ಕುರುಡು ಕಾಂಚಾಣದ ಕೈವಾಡ ಆರಂಭ!

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ/ಕುಂದಗೋಳ

ಬಿಸಿಲಿನ ಬೀಡು, ನಿರಂತರ ಬರಗಾಲದಿಂದ ಬಳಲುತ್ತಿರುವ ಕುಂದಗೋಳ ತಾಲೂಕಿನಲ್ಲಿ ಈ ವರ್ಷ ಇನ್ನೂ ಪರಿಸ್ಥಿತಿ ಬಿಗಡಾಯಿಸಿ ಜನ-ಜಾನುವಾರುಗಳು ಪರಿತಪಿಸುತ್ತಿದ್ದರೆ, ಅನಿರೀಕ್ಷಿತ ಉಪಚುನಾವಣೆಯಲ್ಲಿ ಉಭಯ ಪಕ್ಷಗಳು ತಮ್ಮ ‘ಮಾನ’ ಉಳಿಸಿಕೊಳ್ಳಲು ನಾನಾ ಕಸರತ್ತು ಮಾಡತೊಡಗಿವೆ. ಇದರಲ್ಲಿ ಕುರುಡು ಕಾಂಚಾಣವೇ ಪ್ರಧಾನ ಪಾತ್ರ ವಹಿಸತೊಡಗಿದೆ.

ಬಿಸಿಲು ಬೆಂಕಿ ನೋಡದೇ ರಾಜಕಾರಣಿಗಳು ರೋಡ್ ಶೋ, ಮತ ಭಿಕ್ಷೆ, ಜನ ಸಿಕ್ಕಲ್ಲೇ ಸಭೆ ಮಾಡುವುದು, ಪರಸ್ಪರರನ್ನು ದೂಷಿಸುವುದು, ಒತ್ತಾಯಪೂರ್ವಕವಾಗಿ ಜನರನ್ನು ಸೇರಿಸಿ ಭಾಷಣ ಕುಟ್ಟುವುದು ಇತ್ಯಾದಿ ದಿನನಿತ್ಯದ ಸಂತೆ ಒಂದು ಕಡೆಯಾದರೆ, ಹಣವನ್ನೋ, ಚಿನ್ನದ ಬಣ್ಣದ ಆರತಿ ತಟ್ಟೆಯನ್ನೆಲ್ಲ ಕೊಟ್ಟು ಮತದಾರರನ್ನು ಒಲಿಸಿಕೊಳ್ಳುವ ಹಂತಕ್ಕೂ ಮುಂದಾಗಿರುವುದು ಸಾಬೀತಾಗಿದೆ.

ಕಾಂಗ್ರೆಸ್​ನವರಿಗೆ ಇದು ಮೈತ್ರಿ ಸರ್ಕಾರದ ಮೂಗು ಉಳಿಸಿಕೊಳ್ಳುವ ಪ್ರಶ್ನೆಯಾದರೆ, ಪ್ರತಿಪಕ್ಷದವರಿಗೆ ಮುಂದೆ ತಮ್ಮದೇ ಸರ್ಕಾರವನ್ನು ಸ್ಥಾಪಿಸಲು ಒಂದು ಮೆಟ್ಟಿಲು. ಹೀಗಾಗಿ ಕುಂದಗೋಳ ಚುನಾವಣೆ ಪ್ರಚಾರದ ನೆವದಲ್ಲಿ ರಾಜ್ಯಮಟ್ಟದ ನಾಯಕರ ದಂಡು ಕ್ಷೇತ್ರಕ್ಕೆ ಮುತ್ತಿಗೆ ಹಾಕಿದೆ.

ರಾಜಕೀಯ ಯಾವ ಮಟ್ಟಕ್ಕೆ ಹೋಗಿದೆ ಎಂದರೆ, ನಿನ್ನೆಯವರೆಗೆ ಒಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದವರು ಇಂದು ತಮ್ಮ ಪಕ್ಷಕ್ಕೆ ಬಂದು ಹಾರ ಹಾಕಿಸಿಕೊಳ್ಳುವುದೂ ಒಂದು ಪ್ರತಿಷ್ಠೆಯಾಗಿದೆ. ಅದಕ್ಕೆ ಎಷ್ಟು ಖರ್ಚಾದರೂ ಸರಿ. ಅದು ಸಾಧ್ಯವಾಗುವುದಿಲ್ಲ ಎಂದು ಕಂಡುಬಂದರೆ ‘ಧಮಕಿ’ ಅಸ್ತ್ರವೂ ಪ್ರಯೋಗವಾಗುತ್ತಿದೆ ಎನ್ನುವುದಕ್ಕೆ ಉದಾಹರಣೆಗಳು ಸಿಕ್ಕಿವೆ.

ಜನರನ್ನು ಒಲಿಸಿಕೊಳ್ಳುವ ಕಾರ್ಯದ ಮಧ್ಯೆ ಕುಂದಗೋಳದಲ್ಲಿಯ ಎಲ್ಲ ಪ್ರತಿಮೆಗಳಿಗೂ ಮಾಲೆಗಳು ಬೀಳುತ್ತಿವೆ. ಎಲ್ಲ ಸಮುದಾಯದವರನ್ನೂ ಸಮಾಧಾನಪಡಿಸುವ ಪ್ರಯತ್ನಗಳಿಗೆ ಬರವಿಲ್ಲ.

ಮನೆಯಂಗಳದಲ್ಲಿ ನಿಂತವರು, ಸೆಕೆ ತಡೆಯಲಾರದೇ ಕೆರೆ ದಂಡೆಯಲ್ಲಿ ಟವೆಲ್ ಹಾಸಿಕೊಂಡು ಮಲಗಿದವರು, ದೇವಸ್ಥಾನದ ಹಜಾರದಲ್ಲಿ ಕುಳಿತು ಗಾಳಿಯ ನಿರೀಕ್ಷೆಯಲ್ಲಿರುವವರು, ನಳದ ಎದುರು ಕೊಡದ ಸಾಲು ಇಟ್ಟುಕೊಂಡು ನಿಂತವರು, ಕಟ್ಟೆ ಮೇಲೆ ಕುಳಿತು ಲೋಕಾಭಿರಾಮ ಮಾತನಾಡುತ್ತಿರುವವರು, ತಂಗುದಾಣದಲ್ಲಿ ನಿಂತು ಬಸ್ಸಿಗಾಗಿ ಕಾಯುತ್ತಿರುವವರು, ಎಲ್ಲೋ ಮದುವೆ-ಮಂಗಲ ಕಾರ್ಯಕ್ರಮಕ್ಕೆ ಹೋಗಲೆಂದು ಲಾರಿ-ಟ್ರ್ಯಾಕ್ಟರ್ ಏರಿ ಕುಳಿತವರು… ಹೀಗೆ ಯಾರು ಕಂಡರೂ ಸಮೀಪಿಸಿ ಪಾಂಪ್ಲೆಟ್ ಕೊಟ್ಟು ಕೈ ಮುಗಿಯುವ ದೃಶ್ಯ ಈಗ ಕ್ಷೇತ್ರದಾದ್ಯಂತ ಸಾಮಾನ್ಯವಾಗಿದೆ. ಹಗಲು ಭೇಟಿಯಾದ ಯಾರನ್ನು ರಾತ್ರಿ ಮತ್ತೊಮ್ಮೆ ಭೇಟಿಯಾಗಿ ಕೈ ಬಿಸಿ ಮಾಡಬಹುದು ಎಂಬ ಲೆಕ್ಕಾಚಾರವೂ ಅಲ್ಲೇ ನಡೆದಿರುತ್ತದೆ ಎಂದು ಬೇರೆ ಹೇಳಬೇಕಿಲ್ಲ.

ಚುನಾವಣೆ ಅಲ್ಲಿ, ಸಭೆಗಳು ಇಲ್ಲಿ:ಕುಂದಗೋಳ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದ್ದರೆ ನಿತ್ಯವೂ ಸಭೆಗಳು ನಡೆಯುತ್ತಿರುವುದು ಮಾತ್ರ ಹುಬ್ಬಳ್ಳಿಯ ಹೋಟೆಲ್​ಗಳಲ್ಲಿ ಎನ್ನುವುದು ಕುತೂಹಲದ ಸಂಗತಿಯೇ. ಹುಬ್ಬಳ್ಳಿ ಸಭೆಗೆ ಮುಖಂಡರೆಲ್ಲ ಬನ್ನಿ ಎಂದು ಮೈತ್ರಿ ಪಕ್ಷದ ಚುನಾವಣಾ ಉಸ್ತುವಾರಿಯಾಗಿರುವ ಸಚಿವ ಡಿ.ಕೆ. ಶಿವಕುಮಾರ ಅವರು ಸಂಜೆಯ ಪ್ರಚಾರ ಸಭೆಯಲ್ಲೇ ಆಹ್ವಾನ ನೀಡುತ್ತಾರೆ. ಎದುರು ಪಕ್ಷದವರೂ ಇದಕ್ಕಿಂತ ಭಿನ್ನವೇನಲ್ಲ. ಸಂಜೆ ಸಭೆ ನಡೆಸುವಾಗ ಚಹಾದೊಂದಿಗೆ ಕಾಂಚಾಣದ ವ್ಯವಸ್ಥೆಯೂ ಆಗುತ್ತದೆ. ಅಂಥ ಸಮಯದಲ್ಲೇ ಮಹಿಳೆಯರಿಗೆ ಹಂಚಲು ಚಿನ್ನದ ಬಣ್ಣ ಲೇಪಿತ ಅರಿಷಿಣ-ಕುಂಕುಮ ಪಾತ್ರೆ, ಇತ್ಯಾದಿಗಳ ಹಂಚಿಕೆಯೂ ಆಗುತ್ತದೆ ಎನ್ನಲಾಗಿದೆ. ಅಧಿಕಾರಿಗಳ ತಂಡ ನಡೆಸಿದ ದಾಳಿಯಲ್ಲಿ ಸಿಕ್ಕ ವಸ್ತುಗಳು ಸ್ವಲ್ಪವೇ ಇರಬಹುದು. ಏನೆಲ್ಲ ನಡೆಯುತ್ತಿದೆ, ಯಾವ ಹಂತಕ್ಕೆಲ್ಲ ಇಳಿಯಲಾಗುತ್ತಿದೆ ಎನ್ನಲು ಇಷ್ಟೇ ಸಾಕಲ್ಲವೆ?

Leave a Reply

Your email address will not be published. Required fields are marked *