ಬಿಜೆಪಿಗೆ ಸಂಘಟನಾ ಸಹಕಾರ್ಯದರ್ಶಿಬಿ.ಎಲ್.ಸಂತೋಷ್ ಅವರಿಂದಲೇ ಕೆಟ್ಟ ಹೆಸರು

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ನಾಲಿಗೆ ಬಿಜೆಪಿಗೆ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಹೇಳಿದರು.

ಮತ ಕೇಳುವ ಸಲುವಾಗಿ ಕುಂಕುಮ ಹಣೆಗಿಟ್ಟುಕೊಂಡು ಪ್ರಿಯಾಂಕಾ ಗಾಂಧಿ ನಾಟಕವಾಡುತ್ತಿದ್ದಾರೆ. ಸರಿಯಾಗಿ ಪಂಚೆ ಉಡಲು ಬಾರದ ರಾಹುಲ್ ಗಾಂಧಿ ಅವರು ಬಫೂನ್ ಎಂದು ಬಿ.ಎಲ್.ಸಂತೋಷ್ ಟೀಕಿಸಿರುವುದಕ್ಕೆ ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.

ಚುನಾವಣೆಯಲ್ಲಿ ಜನಪರ ಕಾಳಜಿ, ಪ್ರಜಾತಂತ್ರದ ಬಗ್ಗೆ ಬದ್ಧತೆ ಯಾರಿಗಿದೆ ಎನ್ನುವುದರ ಬಗ್ಗೆ ವಿಮರ್ಶೆಯಾಗಬೇಕಿದೆಯೇ ಹೊರತು ಯಾರದ್ದೋ ವೇಷ ಭೂಷಣದ ಚರ್ಚೆಯಲ್ಲ. ಸಂತೋಷ್ ಅಂಥವರು ಪ್ರಿಯಾಂಕಾ ಗಾಂಧಿ ಅವರ ಜನಪ್ರಿಯತೆಗೆ ಹೆದರಿ ಈ ರೀತಿಯ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಒಂದು ಕಡೆ ಡಿಎನ್​ಎ ಆಧಾರದಲ್ಲಿ ಟಿಕೆಟ್ ಕೊಡಲಾಗುವುದಿಲ್ಲ ಎಂದು ಟೀಕಿಸುತ್ತಾರೆ. ಇವರದ್ದು ಎಫ್​ಐಆರ್ ಆಧಾರದಲ್ಲಿ ಟಿಕೆಟ್ ಕೊಡುವ ಪದ್ಧತಿ. ಅದಕ್ಕೆ ಸಾಧಿ್ವ ಪ್ರಜ್ಞಾಸಿಂಗ್ ಸಾಕ್ಷಿ ಎಂದು ಟೀಕಿಸಿದರು. ಈಗ ಒಂದು ವೋಟ್​ಗೆ ಎರಡು ಸರ್ಕಾರ ಎಂದು ಹೇಳುತ್ತಿದ್ದಾರೆ. ಬಿಜೆಪಿಗೆ ಒಂದು ವೋಟು ಕೊಡುವುದರಿಂದ ಮೂರು ಭ್ರಷ್ಟಾಚಾರದ ಕೇಂದ್ರ ಸ್ಥಾಪನೆಯಾಗುತ್ತದೆ. ಸಂಸ್ಕೃತಿ ಬಗ್ಗೆ ಹೇಳುವುದಾದರೆ ಯೋಗಿ ಆದಿತ್ಯನಾಥ, ಪ್ರಜ್ಞಾಸಿಂಗ್ ಅಂಥವರಿಗೆ ಹೇಳಿ ಎಂದರು. ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದು ಪಕ್ಷಾಂತರಿಗಳ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಜೈಲಿಗೆ ಕಳುಹಿಸಬೇಕು. ಯಾರೇ ಆದರೂ ಜನಾದೇಶಕ್ಕೆ ಗೌರವ ಕೊಡಬೇಕು ಎಂದರು.

ಜಿಲ್ಲಾ ಉಪಾಧ್ಯಕ್ಷ ರವೀಶ್ ಕ್ಯಾತನಬೀಡು ಮಾತನಾಡಿ, ಈ ಬಾರಿ ಚುನಾವಣೆ ನೆಪದಲ್ಲಿ ನೀರಿನ ಸಮಸ್ಯೆ ಚರ್ಚೆಗೆ ಬರಲೇ ಇಲ್ಲ. ಇನ್ನಾದರೂ ಶಾಸಕರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಕಡೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು. ಪಕ್ಷದ ಜಿಲ್ಲಾ ಉಪಾಧ್ಯಕ್ಷ ನಟರಾಜ್, ಮಹೇಶ್ ಗೌಡ ಇದ್ದರು.