ಗಿರಿಜನರ ಮೇಲೆ ಪೊಲೀಸರ ಹಲ್ಲೆ

ಕಳಸ: ಕಲಶೇಶ್ವರ ಜಾತ್ರೆ ಸಂದರ್ಭ ಗಿರಿಜನರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದನ್ನು ಆದಿವಾಸಿಗಳು ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ರಥೋತ್ಸವ ಮುಗಿಸಿ 15 ಜನ ಭಾನುವಾರ ಬೆಳಗಿನ ಜಾವ ಕಾರಗದ್ದೆ ಸಮೀಪದ ಹೇರಡಿಕೆಗೆ ತೆರಳಲು ಕೆ.ಎಂ.ರಸ್ತೆಯಲ್ಲಿ ಆಟೋಗಾಗಿ ಕಾಯುತ್ತಿದ್ದೆವು. ಜೀಪಿನಿಂದ ಇಳಿದ ನಾಲ್ವರು ಪೊಲೀಸರು ಏಕಾಏಕಿ ನಮ್ಮ ಮೇಲೆ ಲಾಠಿಯಿಂದ ಹಲ್ಲೆ ಮಾಡಿದರು. ಇದರಿಂದ ನಮಗೆ ಗಾಯಗಳಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇವೆ. ನಮ್ಮ ಮೇಲೆ ದೌರ್ಜನ್ಯ ಎಸಗಿದ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹೇರಡಿಕೆಯ ನಾಗೇಶ್, ದೇವಪ್ಪ, ರಾಕೇಶ್, ಶ್ರೀನಿವಾಸ, ಉಮೇಶ್ ಎಸ್ಪಿಗೆ ಪತ್ರ ಬರೆದಿದ್ದಾರೆ.

ಕಳಸ ಠಾಣೆಗೂ ದೂರು ನೀಡಲಾಗಿದೆ. ಕಳಸ ಠಾಣೆಯ ಬಳಿ ಭಾನುವಾರ 100ಕ್ಕೂ ಅಧಿಕ ಬುಡಕಟ್ಟು ಜನರು ಜಮಾಯಿಸಿ ಕಲಶೇಶ್ವರನ ಸೇವೆ ಮಾಡುವ ಗಿರಿಜನರ ಮೇಲಿನ ಹಲ್ಲೆ ಮಾಡಿದ್ದು ಅಕ್ಷಮ್ಯ ಎಂದರು.

ಇಬ್ಬರು ಶಾಲಾ ಬಾಲಕರು ಸೇರಿ ಗಿರಿಜನರ ಮೇಲೆ ಪೊಲೀಸರು ಅಮಾನವೀಯವಾಗಿ ವರ್ತಿಸಿರುವುದು ಸಮರ್ಥನೀಯವಲ್ಲ ಎಂದು ಮಲೆನಾಡು ಸಂರಕ್ಷಣಾ ವೇದಿಕೆಯ ಕೆ.ಎಲ್.ವಾಸು ಅಸಮಾಧಾನ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *