ವಂಚಕ ಹೂಡಿಕೆ ಕಂಪನಿ ಮೇಲೆ ಪೊಲೀಸ್ ದಾಳಿ

ಬೆಂಗಳೂರು: ಯಲಹಂಕದಲ್ಲಿರುವ ರಾಯಲ್ ಆರ್ಕಿಡ್ ಕನ್ವೆನ್ಷನ್ ಸೆಂಟರ್​ನಲ್ಲಿ ವಂಚಕ ಕಂಪನಿ ಆಯೋಜಿಸಿದ್ದ ಹೂಡಿಕೆದಾರರ ಸಭೆ ಮೇಲೆ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಸೈಬರಾಬಾದ್ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು, ಚೆನ್ನೈ, ಮುಂಬೈ, ಹೈದರಾಬಾದ್ ಸೇರಿ ದೇಶಾದ್ಯಂತ ಹೂಡಿಕೆ ಹೆಸರಲ್ಲಿ ಸಾವಿರಾರು ಜನರಿಂದ ಕೋಟ್ಯಂತರ ರೂ. ಪಡೆದು ವಂಚಿಸಿತ್ತು. ಈ ಸಂಬಂಧ ಸೈಬರಾಬಾದ್ ಕಮೀಷನರೇಟ್ ವ್ಯಾಪ್ತಿಯಲ್ಲಿ 38ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಕಾರ್ಯಾಚರಣೆ ಕೈಗೊಂಡಿದ್ದ ಅಲ್ಲಿನ ಪೊಲೀಸರು ಕಳೆದ ತಿಂಗಳಲ್ಲಿ 70 ಮಂದಿಯನ್ನು ಬಂಧಿಸಿದ್ದರು.

ಕಂಪನಿಯ ಗೋದಾಮು ಜಪ್ತಿ ಮಾಡಿ, ಬ್ಯಾಂಕ್ ಖಾತೆಯಲ್ಲಿನ 2.7 ಕೋಟಿ ರೂ. ತಡೆಹಿಡಿದು ತನಿಖೆಯನ್ನು ಮುಂದುವರಿಸಿದ್ದರು. ಅನಧಿಕೃತ ಕಂಪನಿಯು ಬೆಂಗಳೂರಿನಲ್ಲಿ ಹೂಡಿಕೆದಾರರ ಸಭೆ ಏರ್ಪಡಿಸಿರುವ ಬಗ್ಗೆ ಖಚಿತ ಮಾಹಿತಿ ಸೈಬರಾಬಾದ್ ಪೊಲೀಸರಿಗೆ ಲಭ್ಯವಾಗಿತ್ತು. ಹೀಗಾಗಿ, ಸೈಬರಾಬಾದ್ ಡಿಸಿಪಿ ರಾಘವೇಂದ್ರ ರೆಡ್ಡಿ ನೇತೃತ್ವದ ಪೊಲೀಸರ ತಂಡ ಸ್ಥಳೀಯ ಪೊಲೀಸರ ಜತೆಗೂಡಿ, ರಾಯಲ್ ಅರ್ಕಿಡ್ ಕನ್ವೆನ್ಷನ್ ಸೆಂಟರ್ ಮೇಲೆ ಭಾನುವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ. ಪೊಲೀಸರು ಬರುವಷ್ಟರಲ್ಲಿ ಸಭೆ ಏರ್ಪಡಿಸಿದ್ದ ಅನಧಿಕೃತ ಕಂಪನಿಯ ಮುಖ್ಯಸ್ಥರು ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ ವಂಚನೆಗೊಳಗಾದ ಹೂಡಿಕೆದಾರರು ಕಂಪನಿಯನ್ನು ನಿಷೇಧಿಸುವಂತೆ ಆಗ್ರಹಿಸಿ ಪ್ರತಿಭಟಿಸಿದ್ದಾರೆ.

ಕರ್ನಾಟಕ ಪೊಲೀಸರ ನಿರ್ಲಕ್ಷ್ಯ: ಅನಧಿಕೃತ ಸಂಸ್ಥೆಯ ವಂಚನೆ ಬಗ್ಗೆ ಸಿಐಡಿ ಕಚೇರಿಯಲ್ಲಿ 30ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಈ ಬಗ್ಗೆ ಕರ್ನಾಟಕ ಪೊಲೀಸರು ತನಿಖೆಗೆ ಮುಂದಾಗದೆ ನಿರ್ಲಕ್ಷಿಸಿದ್ದಾರೆ. ಹೀಗಾಗಿ, ವಂಚನೆಗೊಳಗಾದ ಕರ್ನಾಟಕದ ಜನರು ಸೈಬರಾಬಾದ್​ಗೆ ಬಂದು ದೂರು ನೀಡುತ್ತಿದ್ದಾರೆ ಎಂದು ಸೈಬರಾಬಾದ್ ಡಿಸಿಪಿ ರಾಘವೇಂದ್ರರೆಡ್ಡಿ ವಿಜಯವಾಣಿಗೆ ತಿಳಿಸಿದ್ದಾರೆ.

ಸಾವಿರಾರು ಜನರಿಗೆ ವಂಚಿಸಿರುವ ಬಗ್ಗೆ ಆರೋಪವಿರುವ ಅನಧಿಕೃತ ಸಂಸ್ಥೆಯು ಬೆಂಗಳೂರಿನಲ್ಲಿ ಸಕ್ರಿಯವಾಗಿದೆ. ಹೂಡಿಕೆದಾರರ ಸಮಾವೇಶದ ಮೇಲೆ ದಾಳಿ ಬಗ್ಗೆ ಮಾಹಿತಿಯನ್ನು ಅಲ್ಲಿನ ಸ್ಥಳೀಯ ಪೊಲೀಸರು ಸೋರಿಕೆ ಮಾಡಿದ್ದರಿಂದ ವಿಫಲರಾಗಿದ್ದೇವೆ.

| ವಿ.ಸಿ. ಸಜ್ಜನರ, ಸೈಬರಾಬಾದ್ ಪೊಲೀಸ್ ಆಯುಕ್ತ

ಸಿಲಿಂಡರ್ ಎತ್ತಿಹಾಕಿ ಹತ್ಯೆ

ಬೆಂಗಳೂರು: ಸಹಜೀವನ ನಡೆಸುತ್ತಿದ್ದ ಗೆಳತಿಯ ಶೀಲ ಶಂಕಿಸಿದ ವ್ಯಕ್ತಿ ಆಕೆಯ ಮೇಲೆ ಗ್ಯಾಸ್ ಸಿಲಿಂಡರ್ ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ.

ದೊಡ್ಡಬಸನಪುರದ ನಿವಾಸಿ ಶಶಿಕಲಾ (32) ಕೊಲೆಯಾದ ಮಹಿಳೆ. ಈ ಸಂಬಂಧ ಆಕೆಯ ಸ್ನೇಹಿತ ಆರೋಪಿ ವೆಂಕಟಗಿರಿಯಪ್ಪನನ್ನು (40) ಕೆ.ಆರ್. ಪುರ ಪೊಲೀಸರು ಬಂಧಿಸಿದ್ದಾರೆ.

ಕೋಲಾರ ಜಿಲ್ಲೆ ಮುಳಬಾಗಿಲು ಮೂಲದವನಾದ ವೆಂಕಟಗಿರಿಯಪ್ಪ ರೈತನಾಗಿದ್ದು, ಈಗಾಗಲೇ ಮದುವೆ ಯಾಗಿದ್ದಾನೆ. ಈತನ ಕುಟುಂಬ ಮುಳಬಾಗಿಲಿನಲ್ಲಿ ವಾಸಿಸುತ್ತಿದೆ. 3 ವರ್ಷದ ಪುತ್ರಿಯನ್ನು ಹೊಂದಿದ್ದ ಶಶಿಕಲಾ ಜತೆ ಆರೋಪಿ ಕೆಲ ವರ್ಷಗಳಿಂದ ದೊಡ್ಡಬಸನಪುರದ ಬಾಡಿಗೆ ಮನೆಯೊಂದರಲ್ಲಿ ಸಹಜೀವನ ನಡೆಸುತ್ತಿದ್ದ.

ಶನಿವಾರ (ಸೆ.21) ತಡರಾತ್ರಿ 2 ಗಂಟೆಯಲ್ಲಿ ವೆಂಕಟಗಿರಿಯಪ್ಪ ಶಶಿಕಲಾಳ ಶೀಲ ಶಂಕಿಸಿ ಜಗಳ ತೆಗೆದು ಹಲ್ಲೆ ನಡೆಸಿದ್ದಾನೆ. ಆಗ ಚೀರಾಟ ಶಬ್ದ ಕೇಳಿದ ಮನೆ ಮಾಲೀಕರು ಆರೋಪಿ ಮನೆ ಬಳಿ ತೆರಳಿ ಬಾಗಿಲು ತೆಗೆಯುವಂತೆ ಸೂಚಿಸಿದ್ದರು. ಆದರೆ, ಎಷ್ಟೂ ಕೂಗಿದರೂ ಆರೋಪಿ ಬಾಗಿಲು ತೆಗೆದಿಲ್ಲ. ಕಿಟಕಿ ಮೂಲಕ ಮನೆ ಮಾಲೀಕರು ಹಾಗೂ ಸ್ಥಳೀಯರು ನೋಡಿದಾಗ ಆರೋಪಿ, ಶಶಿಕಲಾ

ಕತ್ತು ಹಿಸುಕುತ್ತಿದ್ದ. ಕೂಡಲೇ ಸಾರ್ವಜನಿಕರು ಕೂಗಾಡುತ್ತ, ಆಕೆಯನ್ನು ಬಿಡುವಂತೆ ಮನವಿ ಮಾಡಿದ್ದಾರೆ. ಯಾರ ಮಾತೂ ಕೇಳದ ಆರೋಪಿ ಆಕೆಯನ್ನು ನಿಂದಿಸಿ ಅಡುಗೆ ಮನೆಯಲ್ಲಿದ್ದ ಸಿಲಿಂಡರ್ ತಂದು ತಲೆ ಮೇಲೆ ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *