ಕ್ಯಾಂಟೀನ್ ಉದ್ಘಾಟನೆಯಲ್ಲಿ ರಾಜಕೀಯ ಕಲಹ

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಭಾನುವಾರ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಸಂದರ್ಭ ರಾಜಕೀಯ ಹೈಡ್ರಾಮ ನಡೆದು ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ತಳ್ಳಾಟದಿಂದ ಮತ್ತೆ ವೈಷಮ್ಯ ಸ್ಫೋಟಗೊಂಡಿತು.

ಶಾಸಕ ರಾಜೇಶ್ ನಾಕ್, ಸಂಸದ ನಳಿನ್, ಮಾಜಿ ಸಚಿವ ರಮಾನಾಥ ರೈ ಸಮ್ಮುಖ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಕ್ಯಾಂಟೀನ್ ಉದ್ಘಾಟಿಸಿದರು. ಈ ಹಿಂದೆ ಕ್ಯಾಂಟೀನ್ ವಿಚಾರವಾಗಿ ಗೊಂದಲ ಉಂಟಾಗಿದ್ದರಿಂದ ಉದ್ಘಾಟನೆ ವೇಳೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರಿಂದ ಬಿಗುವಿನ ವಾತಾವರಣ ಉಂಟಾಗಿತ್ತು.

ಜೈಕಾರದಿಂದ ಶುರು!: ಕ್ಯಾಂಟಿನ್ ಒಳಭಾಗದಿಂದ ಕಾಂಗ್ರೆಸ್ ಕಾರ್ಯಕರ್ತರು ಸಚಿವ ಖಾದರ್, ಮಾಜಿ ಸಚಿವ ರಮಾನಾಥ ರೈ ಅವರಿಗೆ ಜೈಕಾರ ಹಾಕಲು ಶುರು ಮಾಡಿದರು. ಬಿಜೆಪಿ ಕಾರ್ಯಕರ್ತರು ಶಾಸಕ ರಾಜೇಶ್ ನಾಕ್, ಸಂಸದ ನಳಿನ್ ಕುಮಾರ್‌ಗೆ ಜೈಕಾರ ಹಾಕಿ, ಮೋದಿ.. ಮೋದಿ ಎಂದು ಘೋಷಣೆ ಕೂಗಿದರು. ಇತ್ತ ಕ್ಯಾಂಟೀನ್ ಒಳಭಾಗದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಜತೆಯಾಗಿಯೇ ಫಲಾಹಾರ ಸೇವಿಸುತ್ತಿದ್ದರು. ಈ ವೇಳೆ ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮತ್ತವರ ಬೆಂಬಲಿಗರು ಮಾಜಿ ಸಚಿವರಿಗೆ ಪೊಲೀಸರ ಮೂಲಕ ನೋಟಿಸ್ ನೀಡಲಾಗಿದೆ ಎಂಬ ವಿಚಾರ ಮುಂದಿಟ್ಟು ತಕರಾರು ತೆಗೆಯುತ್ತಿದ್ದಂತೆ ಸ್ಥಳದಲ್ಲಿ ಗೊಂದಲದ ವಾತವಾರಣ ಸೃಷ್ಟಿಯಾಯಿತು.

ಇದನ್ನು ಸಂಸದ, ಶಾಸಕರು ಆಕ್ಷೇಪಿಸಿ ಉಪಾಹಾರ ಸೇವಿಸಲು ನಿರಾಕರಿಸಿದರು. ಸ್ಥಳದಲ್ಲಿದ್ದ ಸಚಿವರು, ಮಾಜಿ ಸಚಿವರು ಸಮಾಧಾನ ಪಡಿಸಲು ಮುಂದಾದರೂ ಕಾಂಗ್ರೆಸ್ ಕಾರ್ಯಕರ್ತರು ಸಮಾಧಾನಗೊಳ್ಳಲಿಲ್ಲ. ಕ್ಯಾಂಟೀನ್ ಒಳಭಾಗದಲ್ಲಿ ಗದ್ದಲ ಉಂಟಾಯಿತು. ಆಗ ಅಲ್ಲಿದ್ದ ಕೆಲವರು ಶಾಸಕ ರಾಜೇಶ್ ನಾಕ್ ಅವರನ್ನು ತಳ್ಳಿದ್ದು, ಸಂಸದರು ಮತ್ತು ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿತು. ಅವರು ಸ್ಥಳದಲ್ಲೇ ಪ್ರತಿಭಟಿಸಿದರು. ಶಾಸಕರನ್ನು ದೂಡಿ ಗೂಂಡಾಗಿರಿ ಪ್ರದರ್ಶಿಸಿದ ಜಿ.ಪಂ.ಸದಸ್ಯರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಿನಿವಿಧಾನಸೌಧದ ಮುಂದೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೇಶ್ ನಾಕ್ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟು ಹಿಡಿದರು. ಸಹಾಯಕ ಆಯುಕ್ತ ರವಿಚಂದ್ರ ನಾಯಕ್, ಎಎಸ್ಪಿ ಋಷಿಕೇಶ್ ಮನವೊಲಿಸಲು ಯತ್ನಿಸಿದರೂ ಪಟ್ಟು ಬಿಡದ ಸಂಸದ ನಳಿನ್ ಹಾಗೂ ಶಾಸಕ ರಾಜೇಶ್ ಹಕ್ಕುಪತ್ರ ವಿತರಣೆ ಬಹಿಷ್ಕರಿಸಿದರು.

ಸಚಿವರಿಂದ ಮನವೊಲಿಕೆ: ಸಂಸದರು, ಶಾಸಕರಿಗೆ ಕರೆ ಮಾಡಿದ ಸಚಿವ ಯು.ಟಿ.ಖಾದರ್ ಮನವೊಲಿಸಲು ಪ್ರಯತ್ನಿಸಿದರೂ, ಫಲಕಾರಿಯಾಗಲಿಲ್ಲ. ತಮಗೆ ಗೌರವ ನೀಡಿ ಕ್ಯಾಂಟೀನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ನನ್ನನ್ನು, ನಮ್ಮ ಜನಪ್ರತಿನಿಧಿಗಳನ್ನು ಅವಮಾನಿಸಲಾಗಿದೆ. ಸಾಂಕೇತಿಕವಾಗಿ ತಾವೇ ಹಕ್ಕುಪತ್ರ ವಿತರಿಸಿ. ಉಳಿದುದನ್ನು ಕಂದಾಯ ಅಧಿಕಾರಿಗಳೇ ವಿತರಿಸಲಿ ಎಂದು ನಳಿನ್ ಸಚಿವರಿಗೆ ಸಲಹೆ ನೀಡಿದರು. ಅದರಂತೆ ಸಚಿವರು ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸಿ, ಉಳಿದ ಫಲಾನುಭವಿಗಳಿಗೆ ಕಂದಾಯಾಧಿಕಾರಿಗಳು ಹಕ್ಕುಪತ್ರ ವಿತರಿಸಿದರು. ಉದ್ಘಾಟನಾ ಫಲಕದಲ್ಲಿ ಕಂದಾಯ ಸಚಿವ ದೇಶಪಾಂಡೆ ಅವರ ಹೆಸರು ಅಚ್ಚಾಗಿತ್ತು.

ಶಿಷ್ಟಾಚಾರ ಉಲ್ಲಂಘನೆ ಆರೋಪ: ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘಿಸಲಾಗಿದೆ. ಇದನ್ನು ಸರ್ಕಾರಿ ಕಾರ್ಯಕ್ರಮವಾಗಿ ಮಾಡದೆ ಕಾಂಗ್ರೆಸ್ ಕಾರ್ಯಕ್ರಮವನ್ನಾಗಿ ಮಾಡಿದರು. ನಮ್ಮ ಶಾಸಕರು, ಸಂಸದರನ್ನು ಹೀನಾಯವಾಗಿ ನಡೆಸಿಕೊಂಡರು. ಇದನ್ನು ಪಕ್ಷ ವತಿಯಿಂದ ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನಿಸಲಾಗುವುದು ಎಂದು ಸಂಸದ ನಳಿನ್, ಬಂಟ್ವಾಳ ಶಾಸಕ ರಾಜೇಶ್ ನಾಕ್ ಜತೆ ತುರ್ತು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಹರಿಕೃಷ್ಣ ಬಂಟ್ವಾಳ, ದೇವದಾಸ ಶೆಟ್ಟಿ, ಗೋವಿಂದ ಪ್ರಭು, ದಿನೇಶ್ ಅಮ್ಟೂರು ಮೊದಲಾದವರು ಉಪಸ್ಥಿತರಿದ್ದರು.

ಶಾಸಕರ ಮೇಲೆ ಹಲ್ಲೆ ಆಗಿಲ್ಲ: ಅಹಿತಕರ ಘಟನೆ ಬಗ್ಗೆ ಸಚಿವ ಯು.ಟಿ.ಖಾದರ್ ವಿಷಾದ ವ್ಯಕ್ತಪಡಿಸಿದ್ದಾರೆ. ಎರಡು ಕಡೆಯ ಕಾರ್ಯಕರ್ತರು ಸೇರಿದಾಗ ಘೋಷಣೆ ಕೂಗಿದ್ದು, ಸ್ವಲ್ಪ ತಳ್ಳಾಟ ನಡೆದಿರುವುದು ನಿಜ. ನನ್ನನ್ನು ಕೂಡ ತಳ್ಳಿದ್ದಾರೆ. ಆದರೆ ಹೊಡೆದಾಟ ಆಗಿಲ್ಲ ಎಂದ ಅವರು, ಎಲ್ಲ ಪಕ್ಷದವರಿದ್ದು ಒಟ್ಟಾಗಿ ಕಾರ್ಯಕ್ರಮ ನಡೆದಿದೆ. ಈ ಬಗ್ಗೆ ಗೊಂದಲ ಬೇಡ, ಬಂಟ್ವಾಳ ಶಾಸಕರ ಮೇಲೆ ಹಲ್ಲೆ ಯತ್ನ ನಡೆದಿಲ್ಲ ಎಂದರು.

ಎಲ್ಲ ಹೋಬಳಿಗಳಲ್ಲಿ ಕ್ಯಾಂಟೀನ್: ಪ್ರಾಥಮಿಕ ಹಂತದಲ್ಲಿ ಹೋಬಳಿ ಮಟ್ಟದ ಇಂದಿರಾ ಕ್ಯಾಂಟೀನ್ ಉಳ್ಳಾಲದಲ್ಲಿ ಪ್ರಾರಂಭ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಮ್ಮಿಶ್ರ ಸರ್ಕಾರದ ಸಹಮತದೊಂದಿಗೆ ಪ್ರತಿ ಹೋಬಳಿ ಮಟ್ಟದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಾಗುವುದು ಎಂದು ಸಚಿವ ಖಾದರ್ ಹೇಳಿದರು.

ಬಿಜೆಪಿಯಿಂದ ಗೊಂದಲ ಎಂದ ರೈ: ತನ್ನನ್ನು ವೇದಿಕೆ ಕೆಳಗೆ ಕುಳ್ಳಿರಿಸಲಾಯಿತು. ಅವಮಾನ ಮಾಡಲಷ್ಟೇ ಬಿಜೆಪಿ ಜನಪ್ರತಿನಿಧಿಗಳು ಗೊಂದಲ ಸೃಷ್ಟಿಸಿದರು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಪದ್ಮನಾಭ ಕೊಟ್ಟಾರಿ ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿದ್ದರು. ನನಗೆ ವೇದಿಕೆ ಹತ್ತುವ ಅಪೇಕ್ಷೆ ಇಲ್ಲ. ಸಿಎಂ ಬಂದ ಕಾರ್ಯಕ್ರಮದಲ್ಲೂ ತಳ್ಳಾಟ ನಡೆದಿತ್ತು. ಆದರೆ ಶಾಸಕ, ಸಂಸದರು ಕಾರ್ಯಕ್ರಮ ಬಹಿಷ್ಕರಿಸುವಂತಹ ಘಟನೆ ನಡೆದಿರಲಿಲ್ಲ ಎಂದರು. ಇನ್ನೊಂದೆಡೆ, ಬಿಜೆಪಿ ಸಂಸದರು ಮತ್ತು ಶಾಸಕರು ವಾಗ್ವಾದವನ್ನು ದೊಡ್ಡ ವಿಷಯವಾಗಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸದೆ ಜನರನ್ನು ಅವಮಾನಿಸಿದ್ದಾರೆ ಎಂದು ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಭಾನುವಾರ ಸಾಯಂಕಾಲ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.