ರಾಜ್ಯ ರಾಜಕಾರಣದಿಂದ ಬೇಸತ್ತಿದ್ದಾರೆ ನಾಡಿನ ಜನರು: ಜೆಡಿಎಸ್​ ರಾಜ್ಯಾಧ್ಯಕ್ಷ ವಿಶ್ವನಾಥ್​ ಅಸಮಾಧಾನ

ಚಿತ್ರದುರ್ಗ: ರಾಜ್ಯ ರಾಜಕಾರಣದ ಬಗ್ಗೆ ಜನರು ರೋಸಿ ಹೋಗಿದ್ದಾರೆ. ಸಿಎಂ, ಮಾಜಿ ಸಿಎಂಗಳ ಆಡಿಯೋ ರಿಲೀಸ್​, ಆರೋಪ, ಪ್ರತ್ಯಾರೋಪಗಳಿಂದ ಜನರು ಬೇಸತ್ತಿದ್ದಾರೆಂದು ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​. ವಿಶ್ವನಾಥ್​ ಹೇಳಿದರು.

ಹೊಸದುರ್ಗ ಭಗೀರಥ ಮಠದಲ್ಲಿ ಮಾತನಾಡಿ, ನಾವು ರಾಜಕಾರಣಿಗಳು ನಾಡಿನ ಮತದಾರರು ಮನ್ನಿಸಲಾಗದಂಥ ಕೆಲಸ ಮಾಡುತ್ತಿದ್ದೇವೆ. ಕುಮಾರಸ್ವಾಮಿ, ಸಿದ್ದರಾಮಯ್ಯ, ಯಡಿಯೂರಪ್ಪ ಯಾರೇ ಆಗಲಿ, ಎಲ್ಲ ಮುಖಂಡರಿಗೆ ದೇವರು ಒಳ್ಳೇಬುದ್ಧಿ ಕೊಡಲಿ ಎಂದರು.

ಒಬ್ಬರಿಗೆ 20, 30 ಕೋಟಿ ರೂಪಾಯಿ ಆಮಿಷ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ವಿಧಾನಸೌಧದ ಎದುರು ಧನ ಜಾತ್ರೆ ನಡೆಯುತ್ತಿದೆಯೆಂದೆನಿಸುತ್ತಿದೆ. ನಾನು ದೇವರಾಜ ಅರಸು ಅವರ ಶಿಷ್ಯ. ನನ್ನ ಬೆಳವಣಿಗೆಗೆ ಅವರೇ ಕಾರಣ. ದೇವರಾಜು ಅರಸು ಅವರಂತಾಗಲು ಯಾರಿಂದಲೂ ಸಾಧ್ಯವಿಲ್ಲ. ಕೆಲವರು ನನ್ನ ಬಳಿ ಬಂದು ನೀವೇ ದೇವರಾಜು ಅರಸು ಎಂದು ರೈಲು ಹತ್ತಿಸುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಪರೋಕ್ಷವಾಗಿ ಟಾಂಗ್​ ನೀಡಿದರು.

ಹಿಂದುಳಿದ ವರ್ಗಗಳ ಆಯೋಗದ ವರದಿ ಏನಾಯಿತು. ಅದನ್ನು ಹಿಂದಿನ ಸರ್ಕಾರವೇ ಬಿಡುಗಡೆ ಮಾಡಬೇಕಿತ್ತು. ಇಂದು ರಾಜಕಾರಣ ಕವಲು ದಾರಿಯಲ್ಲಿ ಸಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.