ರಾಜಕಾರಣ ವ್ರತದಿಂದ ಸುಧಾರಣೆ

 ಕಟೀಲು: ರಾಜಕಾರಣವನ್ನು ವೃತ್ತಿಯಾಗಿಸಿಕೊಂಡವರು ಅನೇಕರು. ಆದರೆ ವ್ರತವನ್ನಾಗಿಸಿಕೊಂಡವರು ಕೆಲವೇ ಮಂದಿ. ಹಿಂದೆ ಸಮಾಜ ಸುಧಾರಣೆ, ಅಭಿವೃದ್ಧಿ ಬಗ್ಗೆ ಹೆಚ್ಚು ಗಮನವಿತ್ತು. ಜನಹಿತ ಉದ್ದೇಶವಾಗಿಸಿ ಕಾನೂನು ರೂಪಿಸುತ್ತಿದ್ದರು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.

ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ‘ಕೋಟ ರಾಜಕಾರಣದ ನೋಟ’ ಶೀರ್ಷಿಕೆಯಡಿ ರಾಜಕಾರಣದ ಬಗ್ಗೆ ಉಪನ್ಯಾಸ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಪ್ರಸ್ತುತ ರಾಜಕಾರಣದಲ್ಲಿ ಉದ್ಯಮಿಗಳು ಹೆಚ್ಚಾಗಿರುವುದರಿಂದ ಅವರ ಅನುಕೂಲಕ್ಕೆ ತಕ್ಕಂತೆ ಕಾನೂನು ರೂಪಿತವಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದ್ದ ಬಾರ್‌ಗಳನ್ನು ಸುಪ್ರೀಂಕೋರ್ಟ್ ಆದೇಶದಂತೆ ತೆರವುಗೊಳಿಸಿ, ಕೊನೆಗೆ ಅವರಿಗೆ ಅನುಕೂಲವಾಗುವಂತೆ ರಾಜ್ಯ ಹೆದ್ದಾರಿಗಳೆಂದು ಸರ್ಕಾರ ಡೀನೋಟಿಫೈ ಮಾಡಿದ ಉದಾಹರಣೆಗಳಿವೆ. ಹನಿ ನೀರು ಬರದ ಎತ್ತಿನಹೊಳೆ ಯೋಜನೆಗೆ 13 ಸಾವಿರ ಕೋಟಿ ರೂ. ಖರ್ಚು ಮಾಡುತ್ತಾರೆ. ನೇತ್ರಾವತಿ ಇರುವ ದ.ಕ ಜಿಲ್ಲೆಯ ಕುಡಿಯುವ ನೀರಿಗಾಗಿ ಕೇವಲ 200 ಕೋಟಿ ರೂ. ಅನುದಾನ ಕೊಡುತ್ತಾರೆ ಎಂದು ಆಡಳಿತ ವ್ಯವಸ್ಥೆಯ ವಾಸ್ತವತೆ ತೆರೆದಿಟ್ಟರು.

ಪ್ರಾಚಾರ‌್ಯ ಬಾಲಕೃಷ್ಣ ಶೆಟ್ಟಿ, ಲಲಿತಕಲಾ ಸಂಘದ ಗಣಪತಿ ಭಟ್, ಜಿಪಂ ಮಾಜಿ ಸದಸ್ಯ ಈಶ್ವರ ಕಟೀಲ್, ಕಟೀಲು ಗ್ರಾಪಂ ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಸದಸ್ಯ ಜನಾರ್ದನ ಕಿಲೆಂಜೂರು ಉಪಸ್ಥಿತರಿದ್ದರು. ಉಪನ್ಯಾಸಕ ಕೃಷ್ಣ ಕಾಂಚನ್ ಸ್ವಾಗತಿಸಿ, ಸಂತೋಷ್ ಆಳ್ವ ವಂದಿಸಿ, ಸನ್ನಿಧಿ ಕಾರ‌್ಯಕ್ರಮ ನಿರೂಪಿಸಿದರು.

ರಾಜಕಾರಣ ಪೂರ್ತಿ ಕೆಟ್ಟಿಲ್ಲ: ಕಳೆದ 11 ದಿನಗಳ ಅಧಿವೇಶನಕ್ಕೆ 7.5 ಕೋಟಿ ರೂ. ಖರ್ಚಾಗಿದೆ. ಆದರೆ ಸದನದ ಮೂಲ ಉದ್ದೇಶ ಈಡೇರುತ್ತಿಲ್ಲ. ಎಂ.ಸಿ.ನಾಣಯ್ಯರಂತಹ ಶಾಸಕರು ಕಾನೂನುಗಳನ್ನು ರೂಪಿಸುವ ಸಂದರ್ಭ ಅನೇಕ ಚರ್ಚೆಗಳ ಮೂಲಕ ಸಚಿವರ ಬೆವರಿಳಿಸುತ್ತಿದ್ದರು. ಆರ್ಥಿಕವಾಗಿ ಹಿಂದುಳಿದಿದ್ದರಿಂದ ಅಂಥವರು ಮತ್ತೆ ಶಾಸಕರಾಗಿಲ್ಲ. ಅವರ ಬದಲಿಗೆ ಹತ್ತು ಬೆರಳುಗಳಲ್ಲಿ ಉಂಗುರವಿದ್ದವರು ಬಂದು ಕೂತಿದ್ದಾರೆ. ಮಾಜಿ ಶಾಸಕ ವೈ.ಎಸ್.ವಿ ದತ್ತ, ಮಾಜಿ ಸಭಾಪತಿ ಶಂಕರಮೂರ್ತಿ, ಹಾಲಿ ಸಭಾಪತಿ ರಮೇಶ್ ಕುಮಾರ್, ಶಾಸಕ ಸುರೇಶ್ ಕುಮಾರ್‌ರಂತಹವರನ್ನು ಕಂಡಾಗ ರಾಜಕಾರಣ ಪೂರ್ತಿ ಕೆಟ್ಟಿಲ್ಲ ಎಂಬ ಸಮಾಧಾನವಿದೆ. ಭಿನ್ನ ಮತ್ತು ಉತ್ತಮ ರಾಜಕಾರಣಿಯನ್ನು ಜನ ಪ್ರೀತಿಸುತ್ತಾರೆ ಎನ್ನುವುದಕ್ಕೆ ರಾಮಕೃಷ್ಣ ಹೆಗಡೆ ರಾಜೀನಾಮೆ ಕೊಡಲು ಮುಂದಾದಾಗ ಮೈಲುಗಟ್ಟಲೆ ಸೇರಿದ ಜನ ಸೇರಿ ರಾಜೀನಾಮೆ ಕೊಡಬೇಡಿ ಎಂದ ಉದಾಹರಣೆಯಿದೆ ಎಂದು ಪೂಜಾರಿ ಹೇಳಿದರು.

ಟೋಲ್ ವ್ಯವಸ್ಥೆ ತಾತ್ಕಾಲಿಕ: ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ, ರಸ್ತೆ ತೆರಿಗೆ ಕೊಟ್ಟ ಮೇಲೆ ಟೋಲ್ ಕಟ್ಟುವುದು ಸರಿ ಅಲ್ಲ. ಅದು ತಾತ್ಕಾಲಿಕ ವ್ಯವಸ್ಥೆ ಎಂದ ಶ್ರೀನಿವಾಸ ಪೂಜಾರಿ, ಅರ್ಹತೆ ಮೇಲೆಯೇ ಉದ್ಯೋಗ ಪಡೆದ ಅಧಿಕಾರಿಗಳು ಪ್ರಾಮಾಣಿಕರಾಗಿರುತ್ತಾರೆ. 30 ಲಕ್ಷ ರೂ. ಕೊಟ್ಟು ತಹಸೀಲ್ದಾರ್, 60 ಲಕ್ಷ ಕೊಟ್ಟು ಇಒ ಆದವರಿಂದ ಭ್ರಷ್ಟಾಚಾರವನ್ನಲ್ಲದೆ ಬೇರೇನನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದರು.

ಪ್ರಮಾಣ ವಚನ ಸ್ವೀಕರಿಸುವ ಸಂದರ್ಭ ಒಂದು ರೂಪಾಯಿ ಖರ್ಚು ಮಾಡದೇ ಸಚಿವರಾದಿರಲ್ಲ ಎಂದು ಡಿ.ಎಚ್.ಶಂಕರಮೂರ್ತಿ ಹೇಳಿದಾಗ, ಪಕ್ಕದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಚಿವರೊಬ್ಬರು ಅಚ್ಚರಿಯಿಂದ ನನ್ನನ್ನು ನೋಡಿದ್ದರು. ಅವರು ಶಾಸಕನಾಗಲು 40 ಕೋಟಿ ರೂ. ಖರ್ಚು ಮಾಡಿದ್ದರು. ಅವರ ಎದುರು ಸೋತ ಅಭ್ಯರ್ಥಿ 32 ಕೋಟಿ ಖರ್ಚು ಮಾಡಿದ್ದರು.
– ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ವಿಪಕ್ಷ ನಾಯಕ