ಜಿಲ್ಲೆಯ ಜನರಿಗಾಗಿ ರಾಜಕೀಯ ಪ್ರವೇಶ

ಶ್ರೀರಂಗಪಟ್ಟಣ: ರಾಜಕೀಯ ನನ್ನ ಕ್ಷೇತ್ರವಲ್ಲ. ಆದರೆ, ಮಂಡ್ಯ ಜಿಲ್ಲೆ ಮತ್ತು ಇಲ್ಲಿನ ಜನರಿಗಾಗಿ ರಾಜಕೀಯಕ್ಕೆ ಬಂದಿದ್ದೇನೆ ಎಂದು ಸುಮಲತಾ ಅಂಬರೀಷ್ ಹೇಳಿದರು.

ತಾಲೂಕಿನ ಕೋಡಿಶೆಟ್ಟಿಪುರ ಗ್ರಾಮದ ಮಾರಮ್ಮದೇವಿ ನೂತನ ದೇವಾಲಯ-ನವಗ್ರಹ ಉದ್ಘಾಟನೆ, ದೇವಿಯ ಮರು ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ಪತಿ ಮತ್ತು ಕುಟುಂಬದ ಮೇಲೆ ಜಿಲ್ಲೆಯ ಜನರು ತೋರಿದ ಪ್ರೀತಿಗಾಗಿ ರಾಜಕೀಯಕ್ಕೆ ಬಂದಿದ್ದೇನೆಯೇ ಹೊರತು ಬೇರಾವ ಕಾರಣಕ್ಕೂ ಅಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯ ಜನರು ಅಂಬರೀಷ್ ಅವರಿಗೆ ತೋರಿದ ಅಪಾರ ಪ್ರೀತಿ ಮತ್ತು ಬೆಂಬಲವನ್ನು ನನಗೂ ತೋರುತ್ತಿದ್ದು ಅದು ಸ್ವಲ್ಪವೂ ಕಡಿಮೆಯಾಗಿಲ್ಲ. ಈ ಪ್ರೀತಿಗೆ ನಾನು ಮೂಕವಿಸ್ಮಿತಳಾಗಿದ್ದೇನೆ ಎಂದರು.

ಬಿಜೆಪಿಯ ಯಾವುದೇ ಮುಖಂಡರು ಈವರೆಗೆ ನನ್ನ ಜತೆ ಮಾತನಾಡಿಲ್ಲ. ನಾನೂ ಯಾರನ್ನು ಸಂಪರ್ಕ ಮಾಡಿಲ್ಲ. ನಿಖಿಲ್ ಅಥವಾ ಇನ್ಯಾರೇ ಸ್ಪರ್ಧಿಸಿದರೂ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗಲ್ಲ. ಮಂಡ್ಯದ ಜನರು ನನ್ನ ಸ್ಪರ್ಧೆಗೆ ಒತ್ತಾಯ ಮಾಡಿದ್ದು, ಅವರ ಆಸೆ ಈಡೇರಿಸಿ, ಸೇವೆ ಸಲ್ಲಿಸುವುದಷ್ಟೇ ನನ್ನ ಕರ್ತವ್ಯವೆಂದು ಭಾವಿಸಿದ್ದೇನೆಂದು ತಿಳಿಸಿದರು.

ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್.ಎಲ್.ಲಿಂಗರಾಜು, ಗ್ರಾಮಸ್ಥರಾದ ಮಲ್ಲೇಶ, ಹೊನ್ನೇಗೌಡ, ಕರೀಗೌಡ, ಕಾಂತರಾಜು, ಚಿಕ್ಕಣ್ಣ, ಜವರೇಗೌಡ ಇತರರು ಹಾಜರಿದ್ದರು.