ರಾಜಕಾರಣಿಗಳದ್ದು ನಾಟಕೀಯ ಹೋರಾಟ – ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಜಿ.ಪುರುಷೋತ್ತಮಗೌಡ ಆರೋಪ

ಬಳ್ಳಾರಿ: ತೋರಣಗಲ್‌ನ ಜಿಂದಾಲ್ ಕಂಪನಿ ಸರ್ವ ಪಕ್ಷಗಳಿಗೆ ಜೇನುತುಪ್ಪದ ಆವರಣವಾಗಿದೆ. ಭೂಮಿ ಪರಭಾರೆ ವಿರೋಧಿಸಿ ಹೋರಾಟ ನಡೆಸುತ್ತಿರುವ ರಾಜಕಾರಣಿಗಳು ರೈತರ ದಾರಿ ತಪ್ಪಿಸುತ್ತಿದ್ದಾರೆ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಜಿ.ಪುರುಷೋತ್ತಮ ಗೌಡ ದೂರಿದರು.

ಡಾಂಬರ್ ಕಾರ್ಖಾನೆ ಸ್ಥಾಪನೆ ವಿರೋಧಿಸಿ ಅನೇಕ ಹೋರಾಟ ನಡೆದರೂ, ಸರ್ಕಾರ ಸ್ಪಂದಿಸಲಿಲ್ಲ. ರಾಜಕೀಯ ವ್ಯಕ್ತಿಗಳ ಕುಮ್ಮಕ್ಕಿನಿಂದ ಜೀವ ಸಂಕುಲಕ್ಕೆ ಮಾರಕವಾಗಿರುವ ಕಾರ್ಖಾನೆ ಸ್ಥಾಪಿಸಲಾಯಿತು. ಸದ್ಯ ಒಂದು ಎಕರೆಗೆ 1 ಕೋಟಿ ರೂ. ಬೆಲೆಯಿದೆ. ರಾಜ್ಯ ಸರ್ಕಾರ 3667 ಎಕರೆ ಭೂಮಿಯನ್ನು ಕೇವಲ 40 ಕೋಟಿ ರೂ. ಗೆ ಜಿಂದಾಲ್‌ಗೆ ಮಾರಾಟ ಮಾಡುತ್ತಿರುವುದು ಖಂಡನೀಯ. ಜಿಂದಾಲ್ ವಿರುದ್ಧ ಹೋರಾಟ ಮಾಡುತ್ತಿರುವ ಸ್ಥಳೀಯ ರಾಜಕಾರಣಿಗಳು ಜಿಂದಾಲ್ ವಿಮಾನ ನಿಲ್ದಾಣ ಏಕೆ ಬಳಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಪ್ರಶ್ನಿಸಿದರು.

ಪ್ರತಿ ವರ್ಷ ಸಿಎಸ್‌ಆರ್‌ಗೆ 1200 ಕೋಟಿ ರೂ.ಮೀಸಲು ಇರಿಸಲಾಗಿದೆ ಎಂದು ಜಿಂದಾಲ್ ಕಂಪನಿ ಹೇಳುತ್ತದೆ. ಈ ಅನುದಾನವನ್ನು ಯಾವ ಕಾಮಗಾರಿಗೆ ಬಳಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ತುಂಗಭದ್ರಾ ಜಲಾಶಯದ ಹೂಳು ತೆರವಿಗೆ ಅನುದಾನ ಒದಗಿಸಬೇಕು. ಭೂಮಿ ನೀಡಿದ ರೈತರಿಗೆ ಉದ್ಯೋಗ ನೀಡಬೇಕು. ಇಲ್ಲವಾದಲ್ಲಿ ಜಿಂದಾಲ್ ವಿರುದ್ಧ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

Leave a Reply

Your email address will not be published. Required fields are marked *