ಮುಧೋಳ: ರನ್ನ ಬೆಳಗಲಿ ಹಾಗೂ ಮಧೋಳದಲ್ಲಿ ಫೆ.21ರಿಂದ 24ರವರೆಗೆ ಜರುಗಲಿರುವ ರನ್ನ ವೈಭವ ಕಾರ್ಯಕ್ರಮಕ್ಕೆ ಎಸ್‌ಪಿ ಅಮರನಾಥರೆಡ್ಡಿ ಮಾರ್ಗದರ್ಶನದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು ಎಂದು ಜಮಖಂಡಿ ಡಿವೈಎಸ್‌ಪಿ ಈ. ಶಾಂತವೀರ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.22ರಂದು ರನ್ನ ಬೆಳಗಲಿ ಸಾಂಸ್ಕೃತಿಕ ವೈಭವಕ್ಕೆ ಮಹಾಲಿಂಗಪುರ, ಮುಧೋಳನಿಂದ ಬರುವ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಫೆ.23 ಹಾಗೂ 24 ರಂದು ಮುಧೋಳ ರನ್ನ ಕ್ರೀಡಾಂಗಣದಲ್ಲಿ ಜರುಗಲಿರುವ ಸಾಂಸ್ಕೃತಿಕ ವೈಭವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ರನ್ನ ವೃತ್ತದಿಂದ ಜೋಶಿ ಪ್ಲಾಟ್‌ವರೆಗೆ ಬ್ಯಾರಿಕೇಡ್ ಹಾಕಲಾಗುತ್ತಿದ್ದು, ನಗರದ ಧಾರವಾಡ-ವಿಜಯಪುರ ರಾಜ್ಯ ಹೆದ್ದಾರಿಯಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಮಾಲಾಪುರ ಬಳಿ ಬೈಪಾಸ್‌ದಿಂದ ಜೀರಗಾಳ ಕ್ರಾಸ್ ಮೂಲಕ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾರಿಗೆ ಬಸ್‌ಗಳ ಓಡಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.
ನಗರ ಹಾಗೂ ರನ್ನ ಬೆಳಗಲಿಯಲ್ಲಿ 100 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. 5 ಡಿವೈಎಸ್‌ಪಿ, 17 ಸಿಪಿಐ, 61 ಪಿಎಸ್‌ಐ, 144 ಎಎಸ್‌ಐ, 800 ಪೊಲೀಸ್ ಸಿಬ್ಬಂದಿ, 10 ಹೆಚ್ಚುವರಿ ಅರೆ ಸೇನಾಪಡೆಗಳನ್ನು ಭದ್ರತೆಗೆ ನಿಯೋಜಿಸಲಾಗುವುದು. ಗಣ್ಯ ವ್ಯಕ್ತಿಗಳಿಗೆ ವಿಶೇಷ ಭದ್ರತೆ ಒದಗಿಸಲಾಗುವುದು.ಸಾರ್ವಜನಿಕರಿಗೆ ತೊಂದರೆಯುಂಟಾದರೆ ಪೊಲೀಸ್ ಸಹಾಯವಾಣಿ 112 ಹಾಗೂ ಡಿವೈಎಸ್‌ಪಿ ಮೋ.ಸಂಖ್ಯೆ 9480803900 ಕರೆ ಮಾಡುವಂತೆ ತಿಳಿಸಿದರು. ಸಿಪಿಐ ಮಹಾದೇವ ಶಿರಹಟ್ಟಿ, ಎಸ್‌ಐ ಅಜೀತ್‌ಕುಮಾರ ಹೊಸಮನಿ ಮತ್ತಿತರರಿದ್ದರು.