ಪೊಲೀಸ್ ಸೇವೆ ಜನಮನ ಮುಟ್ಟಲಿ

ವಿಜಯವಾಣಿ ಸುದ್ದಿಜಾಲ ಶಿಗ್ಗಾಂವಿ

‘ಧೈರ್ಯಂ ಸರ್ವತ್ರ ಸಾಧನಂ’ ಎಂಬ ಧ್ಯೇಯ ವ್ಯಾಕ್ಯದೊಂದಿಗೆ ರಾಜ್ಯ ಮೀಸಲು ಪೊಲೀಸ್ ಪಡೆ ಕಾರ್ಯದಲ್ಲಿ ನಿರತವಾಗಿದೆ. ಅಧಿಕಾರ ಎಂಬುದು ದರ್ಪದಿಂದಲ್ಲ, ಸೇವೆಯಿಂದ ಎಂಬುದು ಜನಮನಕ್ಕೆ ಮುಟ್ಟಬೇಕು. ಅಂತಹ ಸೇವಾ ಭಾವನೆ ನಮ್ಮದಾಗಿದೆ ಎಂದು ಸಾಬೀತು ಮಾಡಿದೆ ಎಂದು ರಾಜ್ಯ ಮೀಸಲು ಪೊಲೀಸ್ ಪಡೆ ಮಹಾನಿರ್ದೇಶಕ ಭಾಸ್ಕರರಾವ್ ಹೇಳಿದರು.

ತಾಲೂಕಿನ ಗಂಗೀಬಾವಿ ಕೆಎಸ್​ಆರ್​ಪಿ 10ನೇ ಪಡೆ ಆವರಣದಲ್ಲಿ ಶುಕ್ರವಾರ ರಾಜ್ಯ ಮೀಸಲು ಪೊಲೀಸ್ ಪಡೆ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯ ಮೀಸಲು ಪೊಲೀಸ್ ಪಡೆ ಅರೆಸೇನಾ ಪಡೆಯಂತೆ ಕಾರ್ಯ ನಿರ್ವಹಿಸುತ್ತಿದ್ದು, ದೇಶದ ಜನರ ಸೇವಾ ಮನೋಭಾವನೆ ಇಲ್ಲಿ ಮುಖ್ಯವಾಗಿದೆ. ಹೀಗಾಗಿ ಇತರೆ ಇಲಾಖೆ ಸೇವೆಗಳಿಗಿಂತ ಪೊಲೀಸರ ಸೇವೆ ವಿಭಿನ್ನವಾಗಿದ್ದು, ಸಮಾಜದ ಸುವ್ಯವಸ್ಥೆ, ಶಾಂತಿ ಕಾಪಾಡುವುದು ಪೊಲೀಸರ ಕರ್ತವ್ಯವಾಗಿದೆ ಎಂದರು.

ಹಾಸನ 11ನೇ ಕೆಎಸ್​ಆರ್​ಪಿ ಪಡೆ ಕಮಾಂಡಂಟ್ ಕೃಷ್ಣಪ್ಪ ವರದಿ ವಾಚಿಸಿದರು. ಗಂಗೀಬಾವಿ ಕೆಎಸ್​ಆರ್​ಪಿ 10ನೇ ಪಡೆ ಕಮಾಂಡಂಟ್ ಬಿ.ಎಂ. ಪ್ರಸಾದ ಪ್ರತಿಜ್ಞಾ ವಿಧಿ ಬೋಧಿಸಿದರು. ಬೆಂಗಳೂರು ಡಿಐಜಿಪಿ ಸತೀಶಕುಮಾರ, ಶಾಸಕ ಬಸವರಾಜ ಬೊಮ್ಮಾಯಿ, ಬೆಂಗಳೂರು ಕೆಎಸ್​ಆರ್​ಪಿ 4ನೇ ಪಡೆ ಕಮಾಂಡಂಟ್ ನಿಶಾ ಜೇಮ್್ಸ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ, ವರಿಷ್ಠಾಧಿಕಾರಿಗಳಾದ ಶ್ರೀನಾಥ ಜೋಶಿ, ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ, ತರಬೇತಿ ಪ್ರಾಚಾರ್ಯ ರಾಮಕೃಷ್ಣ ಮತ್ತಿತರರು ಇದ್ದರು.

305 ಪ್ರಶಿಕ್ಷಣಾರ್ಥಿಗಳು..: ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಹಾಸನ, ಬೆಂಗಳೂರಿನ ಸುಮಾರು 305 ಪ್ರಶಿಕ್ಷಣಾರ್ಥಿಗಳಿದ್ದಾರೆ. ಅವರಿಗೆ ಸುಮಾರು 9 ತಿಂಗಳು ತರಬೇತಿ ನೀಡಲಾಗಿದೆ. ತರಬೇತಿ ಅವಧಿಯಲ್ಲಿ ಕಾನೂನು ಅರಿವು, ಕಾಯ್ದೆಗಳು, ನಿಯಮ ಪಾಲನೆ, ಅರಣ್ಯ ಸಂರಕ್ಷಣೆ, ಶಾಂತಿ, ಸುವ್ಯವಸ್ಥೆಯಲ್ಲಿನ ಪಾತ್ರ ಸೇರಿ ಹತ್ತಾರು ರೀತಿಯ ಕಠಿಣ ತರಬೇತಿ ನೀಡಿ ಪರಿಪೂರ್ಣರನ್ನಾಗಿ ಮಾಡಲಾಗಿದೆ. ಸಿಕ್ಕಿರುವ ಅವಕಾಶದಲ್ಲಿ ಉತ್ತಮ ಪ್ರತಿಭೆ ತೋರಿಸುವ ಮೂಲಕ ನಿಷ್ಠೆ, ಪ್ರಾಮಾಣಿಕರಾಗಿ ಸೇವೆ ಸಲ್ಲಿಸಿ ನಾಡಿಗೆ, ದೇಶಕ್ಕೆ ಖ್ಯಾತಿ ತರಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ಹಿರಿಯ ಅಧಿಕಾರಿಗಳು ಸಲಹೆ ನೀಡಿದರು.