ಚುನಾವಣಾ ನೀತಿ ಸಂಹಿತೆ ಪಾಲನೆ ಕಡ್ಡಾಯ

ಚಿಕ್ಕಮಗಳೂರು: ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಮಾದರಿ ನೀತಿ ಸಂಹಿತೆ ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಡನೆ ಮಾದರಿ ನೀತಿ ಸಂಹಿತೆ ಪಾಲನೆ ಕುರಿತ ಸಭೆಯಲ್ಲಿ ಮಾತನಾಡಿ, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮಾದರಿ ನೀತಿ ಸಂಹಿತೆ ನಿಯಮಗಳನ್ನು ಎಲ್ಲ ರಾಜಕೀಯ ಪಕ್ಷಗಳು ಕಡ್ಡಾಯವಾಗಿ ಪಾಲನೆ ಮಾಡಬೇಕು. ಜಿಲ್ಲಾ ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲಿದೆ. ಮಾದರಿ ನೀತಿ ಸಂಹಿತೆಯಲ್ಲಿ ರಾಜಕೀಯ ಪಕ್ಷಗಳು ಪಾಲಿಸಬೇಕಾದ ಎಲ್ಲ ಮಾಹಿತಿ ಕೊಡಲಾಗಿದೆ. ಶಾಂತಿಯುತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ನಿಯಮ ಗೌರವಿಸಿ ಪಾಲಿಸಬೇಕು ಎಂದು ಹೇಳಿದರು.

ಚುನಾವಣೆ ಸಿಬ್ಬಂದಿ ಪಕ್ಷಪಾತಿ ಧೋರಣೆ ತಾಳಿದರೆ ಮುಲಾಜಿಲ್ಲದೆ ಕಠಿಣ ಕ್ರಮಕೈಗೊಳ್ಳಲಾಗುವುದು. ಯಾವುದೇ ರೀತಿ ದೂರುಗಳಿದ್ದರೂ ಹೆಲ್ಪ್ ಲೈನ್​ಗೆ ಕರೆ ಮಾಡಿ ನೀಡಬಹುದು. ಅಲ್ಲದೆ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಸಹಾಯಕ ಚುನಾವಣಾಧಿಕಾರಿ ನೇಮಕವಾಗಿದ್ದು, ಇವರಿಗೆ ಚುನಾವಣೆ ನೀತಿ ಸಂಹಿತೆಗೆ ಬಗ್ಗೆ ಅಥವಾ ಸಂಬಂಧಿಸಿದ ಇತರೆ ವಿಷಯಗಳ ಬಗ್ಗೆ ದೂರು ನೀಡಬಹುದು ಎಂದರು.

ಭಗವಾಧ್ವಜ ತೆರವು ಸಂಕಷ್ಟಕ್ಕೆ: ಸಾರ್ವಜನಿಕ ಸ್ಥಳ ಹಾಗೂ ಮನೆಗಳ ಮೇಲೆ ಕಟ್ಟಿರುವ ಭಗವಾಧ್ವಜ ತೆರವು ಮಾಡುವ ಬಗ್ಗೆ ಜಿಲ್ಲಾಡಳಿತ ಸ್ಪಷ್ಟ ನಿಲುವು ತಾಳದೆ ರಾಜಕೀಯ ಪಕ್ಷಗಳ ಮುಖಂಡರ ಪರ-ವಿರೋಧದ ವಾಗ್ಯುದ್ಧಕ್ಕೆ ಎಡೆಮಾಡಿಕೊಟ್ಟಿದೆ.

ರಾಜಕೀಯ ಪಕ್ಷಗಳ ಮುಖಂಡರೊಡನೆ ನಡೆಸಿದ ಸಭೆಯಲ್ಲಿ ಭಗವಾಧ್ವಜದ ವಿಚಾರ ಬಿಸಿ ಬಿಸಿಯಾಗಿ ಚರ್ಚೆಯಾದರೂ ಡಿಸಿ ಅಂತಿಮವಾಗಿ ಸ್ಪಷ್ಟ ನಿರ್ಧಾರ ಕೈಗೊಳ್ಳಲು ವಿಫಲರಾದರು.

ಕೇಸರಿ ಬಣ್ಣದ ಭಗವಾಧ್ವಜ ಒಂದು ಪಕ್ಷದ ಪರವಾದ ಭಾವನೆ ಬಿತ್ತುತ್ತಿರುವುದರಿಂದ ಅದನ್ನು ಸಾರ್ವಜನಿಕ ಪ್ರದೇಶ, ಮನೆಗಳ ಮೇಲೆ ಕಟ್ಟಿದರೆ ತೆರವು ಮಾಡಬೇಕೆಂದು ಕಾಂಗ್ರೆಸ್​ನ ಎಂ.ಸಿ.ಶಿವಾನಂದಸ್ವಾಮಿ, ಜೆಡಿಎಸ್​ನ ಚಂದ್ರಪ್ಪ ಹಾಗೂ ಸಿಪಿಐನ ರೇಣುಕಾರಾಧ್ಯ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಇದನ್ನು ವಿರೋಧಿಸಿದ ಬಿಜೆಪಿ ಜಿಲ್ಲಾ ವಕ್ತಾರ ವರಸಿದ್ಧಿ ವೇಣುಗೋಪಾಲ್, ಭಗವಾಧ್ವಜ ಧಾರ್ವಿುಕ ಆಚರಣೆಯ ಸಂಕೇತ. ದತ್ತ ಜಯಂತ್ರಿ ಸಂದರ್ಭದಲ್ಲಿ ನಾವು ಕೆಲ ಸಾರ್ವಜನಿಕ ಪ್ರದೇಶ, ದೇವಸ್ಥಾನ ಆವರಣದಲ್ಲಿ ಕಟ್ಟಿದ್ದೇವೆ. ಭಕ್ತರ ಮನೆಗಳಲ್ಲಿಯೂ ಕಟ್ಟಿದ್ದಾರೆ. ಇದನ್ನು ನಗರಸಭೆ ನೌಕರರು ಕಿತ್ತುಹಾಕುತ್ತಿದ್ದಾರೆ. ಹಾಗಾದರೆ ಮಸೀದಿಯಲ್ಲಿರುವ ಬಾವುಟ ಯಾಕೆ ತೆರವು ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.