ಕಾರಾಗೃಹದ ಮೇಲೆ ಪೊಲೀಸರು ದಿಢೀರ್ ದಾಳಿ

ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ಕೇಂದ್ರ ಕಾರಾಗೃಹದ ಮೇಲೆ ದಿಢೀರ್ ದಾಳಿ ನಡೆಸಿದ ಪೊಲೀಸರು 1900 ರೂ. ನಗದು ವಶಪಡಿಸಿಕೊಂಡಿದ್ದಾರೆ.

ಮೈಸೂರು ಕೇಂದ್ರ ಕಾರಾಗೃಹದಲ್ಲಿರುವ ರೌಡಿಗಳು ಮತ್ತು ಸಮಾಜಘಾತುಕ ವ್ಯಕ್ತಿಗಳು ಕಾರಾಗೃಹದಿಂದಲೇ ಮೊಬೈಲ್ ಫೋನ್‌ಗಳ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವ ಕೃತ್ಯಗಳನ್ನು ಎಸಗುವ ಸಾಧ್ಯತೆಗಳು ಇರುವ ಹಿನ್ನೆಲೆಯಲ್ಲಿ ಹಾಗೂ ಅಕ್ರಮವಾಗಿ ಮಾದಕ ವಸ್ತುಗಳು, ಮೊಬೈಲ್ ಫೋನ್‌ಗಳು, ನಗದು ಹಣ ಮತ್ತು ಆಯುಧಗಳನ್ನು ಹೊಂದಿರುವ ಬಗ್ಗೆ ಪರಿಶೀಲನೆ ನಡೆಸುವ ಸಂಬಂಧ ದಾಳಿ ಮಾಡಲಾಗಿದೆ.

ನಗರ ಪೊಲೀಸ್ ಆಯುಕ್ತರವರಾದ ಕೆ.ಟಿ. ಬಾಲಕೃಷ್ಣ, ಡಿಸಿಪಿ ಮುತ್ತುರಾಜು 175 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, 17 ತಂಡಗಳಲ್ಲಿ ಸೋಮವಾರ ಮಧ್ಯಾಹ್ನ ಕೇಂದ್ರ ಕಾರಾಗೃಹಕ್ಕೆ ದಿಢೀರ್ ದಾಳಿ ನಡೆಸಿ, ಬಂಧಿಗಳನ್ನು ಹಾಗೂ ಬ್ಯಾರಕ್‌ಗಳನ್ನು ಪರಿಶೀಲಿಸಿದಾಗ 1900 ರೂ. ಹಣ ದೊರೆತಿದೆ.

ಚುನಾವಣೆ ಶಾಂತಿಯುತವಾಗಿ ನಡೆಸುವ ಸಂಬಂಧ ಕೈಗೊಂಡಿರುವ ವಿವಿಧ ಮುನ್ನೆಚ್ಚರಿಕೆ ಕ್ರಮಗಳಲ್ಲಿ ಕಾರಾಗೃಹದ ದಿಢೀರ್ ದಾಳಿಯೂ ಒಂದಾಗಿದ್ದು, ಇತರ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಮೈಸೂರು ನಗರ ಪೊಲೀಸ್ ವತಿಯಿಂದ ಈಗಾಗಲೇ ಮಾಡಲಾಗಿದ್ದು, ಸಾರ್ವಜನಿಕರು ನಿರ್ಭೀತಿಯಿಂದ ಮತದಾನ ಮಾಡಬಹುದು ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *