ದಿಕ್ಕೆಟ್ಟ ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಆಡಳಿತ!

ಅಶೋಕ ಶೆಟ್ಟರ ಬಾಗಲಕೋಟೆ

ಜಿಲ್ಲೆಯ ಇಬ್ಬರು ಸ್ವಪಕ್ಷೀಯ ರಾಜಕೀಯ ಮುಖಂಡರ ಕುಟುಂಬ ಸದಸ್ಯರ ಪ್ರತಿಷ್ಠೆ ಯಿಂದಾಗಿ ಬಾಗಲಕೋಟೆ ಜಿಪಂ ಆಡಳಿತ ದಿಕ್ಕು ತಪ್ಪಿದೆ. ಕುಸಿತ ಆಡಳಿತ ಯಂತ್ರ ಸರಿಪಡಿಸುವ ಕೆಲಸಕ್ಕೆ ಹಿರಿಯ ಮುಖಂಡರು ಮುಂದಾಗದಿರುವುದು ಮತ್ತೊಂದು ಅಚ್ಚರಿ!

ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಹಾಗೂ ಮಾಜಿ ಸಚಿವ ಎಚ್.ವೈ. ಮೇಟಿ ಅವರ ಪುತ್ರಿ, ಜಿಪಂ ಸದಸ್ಯೆ ಬಾಯಕ್ಕ (ಗಂಗೂಬಾಯಿ) ಮೇಟಿ ಅವರ ಸ್ವಪ್ರತಿಷ್ಠೆಯಿಂದಾಗಿ ಕಾಂಗ್ರೆಸ್ ಸದಸ್ಯರಲ್ಲಿ ಒಮ್ಮತ ಇಲ್ಲದೆ ಮೂರು ವರ್ಷಗಳಿಂದ ಜಿಪಂನಲ್ಲಿ ಜಾತಿ ರಾಜಕೀಯ, ಅಧಿಕಾರ ರಾಜಕೀಯ, ಪ್ರತಿಷ್ಠೆ ಕಾಳಗ ನಿರೀಕ್ಷೆ ಮೀರಿ ನಡೆಯುತ್ತಿದೆ. ಇದರಿಂದ ಇಡೀ ಜಿಪಂ ಅಂಗಳದಲ್ಲಿ ಬಣ ರಾಜಕೀಯದ ಮೇಲಾಟ ನಡೆಯುತ್ತಿದ್ದು, ಆಡಳಿತ ಮತ್ತು ವಿಪಕ್ಷ ಸದಸ್ಯರು ಮೂಖ ಪ್ರೇಕ್ಷಕರಾಗಿದ್ದಾರೆ.

ಇದೀಗ ಕಾಳಗ ತಾರಕಕ್ಕೇರಿದ್ದು, ಅಧ್ಯಕ್ಷೆ ವೀಣಾ ತಲೆದಂಡಕ್ಕೆ ಬಂದು ನಿಂತಿದೆ. ಪರಿಣಾಮ ಬಿಜೆಪಿ ಮಧ್ಯ ಪ್ರವೇಶ ಮಾಡಿದ್ದು, ಕಾಂಗ್ರೆಸ್ ಸದಸ್ಯರು ಬಿಜೆಪಿ ಕಡೆಗೆ ವಾರೇ ನೋಟ ಹರಿಸುವಂತಾಗಿದೆ. ಕೆಲ ಸದಸ್ಯರು ಬಿಜೆಪಿ ಜತೆ ಸೇರಿ ಅಧ್ಯಕ್ಷೆ ವಿರುದ್ಧ ಅವಿಶ್ವಾಸಕ್ಕೆ ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಎಲ್ಲರದ್ದು ಬಿಗಿಪಟ್ಟು: ಜಿಪಂನಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದ ಗಳಿಗೆಯಿಂದ ಹಿಡಿದು ಮೂರು ವರ್ಷದವರೆಗೂ ಆಡಳಿತ ಕಾಂಗ್ರೆಸ್ ಸದಸ್ಯರ ನಡುವೆಯೇ ಕೋಳಿ ಜಗಳ ನಡೆಯುತ್ತಿದೆ. ಕಾಂಗ್ರೆಸ್ ಸದಸ್ಯರ ಕಾರಣದಿಂದಲೇ ಕೋರಂ ಕೊರತೆ ಉಂಟಾಗಿ ಅನೇಕ ಬಾರಿ ಸಭೆ ಮುಂದೂಡಿರುವ ಘಟನೆ ನಡೆದಿದೆ. ಕೋರಂ ಕೊರತೆ ಆದಾಗಲೆಲ್ಲ ಬಾಯಕ್ಕ ಮೇಟಿ ಕಾರಣ ಎಂದು ಬೊಟ್ಟು ಮಾಡಿದ್ದು ಸುಳ್ಳಲ್ಲ.

ಒಂದು ಕಡೆಗೆ ವೀಣಾ ಕಾಶಪ್ಪನವರ ಕಾಂಗ್ರೆಸ್ ಸದಸ್ಯರನ್ನು ಡಮ್ಮಿ ಮಾಡಿದ್ದಾರೆ ಎನ್ನುವ ಆರೋಪವಾದರೆ, ಮತ್ತೊಂದು ಕಡೆಗೆ ತಮಗೆ ಸೂಕ್ತ ಸಹಕಾರ ಕೊಡುತ್ತಿಲ್ಲ ಎನ್ನುವುದು ಅಧ್ಯಕ್ಷರ ಪ್ರತಿವಾದವಾಗಿದೆ. ಒಂದು ಕಡೆಗೆ ವೀಣಾ ಅವರನ್ನು ಅಧ್ಯಕ್ಷ ಗಾದೆಯಿಂದ ಕೆಳಗಿಸಲು ಬಾಯಕ್ಕ ನಾಯಕತ್ವದ ಭಿನ್ನರ ಪಟ್ಟು. ನಾನೇಕೆ ರಾಜೀನಾಮೆ ನೀಡಲಿ ಎನ್ನುವ ವೀಣಾ ಅವರ ಬಿಗಿಪಟ್ಟು. ಆಡಳಿತ ಕಾಂಗ್ರೆಸ್ ಪಕ್ಷದ ಸದಸ್ಯರ ಬಂಡಾಯ ಬಾವುಟ ರಾಜಧಾನಿವರೆಗೂ ಹಾರಾಡಿ ಬಂದಾಗಿದೆ.

ಭಿನ್ನರ ನಡೆಗೆ ಅಧ್ಯಕ್ಷೆ ಕಂಗಾಲು: ಪ್ರತಿಷ್ಠೆಯ ಕಾಳಗ ತಾರಕ್ಕೇರಿದ್ದರೂ ಸರಿಪಡಿಸುವ ಗೋಜಿಗೆ ಜಿಲ್ಲೆಯ ಮುಖಂಡರು ಮುಂದಾಗಲಿಲ್ಲ. ಅದಕ್ಕೂ ಕಾರಣ ಇಲ್ಲವೆಂದಲ್ಲ, ಅಧ್ಯಕ್ಷೆ ವೀಣಾ ಕಾಶಪ್ಪನವರ ಪತಿ, ವಿಜಯಾನಂದ ಕಾಶಪ್ಪನವರ ತಮ್ಮ ಸೋಲಿನ ಭಾರ ಜಿಲ್ಲೆಯ ಹಿರಿಯ ಮುಖಂಡರ ತಲೆಗೆ ಕಟ್ಟಿದ್ದಲ್ಲದೆ, ಅವರ ವಿರುದ್ಧ ಬಹಿರಂಗವಾಗೇ ಸಮರ ಸಾಧಿಸಿದ್ದು, ಕೆಲ ಹಿರಿಯ ಮುಖಂಡರು ಅವರ ವಿಷಯದಲ್ಲಿ ಭಾಗವಹಿಸಲು ಹಿಂದೇಟು ಹಾಕಿದರು. ಇದು ಭಿನ್ನರ ಬಂಡಾಯಕ್ಕೆ ಬಲ ತಂದುಕೊಟ್ಟಿತು ಎನ್ನುವುದರಲ್ಲಿ ಅನುಮಾನವಿಲ್ಲ.

ಕೈ ಭಿನ್ನರ ಬಣ ಜಿಪಂನಲ್ಲಿ ವೀಣಾ ಅವರನ್ನು ಕೆಳಗಿಳಿಸಲು ಬಿಜೆಪಿ ಜತೆ ಸಖ್ಯ ಬೆಳೆಸಲು ಮುಂದಾಗಿದ್ದಲ್ಲದೆ ಮಾತುಕತೆ ನಡೆಸಿ, ಇಬ್ಬರೂ ಒಗ್ಗೂಡಿ ಅಧಿಕಾರ ನಡೆಸಲು ತಂತ್ರ ರೂಪಿಸಿದ್ದಾರೆ. ಯಾವುದೇ ಕ್ಷಣದಲ್ಲಿ ಅವಿಶ್ವಾಸ ಮಂಡನೆಗೆ ವೇದಿಕೆ ಸಜ್ಜುಗೊಳಿಸಿದ್ದರು. ಈ ಸುಳಿವು ಸಿಗುತ್ತಿದ್ದಂತೆ ಕಂಗಾಲಾದ ವೀಣಾ ಕಾಶಪ್ಪನವರ ಹಾಗೂ ಬೆಂಬಲಿಗರು ಅಕ್ಷರಶಃ ಕಂಗಾಲಾಗಿದ್ದಲ್ಲದೆ ಅವಿಶ್ವಾಸದಿಂದ ಮುಖಭಂಗ ಅನುಭವಿಸುವುದಕ್ಕಿಂತ ರಾಜೀನಾಮೆಯೇ ಲೇಸು ಎನ್ನುವ ನಿರ್ಣಯಕ್ಕೆ ಬಂದಂತಿದೆ.

ಹೀಗಾಗಿಯೇ ವರಿಷ್ಠರು ಹೇಳಿದರೆ ರಾಜೀನಾಮೆಗೆ ಸಿದ್ಧ ಎಂದು ಘೊಷಣೆ ಮಾಡಿದರು. ಇದೇ ವಿಷಯವಾಗಿ ಗುರುವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತುರ್ತು ಸಭೆ ನಡೆಸಿದರು. ಆದರೆ, ಸಚಿವರ ಸಭೆಗೆ ಬಾಯಕ್ಕ ಮೇಟಿ ನೇತೃತ್ವದ ಭಿನ್ನರು ಮಾತ್ರ ಮುಖ ಮಾಡಲೇ ಇಲ್ಲ. ಇದು ಸಹ ಕೈ ಮುಖಂಡರಿಗೆ ಆದ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕುದುರೆ ವ್ಯಾಪಾರ:ಜಿಪಂನಲ್ಲಿ ಅಧಿಕಾರ ಗದ್ದುಗೆ ಹಿಡಿಯಲು ಭಿನ್ನರಲ್ಲಿ ಒಬ್ಬರು ಸದಸ್ಯರಿಗೆ ಆಮಿಷವೊಡ್ಡುವ ಕೆಲಸಕ್ಕೂ ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಒಂದು ಕಡೆಗೆ ಬಿಜೆಪಿಯವರು ಬೆಂಬಲ ನೀಡುತ್ತಾರೆ ಎಂಬ ಮಾತು ಇದ್ದರೂ ಇದೀಗ ಪಕ್ಷದ ವಿರುದ್ಧ ನಿಂತು ಅಧಿಕಾರ ಗದ್ದುಗೆ ಹಿಡಿಯುವುದು ಅಷ್ಟು ಸುಲಭವಲ್ಲ ಎನ್ನುವ ಸಲಹೆ ಕೇಳಿ ಬಂದಿವೆ. ಹೀಗಾಗಿ ಪಕ್ಷದ ಬೆಂಬಲ ಪಡೆದು ಬಹುಮತಕ್ಕೆ ಬೇಕಿರುವ ಇಬ್ಬರು ಸದಸ್ಯರನ್ನು ಸೆಳೆಯಲು ಆಮಿಷವೊಡ್ಡುವ ಕೆಲಸ ನಡೆದಿದ್ದು, ಕುದುರೆ ವ್ಯಾಪಾರ ನಡೆದಿದೆ ಎಂದು ಹೇಳಲಾಗುತ್ತಿದೆ.

ಸಚಿವರು ಹೇಳಿದ್ದು ಆಗಲಿಲ್ಲ:ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಕರೆದ ಸಭೆಗೆ ಕೆಲ ಸದಸ್ಯರು ಗೈರು ಉಳಿದರೂ ಅದಕ್ಕೆ ಏನೇನೋ ಕಾರಣ ನೀಡಿದ್ದ ಸಚಿವರು, ಸಮಸ್ಯೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಬಗೆಹರಿಸುತ್ತಾರೆ. ಶುಕ್ರವಾರ ಜಿಪಂನ ಎಲ್ಲ ಕಾಂಗ್ರೆಸ್ ಪಕ್ಷದ ಸದಸ್ಯರು ಬೆಂಗಳೂರಿಗೆ ತೆರಳಿ, ಸಿದ್ದರಾಮಯ್ಯ ಜತೆ ಚರ್ಚೆ ನಡೆಸಲಿದ್ದಾರೆ. ಮಾಜಿ ಸಿಎಂ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ ಎಂದು ಹೇಳಿದ್ದರು. ಆದರೆ, ಶುಕ್ರವಾರ ಕೆಲ ಭಿನ್ನ ಸದಸ್ಯರು ಬೆಂಗಳೂರು ಬಸ್ ಹತ್ತಿಲ್ಲ. ಇಲ್ಲಿಯೇ ಉಳಿದಿದ್ದಾರೆ. ತಮಗೆ ಸಿದ್ದರಾಮಯ್ಯ ಕರೆ ಮಾಡಿಯೇ ಇಲ್ಲ. ನಾವೇಕೆ ರಾಜಧಾನಿಗೆ ಹೋಗಬೇಕು ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಇದರಿಂದ ಸಚಿವ ಶಿವಾನಂದ ಪಾಟೀಲ ಪಕ್ಷದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಮಾಧ್ಯಮಗಳ ಎದುರು ಹಚ್ಚಿದ್ದ ತೇಪೆಯೂ ಉದುರಿ ಬಿದ್ದಿದೆ.