ಪೊಲೀಸರ ಮಧ್ಯಸ್ಥಿಕೆಯಲ್ಲಿ ಪ್ರೇಮಿಗಳ ಮದುವೆ

ಭಟ್ಕಳ: ಮದುವೆಯಾಗಲು ವಿಳಂಬ ಮಾಡುತ್ತಿದ್ದ ಪ್ರಿಯಕರನ ವಿರುದ್ಧ ಯುವತಿಯೊಬ್ಬಳು ಠಾಣೆಯಲ್ಲಿ ದೂರು ನೀಡಿ ಪೊಲೀಸರ ಮಧ್ಯಸ್ಥಿಕೆಯಲ್ಲಿ ವಿವಾಹದ ಘಟನೆ ನಗರಠಾಣೆಯ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.

ಹನುಮಾನನಗರ ಯುವಕ ರೇವಂತ ನಾಯ್ಕ (23) ಹಾಗೂ ಪುರವರ್ಗ ಮೂಲದ ಯುವತಿ ಹೇಮಾವತಿ ನಾಯ್ಕ (20) ಠಾಣೆಯ ಮೇಟ್ಟಿಲೇರಿ ಮದುವೆಯಾದ ಜೋಡಿಗಳು.

ಕಳೆದ ಐದು ವರ್ಷದಿಂದ ಇಬ್ಬರು ಪ್ರೀತಿಸುತ್ತಿದ್ದರು. ವರ್ಷಗಳ ಹಿಂದೆ ಯುವತಿ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು. ವಿಳಂಬ ಮಾಡುತ್ತಿದ್ದ ಯುವಕ ನೆಪ ಹೇಳಿ ಮದುವೆ ವಿಚಾರದಿಂದ ತಪ್ಪಿಸಿಕೊಳ್ಳುತ್ತಿದ್ದ. ಇದರಿಂದ ಬೇಸತ್ತ ಯುವತಿ ಹಾಗೂ ಆಕೆಯ ಕುಟುಂಬದವರು ಶನಿವಾರ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿ ಯುವಕನನ್ನು ಕರೆಯಿಸಿ ಮದುವೆ ಮಾಡಿಸಿಕೊಡುವಂತೆ ಕೇಳಿಕೊಂಡಿದ್ದರು. ಆದರೆ, ಅಂದು ಸಮಸ್ಯೆಗೆ ಪರಿಹಾರ ದೊರಕಿಲ್ಲ. ಇದರಿಂದ ಭಾನುವಾರ ಯುವತಿ ದೂರು ನೀಡಿದ್ದಳು.

ಮತ್ತೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಎರಡು ಕುಟುಂಬದವರನ್ನು ಠಾಣೆಗೆ ಕರೆಯಿಸಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಯತ್ನಿಸಿದ್ದಾರೆ. ಕೊನೆಯಲ್ಲಿ ರಾಜಿ ಸಂಧಾನದಲ್ಲಿ ಪ್ರಕರಣ ಇತ್ಯರ್ಥವಾಗಿದೆ. ಪೊಲೀಸ್ ಠಾಣೆಯಲ್ಲಿಯೇ ಮದುವೆ ಮಾಡಿಸುವಂತೆ ಯುವತಿಯ ಕುಟುಂಬದವರು ಮನವಿ ಮಾಡಿದ್ದರು. ನಂತರ ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನಕ್ಕೆ ತೆರಳಿ ಕುಟುಂಬದವರು, ಸ್ನೇಹಿತರ ಸಮ್ಮುಖದಲ್ಲಿ ಗೋಧೂಳಿ ಲಗ್ನದಲ್ಲಿ ಶಾಸ್ತ್ರೋಕ್ತವಾಗಿ ಯುವಕ-ಯುವತಿಗೆ ಮದುವೆ ಮಾಡಿಸಲಾಗಿದೆ. ನವದಂಪತಿಗೆ ಬುದ್ದಿವಾದ ಹೇಳಿದ ಪೊಲೀಸರು ಎರಡು ಕುಟುಂಬದವರಿಂದ ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ.