ಶಬರಿಮಲೆಯಲ್ಲಿ 15,000 ಪೊಲೀಸರ ನಿಯೋಜನೆ ಅಗತ್ಯವಿದೆಯಾ: ಕೇರಳ ಸರ್ಕಾರಕ್ಕೆ ಹೈಕೋರ್ಟ್​ ಪ್ರಶ್ನೆ

ನವದೆಹಲಿ: ಶಬರಿಮಲೆ ದೇವಸ್ಥಾನದ ಸುತ್ತ 15,000 ಜನ ಪೊಲೀಸರನ್ನು ಯಾಕೆ ನಿಯೋಜಿಸಿದ್ದೀರಿ? ಸುಪ್ರೀಂಕೋರ್ಟ್​ ತೀರ್ಪಿನ ಹೆಸರಲ್ಲಿ ಪೊಲೀಸರು ಹೇಗೆ ಇಷ್ಟೊಂದು ಬಿಗಿ ಹಿಡಿತ ಸಾಧಿಸುತ್ತಿದ್ದಾರೆ ಎಂದು ಕೇರಳ ಹೈಕೋರ್ಟ್​ ಸರ್ಕಾರವನ್ನು ಪ್ರಶ್ನಿಸಿದೆ.

ಹಿಂದಿನ ತಿಂಗಳು ಶಬರಿಮಲೆ ದೇಗುಲ ಬಾಗಿಲು ತೆರೆದ ಸಂದರ್ಭದಲ್ಲಿ ಪ್ರತಿಭಟನೆ ಸಂದರ್ಭ ಪೊಲೀಸರು ಹಲವು ನಿರಪರಾಧಿಗಳ ಮೇಲೆಯೂ ಲಾಠಿ ಚಾರ್ಜ್​ ನಡೆಸಿದ್ದರು. ಅಲ್ಲದೆ, ದೂರು ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಗಿದ್ದರು. ಈ ಬಗ್ಗೆ ಭಕ್ತರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಸೋಮವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಭಕ್ತರ ವಿರೋಧಿಯಾಗಿ ಏಕೆ ನಡೆದುಕೊಳ್ಳುತ್ತಿದ್ದೀರಿ? ಪಥನಂತಿಟ್ಟ ಜಿಲ್ಲೆಯಲ್ಲಿ ಅಷ್ಟೆಲ್ಲ ಪೊಲೀಸರ ನಿಯೋಜನೆ ಅಗತ್ಯವಾ? ಈ ಬಗ್ಗೆ ವಿವರಣೆ ನೀಡಿ ಎಂದು ಸರ್ಕಾರದ ಪರ ವಕೀಲರನ್ನು ಕೇಳಿದೆ.

ಶಬರಿಮಲೆ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಮೂಲಸೌಕರ್ಯ ಒದಗಿಸಲೂ ಸರ್ಕಾರ ವಿಫಲವಾಗಿರುವ ಬಗ್ಗೆ ಸ್ಪಷ್ಟನೆ ನೀಡಲು ಹೈಕೋರ್ಟ್​ ಪೀಠ ಕೇಳಿದೆ ಎನ್ನಲಾಗಿದೆ.

ಶಬರಿಮಲೆ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶವಿದೆ ಎಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದ ಬಳಿಕ ಶುಕ್ರವಾರ ಮೂರನೇ ಬಾರಿಗೆ ದೇವಾಲಯದ ಬಾಗಿಲು ತೆರೆಯಲಾಗಿದೆ. 64 ದಿನಗಳ ವಾರ್ಷಿಕ ಪೂಜೆಗೋಸ್ಕರ ಬಾಗಿಲು ತೆರೆಯಲಾಗಿದ್ದು ಭದ್ರತೆಗಾಗಿ 15000ಪೊಲೀಸರನ್ನು ನಿಯೋಜಿಸಲಾಗಿದೆ.