More

  ರಾಜಕೀಯ ಚಾತುರ್ಯ ಆಡಳಿತ ನೈಪುಣ್ಯದ ಛಾಪು

  ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವನ್ನು ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ವಜಾ ಮಾಡಿತ್ತು. ಇದರಿಂದ ವಿಚಲಿತರಾಗದ ಬೊಮ್ಮಾಯಿ ಸುಪ್ರೀಂ ಕೋರ್ಟಿನಲ್ಲಿ ಸರ್ಕಾರದ ವಜಾ ವಿರುದ್ಧ ಹೋರಾಟ ನಡೆಸಿ, ಕಾಂಗ್ರೆಸ್​ನ ಪ್ರಜಾತಂತ್ರ ವಿರೋಧಿ ನಡೆಗೆ ಶಾಶ್ವತವಾಗಿ ನಿರ್ಬಂಧ ಹೇರುವಂತಹ ಐತಿಹಾಸಿಕ ತೀರ್ಪಿಗೂ ಕಾರಣೀಭೂತರಾದರು.

  | ಹರಿಶ್ಚಂದ್ರ ಭಟ್

  ಕರ್ನಾಟಕ ಹಾಗೂ ಭಾರತದ ರಾಜಕೀಯ ಚರಿತ್ರೆಯಲ್ಲಿ ತಮ್ಮದೇ ಛಾಪು ಒತ್ತಿದ ಧುರೀಣರ ಸಂಖ್ಯೆ ಕಡಿಮೆ ಎಂದೇ ಹೇಳಬೇಕು. ಆದರೆ ಸೋಮಪ್ಪ ರಾಯಪ್ಪ ಬೊಮ್ಮಾಯಿ (ಎಸ್.ಆರ್.ಬೊಮ್ಮಾಯಿ) ಅವರು ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲೆರಡರಲ್ಲೂ ಮಿಂಚಿ ತಮ್ಮ ಜನಪರ ನಿಲುವಿನ ಮೂಲಕ ಪ್ರೇರಕಶಕ್ತಿಯಾಗಿ ಇಂದಿಗೂ ಪ್ರಸ್ತುತರಾಗಿದ್ದಾರೆ. ರಾಷ್ಟ್ರ ರಾಜಕಾರಣವನ್ನು ನಿಭಾಯಿಸುವಲ್ಲಿ ದಕ್ಷತೆ ಹಾಗೂ ರಾಜ್ಯ ರಾಜಕಾರಣವನ್ನು ನಿರ್ದೇಶಿಸುವಲ್ಲಿ ಪರಿಣತಿ ಇವೆರಡನ್ನೂ ಅವರಲ್ಲಿ ನಾವು ಗುರ್ತಿಸಬಹುದಾಗಿದೆ. ದೇಶವು ರಾಜಕೀಯ ಅಸ್ಥಿರತೆಯ ಹೊಡೆತಕ್ಕೆ ಸಿಲುಕಿದ್ದಾಗ ಬೊಮ್ಮಾಯಿಯವರು ಪ್ರವರ್ಧಮಾನಕ್ಕೆ ಬಂದವರು. ಅವರು ತಮ್ಮ ಸೌಮ್ಯ ನಡವಳಿಕೆಯಿಂದಲೇ ಕರ್ನಾಟಕ ಮತ್ತು ಭಾರತದ ರಾಜಕಾರಣಕ್ಕೆ ಹೊಸ ದಿಕ್ಕು ಸಿಗುವಂತೆ ಮಾಡುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಅದರಲ್ಲೂ ಪ್ರಮುಖವಾಗಿ ದೇಶದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಹೊಸದೊಂದು ರಾಜಕೀಯ ಸಂಸ್ಕೃತಿಯನ್ನು ಪರಿಚಯಿಸಿ ಅದು ಸ್ಥಿರವಾಗಿ ನೆಲೆ ನಿಲ್ಲುವಂತೆ ಮಾಡುವಲ್ಲಿ ಅವರದು ಹಿರಿಯ ಪಾತ್ರ. ಇದಕ್ಕೆ ಸಾಕ್ಷಿಯಾಗಿರುವ ಮಹತ್ವದ ವಿದ್ಯಮಾನವೆಂದರೆ ಜನತಾದಳದ ಉದಯ. ರಾಜಕೀಯಕ್ಕೆ ಹೊಸ ದಿಕ್ಕು ನೀಡುವ ಈ ಬದಲಾವಣೆಗೆ ಕೇಂದ್ರಬಿಂದುವಾಗಿದ್ದವರು ಬೊಮ್ಮಾಯಿ.

  ಯುವ ನೇತಾರ: ಬೊಮ್ಮಾಯಿಯವರು ಕಾಲೇಜು ದಿನಗಳಿಂದಲೇ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮನೋಭಾವ ರೂಢಿಸಿಕೊಂಡಿದ್ದರು. ಯುವಕ ಬೊಮ್ಮಾಯಿಯವರ ನಾಯಕತ್ವವು ಕರ್ನಾಟಕಕ್ಕೆ ರಾಜ್ಯ ಸ್ಥಾನಮಾನ ಹಾಗೂ ಗೋವಾ ವಿಮೋಚನಾ ಚಳವಳಿಗಳಂತಹ ಪ್ರಮುಖ ಜನಾಂದೋಳನದ ಮೂಲಕ ರೂಪುಗೊಂಡಿತು. ಕರ್ನಾಟಕದಲ್ಲಿ ರೈತರು ನಿರಂತರವಾಗಿ ಎದುರಿಸುತ್ತಿದ್ದ ಅನಾವೃಷ್ಟಿ ಮತ್ತಿತರ ಸಂಕಷ್ಟಗಳ ಸಂದರ್ಭಗಳಲ್ಲಿ ಬೊಮ್ಮಾಯಿಯವರು ತೋರಿದ ಕಳಕಳಿ ಮತ್ತು ಸಕ್ರಿಯತೆಯು ಸಹಜವಾಗಿ ಅವರಿಗೆ ನಾಯಕತ್ವವನ್ನು ಒದಗಿಸಲು ನೆರವಾಯಿತು. ಅದರಲ್ಲೂ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರು ರಾಷ್ಟ್ರ ರಾಜಕಾರಣದ ಮೇಲೆ ಹೊಂದಿದ್ದ ಸರ್ವಾಧಿಕಾರದ ಪಾರುಪತ್ಯದ ವಿರುದ್ಧ ಸೆಡ್ಡು ಹೊಡೆಯುವ ಪರ್ಯಾಯ ರಾಜಕಾರಣಕ್ಕೆ ಬೊಮ್ಮಾಯಿಯವರು ತಮ್ಮ ಶಕ್ತಿಯನ್ನು ಧಾರೆ ಎರೆದರು. ಇಂದಿರಾ ಗಾಂಧಿ ತುರ್ತಪರಿಸ್ಥಿತಿ ಘೊಷಿಸಿದ ಸಂದರ್ಭದಲ್ಲಿ ದೇಶದಲ್ಲಿ ನಡೆದ ಭಾರೀ ಜನಾಂದೋಳನದ ಹಿಂದೆ ಇದ್ದ ಹಲವು ನೇತಾರರಲ್ಲಿ ಬೊಮ್ಮಾಯಿ ಪ್ರಮುಖರು.

  ಬೊಮ್ಮಾಯಿ ಪ್ರಕರಣದ ಖ್ಯಾತಿ: ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ, ಅಂದಿನ ಕಾಂಗ್ರೆಸ್ ಆಡಳಿತವು ತನ್ನ ವಿಚಾರಧಾರೆಯ ವಿರುದ್ಧವಿದ್ದ ಯಾವ ರಾಜ್ಯ ಸರ್ಕಾರಗಳನ್ನೂ ಮುಂದುವರಿಯಲು ಬಿಡದೇ ವಜಾ ಮಾಡುವ ಪ್ರವೃತ್ತಿಯನ್ನು ಮುಂದುವರಿಸಿತ್ತು. ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವನ್ನು ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ವಜಾ ಮಾಡಿತ್ತು. ಇದರಿಂದ ವಿಚಲಿತರಾಗದ ಬೊಮ್ಮಾಯಿ ಸುಪ್ರೀಂ ಕೋರ್ಟಿನಲ್ಲಿ ಸರ್ಕಾರದ ವಜಾ ವಿರುದ್ಧ ಹೋರಾಟ ನಡೆಸಿ, ಕಾಂಗ್ರೆಸ್​ನ ಪ್ರಜಾತಂತ್ರ ವಿರೋಧಿ ನಡೆಗೆ ಶಾಶ್ವತವಾಗಿ ನಿರ್ಬಂಧ ಹೇರುವಂತಹ ಐತಿಹಾಸಿಕ ತೀರ್ಪಿಗೂ ಕಾರಣೀಭೂತರಾದರು.1989ರ ಈ ವಿದ್ಯಮಾನದ ನಂತರ ಸುಪ್ರೀಂ ಕೋರ್ಟ್ ತೀರ್ಪು ಬಂದಿದ್ದು 1994ರ ಮಾರ್ಚ್ 11ರಲ್ಲಿ. ಆದರೆ ಇದೊಂದು ಅತ್ಯಂತ ಮಹತ್ವದ ತೀರ್ಪಾದ ಕಾರಣ, ಭಾರತದಲ್ಲಿ ಪುನಃ ಯಾವುದೇ ರಾಜ್ಯ ಸರ್ಕಾರವನ್ನು ಕೇಂದ್ರ ಸರ್ಕಾರದ ಮರ್ಜಿಗೆ ತಕ್ಕಂತೆ ವಜಾ ಮಾಡುವ ಸಂಸ್ಕೃತಿಗೆ ಪೂರ್ಣವಿರಾಮ ಬಿತ್ತು. ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಅವಕಾಶ ನೀಡದೇ ರಾಜ್ಯ ಸರ್ಕಾರವನ್ನು ವಜಾ ಮಾಡುವಂತಿಲ್ಲ ಎನ್ನುವ ತೀರ್ಪು ನಂತರದಲ್ಲಿ ಎಲ್ಲಾ ರಾಜ್ಯಗಳಿಗೆ ಅನ್ವಯವಾಗಿದ್ದು ಇದು ‘ಬೊಮ್ಮಾಯಿ ಪ್ರಕರಣ’ ಎಂದೇ ಜನಜನಿತವಾಗಿದೆ.

  ಹಂತಹಂತ ಪಯಣ: 1962 ರಲ್ಲೇ ಬೊಮ್ಮಾಯಿಯವರ ರಾಜಕೀಯ ಪಯಣಕ್ಕೆ ಶ್ರೀಕಾರವಾಯಿತು. ಸ್ವತಂತ್ರ ಅಭ್ಯರ್ಥಿಯಾಗಿ ಅಗ್ನಿಪರೀಕ್ಷೆ ಎದುರಿಸಿದರಾದರೂ ಅದರಲ್ಲಿ ಯಶಸ್ಸು ಸಿಗಲಿಲ್ಲ. ಆದರೆ 1969ರ ವೇಳೆಗೆ ಭಾರತದ ರಾಜಕಾರಣದಲ್ಲಿ ಕೆಲವು ಬದಲಾವಣೆಗಳು ಉಂಟಾದವು. ಇಂದಿರಾ ಗಾಂಧಿಯವರ ಪಕ್ಷವಿರೋಧಿ ನಡೆಯಿಂದಾಗಿ ಕಾಂಗ್ರೆಸ್ ಪಕ್ಷ ಮೂರು ಹೋಳಾಗಿದ್ದ ಸಂದರ್ಭವದು. ಬೊಮ್ಮಾಯಿ 1972ರಲ್ಲಿ ಕಾಂಗ್ರೆಸ್ ಒ ಪಕ್ಷದ ಅಭ್ಯರ್ಥಿಯಾಗಿ ಸತ್ವಪರೀಕ್ಷೆಗೆ ಒಳಗಾದರು. ಆಗ ವಿಫಲವಾದರೂ ಅವರು ಆತ್ಮೀಯ ಒಡನಾಡಿ ವೀರೇಂದ್ರ ಪಾಟೀಲರೊಂದಿಗೆ ರಾಜಕೀಯ ಪಯಣ ಮುಂದುವರಿಸಿದರು. ವಿಧಾನ ಪರಿಷತ್ ಸದಸ್ಯರಾಗಿ ವಿರೋಧ ಪಕ್ಷದ ಉಪನಾಯಕರಾಗಿ ಸೇವೆ ಸಲ್ಲಿಸಿದರು. ಆಗ ರಾಮಕೃಷ್ಣ ಹೆಗಡೆಯವರು ಇಂದಿರಾ ಗಾಂಧಿಯವರ ಬದ್ಧ ರಾಜಕೀಯ ಎದುರಾಳಿಯಾಗಿದ್ದವರು. ಹೆಗಡೆ ನೇತೃತ್ವದಲ್ಲಿ ಬೊಮ್ಮಾಯಿಯವರು ರಾಜಕೀಯ ಕಾರ್ಯಕ್ಕೆ ಮೆರುಗು ನೀಡುತ್ತಾ ಹೋದರು. 1975ರ ತುರ್ತಪರಿಸ್ಥಿತಿ ಘೊಷಣೆ ವಿರುದ್ಧ ಹೆಗಡೆ-ಬೊಮ್ಮಾಯಿ ಜೋಡಿ ನಡೆಸಿದ ಹೋರಾಟ ಅವಿಸ್ಮರಣೀಯ. ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಸರ್ಕಾರದ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ವಿರುದ್ಧ ಗ್ರೋವರ್ ಆಯೋಗದ ರಚನೆಗೂ ಈ ಜೋಡಿ ಪ್ರಮುಖ ಕಾರಣಕರ್ತರು.

  ಕೆಲವು ವರ್ಷಗಳ ಕಾಲ ವೀರೇಂದ್ರ ಪಾಟೀಲರೊಂದಿಗೆ ಹೆಜ್ಜೆ ಹಾಕಿದ ಬೊಮ್ಮಾಯಿ 1978ರಲ್ಲಿ ಮೊದಲ ಬಾರಿಗೆ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದರು. ಆಗಲೇ ಅವರು ಹೃದಯಾಘಾತಕ್ಕೆ ಒಳಗಾಗಿ ಹೆಚ್ಚಿನ ಪ್ರಚಾರದಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ. ಆದರೆ ಅಷ್ಟರಲ್ಲೇ ಪ್ರಮುಖ ನಾಯಕರಾಗಿ ಗುರ್ತಿಸಿಕೊಂಡಿದ್ದ ಅವರಿಗೆ ಜನರ ಹೃದಯ ಗೆಲ್ಲುವುದು ಸಲೀಸಾಯಿತು. ಬೊಮ್ಮಾಯಿ ವಿಪಕ್ಷ ನಾಯಕರಾಗಿ ಅಂದಿನ ಜನತಾ ಪಕ್ಷಕ್ಕೆ ವಿಶೇಷ ಶಕ್ತಿ ತುಂಬಿದರು.

  ಜನತಾ ಸರ್ಕಾರ: 1982ರಲ್ಲಿ ದೇವರಾಜ ಅರಸು ಅವರು ಕಾಂಗ್ರೆಸ್ ತೊರೆದಿದ್ದವರ ಜೊತೆ ಸೇರಿ ಕ್ರಾಂತಿರಂಗ ಸ್ಥಾಪಿಸಿದ್ದರು. ಅರಸು ಕಾಲಾನಂತರ, ಕ್ರಾಂತಿರಂಗದಲ್ಲಿದ್ದ ಅಬ್ದುಲ್ ನಜೀರ್​ಸಾಬ್, ಜೆ.ಹೆಚ್.ಪಟೇಲ್, ಆರ್.ಎಲ್.ಜಾಲಪ್ಪ, ಎಸ್.ಬಂಗಾರಪ್ಪ ಮೊದಲಾದವರನ್ನು ಒಂದೇ ವೇದಿಕೆಗೆ ತರುವಲ್ಲಿ ಬೊಮ್ಮಾಯಿ ಶ್ರಮಿಸಿದರು. ಇದರ ಫಲವಾಗಿ 1983ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಜನತಾ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂತು. ಬೊಮ್ಮಾಯಿ ಪಕ್ಷದ ನಾಯಕತ್ವ ವಹಿಸಿದ್ದರು. ಬಡವರಪರ ಚಿಂತನೆ: ಬೊಮ್ಮಾಯಿ ಸದಾ ಬಡವರ ಚಿಂತನೆಯಲ್ಲಿ ತೊಡಗಿದ್ದವರು. ಇದೇ ಹಿನ್ನೆಲೆಯಲ್ಲಿ 80ರ ದಶಕದಲ್ಲೇ ಬಡವರಿಗೆ 2 ರೂ.ಗೆ ಕೆಜಿ ಅಕ್ಕಿ, ಕೆಜಿಗೆ 3 ರೂ.ರಂತೆ ಗೋದಿ ಸರಬರಾಜು ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಅಗ್ಗದ ದರದಲ್ಲಿ ಸೀರೆ, ಧೋತಿ ಪೂರೈಕೆಯೂ ಚಾಲ್ತಿಗೆ ಬಂದಿತ್ತು. ಆದರೆ ಇದರಿಂದ ರಾಜ್ಯದ ಬೊಕ್ಕಸದ ಮೇಲೆ ಯಾವುದೇ ಭಾರ ಬೀಳದಂತೆ ಸೋರಿಕೆ ತಡೆಯುವ ನಿಟ್ಟಿನಲ್ಲಿ ಬೊಮ್ಮಾಯಿ ವಿಶೇಷ ಕಾಳಜಿ ವಹಿಸಿದ್ದು ಕರ್ನಾಟಕದ ಅಭಿವೃದ್ಧಿಶೀಲ ರಾಜಕಾರಣಕ್ಕೆ ಒಂದು ನಿದರ್ಶನವಾಗಿದೆ. 2013ರಲ್ಲಿ ಕೇಂದ್ರದ ಯುಪಿಎ ಸರ್ಕಾರ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಹೆಸರಿನಲ್ಲಿ ಬೊಮ್ಮಾಯಿಯವರ ಚಿಂತನೆ ಯಾಗಿದ್ದ ಅಗ್ಗದಲ್ಲಿ ಆಹಾರ ಧಾನ್ಯ ವಿತರಿಸುವ ವ್ಯವಸ್ಥೆಯನ್ನು ನಕಲು ಮಾಡಿತು.

  ಬೊಮ್ಮಾಯಿಯವರು 1982ರಿಂದ 1988ರವರೆಗೆ ಜನತಾ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.1985ರಲ್ಲಿ ಜನತಾಪಕ್ಷ ಸ್ಪರ್ಧಿಸಿದ್ದ 205 ಕ್ಷೇತ್ರಗಳ ಪೈಕಿ 139 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಇದರಲ್ಲಿ ಬೊಮ್ಮಾಯಿಯವರ ಪಾತ್ರ ಮುಖ್ಯವಾಗಿತ್ತು. ಅವರೆಂದೂ ಅಧಿಕಾರಕ್ಕಾಗಿ ಹಾತೊರೆಯಲಿಲ್ಲ. ಆದರೆ ರಾಮಕೃಷ್ಣ ಹೆಗಡೆ ರಾಜೀನಾಮೆ ನೀಡಿದ ನಂತರ ಕರ್ನಾಟಕದ ಹಿತ ರಕ್ಷಣೆ ಮಾಡುವ ಹೊಣೆಗಾರಿಕೆ ಬೊಮ್ಮಾಯಿ ಹೆಗಲಿಗೇರಿತು. ಅವರು ಮುಖ್ಯಮಂತ್ರಿಯಾಗಿ ಅಲ್ಪಾವಧಿಯಲ್ಲೇ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಗಮನ ಹರಿಸಿದರು. ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದ ಅವರು, ರಾಜ್ಯದ ನೀರಾವರಿ ಯೋಜನೆಗಳಿಗೆ ವಿಶೇಷ ಆದ್ಯತೆ ನೀಡಿದರು. ಜನರ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡಲು ಬೊಮ್ಮಾಯಿ ನಾಯಕತ್ವ ವಹಿಸಿದ ಆಸಕ್ತಿಯನ್ನು ಮರೆಯಲಾಗದು.

  ಕೇಂದ್ರ ಸಚಿವರಾಗಿ ಛಾಪು: ಎಸ್.ಆರ್.ಬೊಮ್ಮಾಯಿಯವರು ಕೇಂದ್ರದಲ್ಲೂ ಸಚಿವರಾಗಿ ಛಾಪು ಮೂಡಿಸಿದರು. ಎಚ್.ಡಿ.ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದಾಗ ಹಾಗೂ ನಂತರ ಐ.ಕೆ.ಗುಜ್ರಾಲ್ ನಾಯಕತ್ವದಲ್ಲಿ 1996ರಿಂದ 1998ರ ವರೆಗೆ ಬೊಮ್ಮಾಯಿಯವರು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಮಾಡಿದ ಕಾರ್ಯವು ಅವರನ್ನು ಭಾರತದ ಮುತ್ಸದ್ದಿಗಳ ಸಾಲಿನಲ್ಲಿ ನಿಲ್ಲಿಸಿತ್ತು ಎಂದರೆ ಉತ್ಪ್ರೇಕ್ಷೆಯಲ್ಲ. ಜನತಾ ಪರಿವಾರದ ಒಗ್ಗಟ್ಟಿಗಾಗಿ ಶ್ರಮಿಸಿದರು.

  ಜನನಾಯಕನಾಗಿ ಬೊಮ್ಮಾಯಿಯವರು ತೋರಿದ ಕಳಕಳಿ, ಉತ್ತಮ ಆಡಳಿತಕ್ಕಾಗಿ ಅವರು ತೋರಿದ ಪ್ರಾಮಾಣಿಕತೆ ಹಾಗೂ ಸಾರ್ವಜನಿಕ ಜೀವನದಲ್ಲಿ ತೋರಿದ ಸ್ಪಂದನಶೀಲ ಮಾರ್ಗದರ್ಶನದ ವಿಶಿಷ್ಟ ಶೈಲಿಯನ್ನು ಭಾರತವೆಂದೂ ಮರೆಯುವುದಿಲ್ಲ.

  (ಲೇಖಕರು ಹಿರಿಯ ಪತ್ರಕರ್ತರು)

  ಪ್ರತಿ ಮನೆಗೂ ಉಚಿತ ವಿದ್ಯುತ್, ಗೃಹಜ್ಯೋತಿ ಯೋಜನೆ ಜಾರಿಗೂ ಆದೇಶ: ಷರತ್ತುಗಳ ವಿವರ ಇಲ್ಲಿದೆ..

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts