ರಾಜಕೀಯವಾಗಿ ಇಂದು ರಾಜ್ಯಕ್ಕೆ ಅತ್ಯಂತ ಮಹತ್ವದ ದಿನ: ಏಕೆ ಗೊತ್ತಾ?

ಬೆಂಗಳೂರು: ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಇಂದು ಹಲವು ಪ್ರಮುಖ ಬೆಳವಣಿಗೆಗಳು ನಡೆಯುವ ಸಾಧ್ಯತೆಗಳಿದ್ದು, ಮಹತ್ತರ ನಿರ್ಧಾರಗಳು ಹೊರಬೀಳಲಿವೆ. ಈ ಹಿನ್ನೆಲೆಯಲ್ಲಿ ರಾಜಕೀಯವಾಗಿ ಇಂದಿನ ಈ ದಿನ ಅತ್ಯಂತ ಮಹತ್ವದ ದಿನ ಎನಿಸಿಕೊಂಡಿದೆ.

ಇಂದಿನ ಅಪೇಕ್ಷಿತ ಘಟನಾವಳಿಗಳಿವು…

  1. ಸುಮಲತಾ ರಾಜಕೀಯ ನಡೆ ನಿರ್ಧಾರ: ನಟ, ಮಾಜಿ ಸಚಿವ ದಿ. ಅಂಬರೀಷ್​ ಅವರ ಪತ್ನಿ ತಮ್ಮ ಸ್ಪರ್ಧೆ ಬಗ್ಗೆ ಇಂದು ಅಧಿಕೃತ ಪ್ರಕಟಣೆ ಮಾಡಲಿದ್ದಾರೆ. ಅವರು ಪಕ್ಷೇತರರಾಗಿ ಸ್ಪರ್ಧಿಸುವರೋ ಅಥವಾ ಬಿಜೆಪಿಯಿಂದ ನಿಲ್ಲುವರೋ ಎಂಬುದರ ಕುರಿತು ಇಂದು ಸ್ಪಷ್ಟತೆ ಸಿಗಲಿದೆ. ಇದಕ್ಕಾಗಿ ಅವರು ಬೆಂಗಳೂರಿನ ಐಷಾರಾಮಿ ಹೊಟೇಲ್​ವೊಂದರಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
  2. ಬಿಜೆಪಿ ಪಟ್ಟಿ ಅಖೈರು?: ರಾಜ್ಯದ 28 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತಿರುವ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಗೊಳಿಸಿದೆ. ಪಟ್ಟಿಯ ಒಪ್ಪಿಗೆಗಾಗಿ ಯಡಿಯೂರಪ್ಪ ಅವರು ದೆಹಲಿಗೆ ತೆರಳಿದ್ದು, ಮೋದಿ ನೇತೃತ್ವದ ಕೇಂದ್ರ ಕೋರ್​ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳು ಅಂತಿಮಗೊಳ್ಳಲಿದ್ದಾರೆ. ಭಾಗಶಃ ಇಂದೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.
  3. ದೇವೇಗೌಡರು ಎಲ್ಲಿಂದ?: ಜೆಡಿಎಸ್​ ವರಿಷ್ಠ, ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ ಅವರೂ ಇಂದು ತಮ್ಮ ಸ್ಪರ್ಧೆ ಬಗ್ಗೆ ಅಂತಿಮ ನಿರ್ಧಾರ ತಿಳಿಸುವ ಸಾಧ್ಯತೆಗಳಿವೆ. ಬೆಂಗಳೂರು ಉತ್ತರ ಮತ್ತು ತುಮಕೂರು ಲೋಕಸಭೆ ಕ್ಷೇತ್ರಗಳ ಪೈಕಿ ಯಾವುದಾದರೂ ಒಂದು ಕ್ಷೇತ್ರದಿಂದ ಗೌಡರು ಸ್ಪರ್ಧೆ ಮಾಡುವ ಸಾಧ್ಯತೆಗಳಿರುವುದರಿಂದ, ಆ ಎರಡೂ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಕುರಿತು ಜೆಡಿಎಸ್​ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಇಂದು ಈ ವಿಚಾರ ಇತ್ಯರ್ಥಗೊಳ್ಳುವ ಸಾಧ್ಯತೆಗಳಿವೆ.
  4. ಗೌಡರ ಕುಟುಂಬ ಶೃಂಗೇರಿಗೆ: ದೇವೇಗೌಡರ ಕುಟುಂಬದಲ್ಲಿ ಸದ್ಯ ಗೌಡರನ್ನು ಹೊರತುಪಡಿಸಿದಂತೆ ನಿಖಿಲ್ ಮತ್ತು ಪ್ರಜ್ವಲ್​ ಅವರ ಸ್ಪರ್ಧೆ ಬಹುತೇಕ ಅಂತಿಮಗೊಂಡಿದೆ. ಇದೇ ಹಿನ್ನೆಲೆಯಲ್ಲಿ ಇಡೀ ಕುಟುಂಬ ಇಂದು ಶೃಂಗೇರಿಗೆ ತೆರಳಲಿದ್ದು, ಅಲ್ಲಿ ಪೂಜೆ ಸಲ್ಲಿಸಲಿದ್ದಾರೆ.
  5. ಕರ್ನಾಟಕಕ್ಕೆ ರಾಹುಲ್​: ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಇಂದು ಕಲಬುರಗಿಯ ಸಮಾವೇಶಕ್ಕೆಂದು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ನಂತರ ಅವರು ಪಕ್ಷದ ಸಭೆ ಮತ್ತು ಸಂವಾದ ಕಾರ್ಯಕ್ರಮದಲ್ಲೂ ಭಾಗವಹಿಸಲಿದ್ದಾರೆ. ಅಲ್ಲದೆ, ಕರ್ನಾಟಕದಿಂದ ಸ್ಪರ್ಧೆ ಮಾಡಬೇಕು ಎಂಬ ರಾಜ್ಯ ಕಾಂಗ್ರೆಸ್​ ನಾಯಕರ ಒತ್ತಾಯದ ಬಗ್ಗೆಯೂ ಅವರು ಮಾತನಾಡುವ ಸಾಧ್ಯತೆಗಳುಂಟು.