ಸಾರ್ವಜನಿಕರು ದೂರು ನೀಡುವಾಗ ಪೊಲೀಸ್‌ ಠಾಣೆ ವ್ಯಾಪ್ತಿ ನೆಪವೊಡ್ಡಿ ಎಫ್‌ಐಆರ್‌ ದಾಖಲಿಸಲು ನಿರಾಕರಿಸಬಾರದು: ಹೈಕೋರ್ಟ್‌

ಬೆಂಗಳೂರು: ಸಾರ್ವಜನಿಕರು ದೂರು ನೀಡುವ ವೇಳೆಯಲ್ಲಿ ಪೊಲೀಸ್‌ ಠಾಣೆ ವ್ಯಾಪ್ತಿಯ ನೆಪವೊಡ್ಡಿ ಎಫ್‌ಐಆರ್‌ ದಾಖಲಿಸಲು ನಿರಾಕರಿಸಬಾರದು ಎಂದು ರಾಜ್ಯ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಸಾರ್ವಜನಿಕರು ನೀಡುವ ದೂರುಗಳನ್ನಾಧರಿಸಿ ಎಫ್‌ಐಆರ್ ದಾಖಲಿಸುವಾಗ ಪೊಲೀಸ್ ಠಾಣಾ ವ್ಯಾಪ್ತಿ ಕೇಳದಂತೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ 1 ತಿಂಗಳೊಳಗೆ ಆದೇಶ ಹೊರಡಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ನಿರ್ದೇಶನ ನೀಡಿದೆ.

ಸಾರ್ವಜನಿಕರು ಯಾವುದೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು ಕೂಡ ಎಫ್ಐಆರ್ ದಾಖಲಿಸಬೇಕು.‌ ನಂತರ ಆ ಎಫ್ಐಆರ್ ಅನ್ನು ಸಂಬಂಧಪಟ್ಟ‌ ಪೊಲೀಸ್ ಠಾಣೆಗಳಿಗೆ ಕಳುಹಿಸಬೇಕು. ಎಫ್‌ಐಆರ್ ದಾಖಲಿಸುವಾಗ ಪ್ರಕರಣ ತಮ್ಮ ವ್ಯಾಪ್ತಿ ಬರುವುದಿಲ್ಲ ಎಂದು ಹೇಳಿ ಎಫ್ಐಆರ್ ದಾಖಲಿಸಲು ನಿರಾಕರಿಸಬಾರದು. ಒಂದೊಮ್ಮೆ ‌ಠಾಣಾ ವ್ಯಾಪ್ತಿಗೆ‌‌ ಒಳಗೊಂಡಿಲ್ಲ‌ ಎಂದು ಸಾರ್ವಜನಿಕರು ನೀಡುವ ದೂರು ಸ್ವೀಕರಿಸದೆ ಹೋದರೆ ಅಂತಹ ಪೊಲೀಸರ ವಿರುದ್ಧ ಇಲಾಖೆ ತನಿಖೆ ನಡೆಸಬೇಕು ಹಾಗೂ ಪ್ರಾಸಿಕ್ಯೂಷನ್‌ಗೆ ಗುರಿಪಡಿಸಬೇಕು. ಈ ಸಂಬಂಧ ರಾಜ್ಯದ ಎಲ್ಲ ಪೊಲೀಸ್ ಠಾಣಾಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಹೈಕೋರ್ಟ್‌ ತಿಳಿಸಿದೆ.

ಈ ಕುರಿತು ಒಂದು ತಿಂಗಳೊಳಗೆ ಆದೇಶ ಹೊರಡಿಸಬೇಕು ಎಂದು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ಹೈಕೋರ್ಟ್ ಸೂಚನೆ ನೀಡಿದೆ.

ವಕೀಲ ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ತೀರ್ಪು ನೀಡಿದೆ. (ದಿಗ್ವಿಜಯ ನ್ಯೂಸ್)

One Reply to “ಸಾರ್ವಜನಿಕರು ದೂರು ನೀಡುವಾಗ ಪೊಲೀಸ್‌ ಠಾಣೆ ವ್ಯಾಪ್ತಿ ನೆಪವೊಡ್ಡಿ ಎಫ್‌ಐಆರ್‌ ದಾಖಲಿಸಲು ನಿರಾಕರಿಸಬಾರದು: ಹೈಕೋರ್ಟ್‌”

  1. ಅದ್ಭುತವಾದ ತೀರ್ಪು, ಸಾರ್ವಜನಿಕರಿಗೆ ಬಹಳ ಉಪಯುಕ್ತವಾಗಿದೆ ಆದರೇ ಪೋಲೀಸ್ ಇಲಾಖೆಗೆ ತಕ್ಕಷ್ಟು ಸಿಬ್ಬಂದಿ ವ್ಯವಸ್ಥೆಯನ್ನೂ ಸಹ ಮಾಡಬೇಕು ಕೆಲವೊಂದು ಠಾಣೆಗಳಲ್ಲಿ ಸಿಬ್ಬಂದಿಗಳು ಕಡಿಮೆ ಇರುತ್ತದೆ ಆಗ ಈ ತೀರ್ಪನ್ನು ಪಾಲಿಸಲು ಬಹಳ ಕಷ್ಟವಾಗುತ್ತದೆ

Leave a Reply

Your email address will not be published. Required fields are marked *