ವಿಜಯವಾಣಿ ಸುದ್ದಿಜಾಲ ಧಾರವಾಡ
ರಸಗೊಬ್ಬರ, ಕೀಟನಾಶಕಗಳ ವಿಪರೀತ ಬಳಕೆಯಿಂದ ಕೂಡಿರುವ ಕೃಷಿ ರಂಗದಲ್ಲಿ ಸಾವಯವ ಪದ್ಧತಿ ಅಳವಡಿಸಿ ಸುಧಾರಣೆ ಮಾಡಬೇಕಿದೆ. ಇದಕ್ಕೆ ನಮ್ಮ ರಾಜಕೀಯವೂ ಹೊರತಲ್ಲ. ಹಣ, ಜಾತಿ ಪ್ರಭಾವದಿಂದ ಕಂಗೆಟ್ಟಿರುವ ರಾಜಕಾರಣವನ್ನು ಸಾವಯವ ಮಾದರಿಯಲ್ಲಿ ಪುನರುತ್ಥಾನ ಮಾಡುವ ಅಗತ್ಯವಿದೆ. ಆ ಮೂಲಕ ರಾಜಕೀಯ ಶುದ್ಧೀಕರಣವನ್ನು ವೇಗವಾಗಿ ಕೈಗೊಳ್ಳಬೇಕಿದೆ ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಪಟೇಲ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜೆ.ಎಚ್. ಪಟೇಲ್ ಪ್ರತಿಷ್ಠಾನ, ಶ್ರೀ ಕಲ್ಮೇಶ್ವರ ಸಂಸ್ಥೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್‌ರ ನೆನಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಂ.ಪಿ. ನಾಡಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೆ.ಎಚ್. ಪಟೇಲ್ ರಾಷ್ಟ್ರಕಂಡ ಮುತ್ಸದ್ದಿ ರಾಜಕಾರಣಿ. ಅವರು ಎಂದೂ ಅಭಿವೃದ್ಧಿ ವಿಷಯದಲ್ಲಿ ಪಕ್ಷ ರಾಜಕಾರಣ ಮಾಡಿದವರಲ್ಲ. ಇಂದಿನ ರಾಜಕೀಯ ವ್ಯವಸ್ಥೆ ಸರಿಪಡಿಸಲು ಪಟೇಲ್‌ರ ಚಿಂತನೆಗಳ ಅನುಷ್ಠಾನ ಅಗತ್ಯವಿದೆ ಎಂದರು.
ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ಸಮಾಜವಾದಿ ಚಿಂತನೆ, ರೈತಪರ ಹೋರಾಟದಿಂದ ನಾಯಕತ್ವ ರೂಪಿಸಿಕೊಂಡ ಪಟೇಲ್ ನಾಡಿನ ಆದರ್ಶ ಮುಖ್ಯಮಂತ್ರಿಯಾಗಿದ್ದರು ಎಂದರು.
ಶಂಕರ ಹಲಗತ್ತಿ, ಪತ್ರಕರ್ತ ಬಸವರಾಜ ಹೊಂಗಲ, ಜೆಡಿಯು ಜಿಲ್ಲಾಧ್ಯಕ್ಷ ಶ್ರೀಶೈಲಗೌಡ ಕಮತರ ಮಾತನಾಡಿದರು. ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ ರೈತರಾದ ಜಗದೀಶ ಕಂಬಳಿ, ಶಂಕರಗೌಡ ಪೊಲೀಸ್‌ಪಾಟೀಲ, ರವಿ ವಾಲಿ, ಸುಭಾಸ ಮಾದಣ್ಣವರ, ಈರಪ್ಪ ಬಳಿಗೇರ ಅವರನ್ನು ಸನ್ಮಾನಿಸಲಾಯಿತು.
ತ್ರಿಶೂಲ ಪಾಣಿ ಪಟೇಲ, ಕೆ.ಎಸ್. ಕೋರಿಶೆಟ್ಟರ, ನಾಗನಗೌಡ ಪಾಟೀಲ, ವೆಂಕಟೇಶ ಮಾಚಕನೂರ, ಸಿ. ಎಸ್. ಪಾಟೀಲ, ಸತೀಶ ತುರಮರಿ, ನಿಂಗಣ್ಣ ಕುಂಟಿ, ಎಸ್. ಜಿ. ಪಾಟೀಲ, ರತ್ನಾ ಗಂಗಣ್ಣವರ, ತಾರಾದೇವಿ ವಾಲಿ, ಶಿವಾನಂದ ಹಾದಿಮನಿ, ಇತರರು ಇದ್ದರು.
ಶಂಕರ ಅಂಬಲಿ ಸ್ವಾಗತಿಸಿದರು.