ಶಾಸಕ ಗಣೇಶ್ ಬಂಧನಕ್ಕೆ ಬಲೆ ಬೀಸಿದ ಪೊಲೀಸ್

ರಾಮನಗರ: ಶಾಸಕ ಆನಂದ್ ಸಿಂಗ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಬಂಧನಕ್ಕೆ ರಾಮನಗರ ಪೊಲೀಸರು ಬಲೆ ಬೀಸಿದ್ದಾರೆ. ಬಿಡದಿ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗುತ್ತಿದ್ದಂತೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ರಮೇಶ್ ಮೂರು ತಂಡ ರಚಿಸಿ ಗಣೇಶ್ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸಿದ್ದಾರೆ.

ಗಣೇಶ್ ನಾಪತ್ತೆ: ಆನಂದ್ ಸಿಂಗ್ ಆಸ್ಪತ್ರೆ ಸೇರಿದರೂ ಪ್ರಮುಖ ನಾಯಕರು ಏನೂ ನಡೆದೇ ಇಲ್ಲ ಎಂದು ಬಿಂಬಿಸಲು ಪ್ರಯತ್ನಿಸಿದರು. ಸತ್ಯ ಹೊರ ಬಂದ ಹಿನ್ನೆಲೆಯಲ್ಲಿ ಸ್ವತಃ ಗಣೇಶ್, ನಾನು ಹಲ್ಲೆ ಮಾಡಿಲ್ಲ. ಬೇಕಾದರೆ ಆನಂದ್ ಸಿಂಗ್​ಅವರಲ್ಲಿ ಕ್ಷಮೆ ಕೋರುತ್ತೇನೆ ಎನ್ನುವ ಮೂಲಕ ಘಟನೆ ಮರೆ ಮಾಚುವ ಪ್ರಯತ್ನ ನಡೆಸಿದ್ದರು. ಸೋಮವಾರ ರೆಸಾರ್ಟ್ ತೊರೆದಿದ್ದ ಗಣೇಶ್, ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದಾರೆ.

ಬಂಧನಕ್ಕೆ ಒತ್ತಡ?: ಇಬ್ಬರು ಶಾಸಕರ ನಡುವಿನ ಹೊಡೆದಾಟ ಪ್ರಕರಣದಲ್ಲಿ ಲಾಭ-ನಷ್ಟಗಳ ಲೆಕ್ಕಾಚಾರಕ್ಕೆ ಇಳಿದಿರುವ ಕಾಂಗ್ರೆಸ್ ನಾಯಕರು, ಗಣೇಶ್​ರನ್ನು ಬಂಧಿಸಲೇಬೇಕು ಎನ್ನುವ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಈಗಾಗಲೇ ಪಕ್ಷದಿಂದ ಅಮಾನತು ಗೊಂಡಿರುವ ಗಣೇಶ್ ಬಂಧನವಾದರೆ ಜೈಲಿಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಆಗ ಬಿಜೆಪಿ ಸಹ ಕಳಂಕಿತ ಶಾಸಕನನ್ನು ಸೆಳೆಯುವ ಪ್ರಯತ್ನ ಕೈ ಬಿಡುತ್ತದೆ. ಕಾಂಗ್ರೆಸ್ ನಿರಾಳವಾಗಿರಬಹುದು ಎನ್ನುವ ಲೆಕ್ಕಾಚಾರ ಇದರ ಹಿಂದಿದೆ. ರಾಜ್ಯ ಕೈ ನಾಯಕರೊಬ್ಬರು ಗಣೇಶ್ ಬಂಧಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿ ಮೆತ್ತಗೆ, ಅತೃಪ್ತರೇ ಫೀಲ್ಡಿಗೆ

ಬೆಂಗಳೂರು: ಕಾಂಗ್ರೆಸ್​ನ ರೆಸಾರ್ಟ್ ಹಿಡಿತದಿಂದ ತಪ್ಪಿಸಿಕೊಂಡು ಬಂದಿರುವ ಅತೃಪ್ತ ಶಾಸಕರನ್ನು ಮನವೊಲಿಸುವ ಕೆಲಸ ಮತ್ತೆ ಶುರುವಾಗಿದೆ. ರೆಸಾರ್ಟ್

ನಲ್ಲಿ ಪೆಟ್ಟುತಿಂದು ಆಸ್ಪತ್ರೆಯಲ್ಲಿರುವ ಆನಂದ್ ಸಿಂಗ್ ಯಾವುದೇ ಸಂದರ್ಭ ಅತೃಪ್ತರ ಬಣದಲ್ಲಿ ಗುರುತಿಸಿಕೊಳ್ಳಬಹುದು ಎಂಬ ಬಲವಾದ ಅನುಮಾನ ಕೈ ನಾಯಕರದ್ದಾಗಿದೆ. ನಿರೀಕ್ಷೆಯಂತೆ ಮಂಗಳವಾರ ಅತೃಪ್ತ ಬಣದ ಶಾಸಕರೊಬ್ಬರು ಆನಂದ್ ಸಿಂಗ್​ಗೆ

ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ, ತಮ್ಮ ಜತೆ ಸೇರುವಂತೆ ಕೋರಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ. ಬಜೆಟ್ ಅಧಿವೇಶನದೊಳಗೆ ಸರ್ಕಾರ ಅಸ್ಥಿರಗೊಳ್ಳುವ ಪ್ರಯತ್ನ ಇನ್ನಷ್ಟು ತೀವ್ರಗತಿಯಲ್ಲಿ ನಡೆಯಲಿದೆ ಎಂಬ ಗುಪ್ತಚರ ಇಲಾಖೆ ಮಾಹಿತಿ ಕಾಂಗ್ರೆಸ್-ಜೆಡಿಎಸ್ ನಾಯಕರನ್ನು ಕಕ್ಕಾಬಿಕ್ಕಿಯಾಗುವಂತೆ ಮಾಡಿದೆ.

ಅತೃಪ್ತರಿಂದಲೇ ಕಾರ್ಯಾಚರಣೆ: ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿ, ನೋಟಿಸ್ ಜಾರಿಯಾದರೂ ಜಗ್ಗದ ಶಾಸಕರೇ ಈಗ ತಮ್ಮ ಕ್ಯಾಂಪ್ ಬಲ ಹೆಚ್ಚಿಸಿಕೊಳ್ಳಲು ಮುಂದೆ ಬಂದಿರುವುದು ವಿಶೇಷವೆನಿಸಿದೆ.

ಹತಾಶ ಜಾರಕಿಹೊಳಿ: ಪಕ್ಷಾಂತರಕ್ಕೆ ಎಲ್ಲ ತಯಾರಿ ಮಾಡಿಕೊಂಡಿದ್ದ ರಮೇಶ್ ಜಾರಕಿಹೊಳಿ ಹತಾಶಗೊಂಡಿದ್ದಾರೆಂಬ ಮಾಹಿತಿ ಇದೆ. ಶಾಸಕಾಂಗ ಪಕ್ಷದ ಸಭೆಯ ಬೆಳವಣಿಗೆಯನ್ನು ವೀಕ್ಷಿಸುತ್ತಿದ್ದ ಅವರು, ಶಾಸಕ ಗಣೇಶ್ ಪಾಲ್ಗೊಂಡಿದ್ದನ್ನು ಕಂಡು ಸಿಟ್ಟಾಗಿ ಟಿವಿಯನ್ನೇ ಹಾನಿಗೊಳಿಸಿದರು ಎಂದು ಕಾಂಗ್ರೆಸ್​ಕಚೇರಿಯಲ್ಲಿ ಚರ್ಚೆಯಾಗಿದೆ.

ಶ್ರೀಲಂಕಾಗೆ ಶಿಫ್ಟ್?: ರೆಸಾರ್ಟ್​ನಿಂದ ಶಾಸಕರನ್ನು ತಕ್ಷಣಕ್ಕೆ ಮುಕ್ತಗೊಳಿಸದೆ ಇರಲು ಆಶಯ ಹೊಂದಿದ್ದ ಕಾಂಗ್ರೆಸ್, ಬಲವಾದ ಅನುಮಾನ ಇರುವ ಮೂವರು ಶಾಸಕರನ್ನು ಸಚಿವರೊಬ್ಬರೊಂದಿಗೆ ಶ್ರೀಲಂಕಾಗೆ ಕಳಿಸಿ ಬಿಜೆಪಿ ನಾಯಕರ ಸಂಪರ್ಕಕ್ಕೆ ಸಿಗದಂತೆ ನೋಡಿಕೊಳ್ಳುವ ಗೌಪ್ಯ ಪ್ಲಾ್ಯನ್ ಮಾಡಿತ್ತು ಎನ್ನಲಾಗಿದೆ.