ಗ್ಯಾಸ್ ಅಕ್ರಮ ರಿಫಿಲ್ಲಿಂಗ್ ಕೇಂದ್ರಕ್ಕೆ ದಾಳಿ

«ಇಬ್ಬರ ಬಂಧನ, ಸಿಲಿಂಡರ್ ಸಹಿತ 6.44 ಲಕ್ಷ ರೂ. ಮೌಲ್ಯದ ಸೊತ್ತು ವಶ»

ವಿಜಯವಾಣಿ ಸುದ್ದಿಜಾಲ ಮಂಗಳೂರು
ನಗರದ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗ್ಯಾಸ್ ಸಿಲಿಂಡರ್‌ಗಳಿಗೆ ಅಕ್ರಮವಾಗಿ ರಿಫಿಲ್ಲಿಂಗ್ ಮಾಡುತ್ತಿದ್ದ ಎರಡು ಕೇಂದ್ರಗಳಿಗೆ ಮಂಗಳೂರು ಸಿಸಿಬಿ ಮತ್ತು ದಕ್ಷಿಣ ಠಾಣಾ ಪೊಲೀಸರು, ಆಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಯವರೊಂದಿಗೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿ, ಸಿಲಿಂಡರ್ ಸಹಿತ ಒಟ್ಟು 6,44,400 ರೂ. ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ.

ಬೋಳಾರ ಮಾರಿಗುಡಿ ಭಂಡಾರ ಮನೆ ಬಳಿಯ ಪ್ರಶಾಂತ್(24) ಹಾಗೂ ಬಂಟ್ವಾಳ ಬಿ.ಸಿ.ರೋಡ್ ಕೈಕಂಬ ಬಳಿಯ ಮದ್ವ ಮನೆ ಸದಾಶಿವ ರೈ(47) ಬಂಧಿತರು. ಈ ಅಕ್ರಮ ದಂಧೆಯಲ್ಲಿ ಭಾಗಿಯಾದ ಹರೀಶ್ ಹಾಗೂ ಕೂಸಪ್ಪ ದಾಳಿ ಸಂದರ್ಭ ಪರಾರಿಯಾಗಿದ್ದಾರೆ.

ಬೋಳಾರ ಹಾಗೂ ಜೆಪ್ಪು ಮಾರ್ಕೆಟ್ ಪರಿಸರದಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳಿಂದ ಪೂರೈಕೆಯಾಗುವ ಗೃಹಬಳಕೆಯ ಆಡುಗೆ ಅನಿಲ ಸಿಲಿಂಡರ್‌ಗಳಿಂದ ಅಧಿಕ ಲಾಭ ಗಳಿಸುವ ಉದ್ದೇಶದಿಂದ ಇತರ ಸಿಲಿಂಡರ್‌ಗಳಿಗೆ ರಿಫಿಲ್ಲಿಂಗ್ ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಅಕ್ರಮ ದಂಧೆಯನ್ನು ಬಯಲಿಗೆಳೆದಿದ್ದಾರೆ.

ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ನಿರ್ದೇಶನದಲ್ಲಿ ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಪೊಲೀಸ್ ಇನ್‌ಸ್ಪೆಕ್ಟರ್ ಶಾಂತಾರಾಮ, ಪಿಎಸ್‌ಐ ಶ್ಯಾಮ್ ಸುಂದರ್, ಕಬ್ಬಾಳ್‌ರಾಜ್ ಹಾಗೂ ಸಿಬ್ಬಂದಿ ಮತ್ತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪಿಎಸ್‌ಐ ರಾಜೇಂದ್ರ, ಮಂಜುಳಾ ಮತ್ತು ಸಿಬ್ಬಂದಿ ಹಾಗೂ ಆಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆಯ ಮಂಗಳೂರು ಆಹಾರ ನಿರೀಕ್ಷಕಿ ಕಮಲಾ ಭಾಗವಹಿಸಿದ್ದರು.

ವಾಹನ, ರಿಫಿಲ್ಲಿಂಗ್ ಪರಿಕರ ವಶ: ಬಂಧಿತರಿಂದ 17 ಗ್ಯಾಸ್ ತುಂಬಿದ ಸಿಲಿಂಡರ್ ಹಾಗೂ 136 ಖಾಲಿ ಸಿಲಿಂಡರ್‌ಗಳು, ಗ್ಯಾಸ್ ರಿಫಿಲ್ಲಿಂಗ್ ಮಾಡುವ ಪಂಪ್ ಹಾಗೂ ಇತರ ಪರಿಕರ, ಒಂದು ಪಿಕ್‌ಅಪ್ ಜೀಪ್, ಗೂಡ್ಸ್ ಟೆಂಪೋ ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.