್ದೇವೆ. ಇದು ಅನಿವಾರ್ಯತೆ ಅಷ್ಟೇ ಎಂದ ರಾಯರಡ್ಡಿ, ರಮೇಶ ಜಾರಕಿಹೊಳಿ ಸೇರಿ ನಾಲ್ವರು ಶಾಸಕರು ನಾಪತ್ತೆಯಾಗಿರುವುದು ಸರಿಯಲ್ಲ. ಪಕ್ಷದ ಹೈಕಮಾಂಡ್ ಅವರ ಮೇಲೆ ಕ್ರಮ ಜರುಗಿಸಲಿದೆ ಎಂದರು.

ಸಿಎಂ ಎಚ್.ಡಿ.ಕುಮಾರಸ್ವಾಮಿ ಜನಪರ ಬಜೆಟ್ ಮಂಡಿಸಿದ್ದರೂ ಅದು ಜನರಿಗೆ ತಿಳಿಯುತ್ತಿಲ್ಲ. ಈ ಬಜೆಟ್‌ನ ಉತ್ತಮ ಅಂಶಗಳು ಜನರಿಗೆ ಗೊತ್ತಾಗಬಾರದು ಎಂಬ ಉದ್ದೇಶದಿಂದ ಬಿಜೆಪಿ ಈ ರೀತಿ ಗಲಾಟೆ ಸೃಷ್ಟಿಸುತ್ತಿದೆ. ಮೈತ್ರಿ ಸರ್ಕಾರದಲ್ಲಿ ಉಂಟಾಗಿರುವ ರಾಜಕೀಯ ಗೊಂದಲ, ಟೇಪ್ ಪ್ರಕರಣ, ಶಾಸಕರ ಖರೀದಿ ಹಾಗೂ ಭ್ರಷ್ಟಾಚಾರ ಆರೋಪಗಳ ನಡುವೆ ಜನಪರ ಬಜೆಟ್ ಮುಚ್ಚಿ ಹೋಗುತ್ತಿದೆ ಎಂದರು.