ರೌಡಿಶೀಟರ್ ಮನೆಗಳ ಮೇಲೆ ಪೊಲೀಸ್ ದಾಳಿ

1 Min Read
ರೌಡಿಶೀಟರ್ ಮನೆಗಳ ಮೇಲೆ ಪೊಲೀಸ್ ದಾಳಿ

ಹುಬ್ಬಳ್ಳಿ : ಸೋಮವಾರ ಬೆಳಗಿನಜಾವ ರೌಡಿಶೀಟರ್​ಗಳ ಮನೆ ಮೇಲೆ ದಾಳಿ ನಡೆಸಿರುವ ಬೆಂಡಿಗೇರಿ ಠಾಣೆ ಪೊಲೀಸರು, ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ದಾಳಿ ಸಂದರ್ಭದಲ್ಲಿ ಮಹಿಳೆಯೊಬ್ಬರ ಮಾನಭಂಗ ಪ್ರಕರಣಕ್ಕೆ ಸಂಬಂದಿಸಿದಂತೆ ಪರಾರಿಯಾಗಿದ್ದ ಪ್ರಮುಖ ಆರೋಪಿ, ಸೆಟ್ಲಮೆಂಟ್ ನಿವಾಸಿ ಅಭಿಷೇಕ ಕುಮಾರ ಭಜಂತ್ರಿ ಹಾಗೂ ಎನ್.ಡಿ.ಪಿ.ಎಸ್ ಕಾಯ್ದೆಯಲ್ಲಿ ಅರೆಸ್ಟ್ ವಾರಂಟ್ ಆಗಿದ್ದ ಮತ್ತು ಹಲ್ಲೆ ಪ್ರಕರಣದಲ್ಲಿ ಪರಾರಿಯಾಗಿದ್ದ ಪ್ರಮುಖ ಆರೋಪಿ ಕೆ.ಬಿ. ನಗರದ ನಿವಾಸಿ ಅರುಣ ಅಲಿಯಾಸ್ ಗುಂಡ್ಯಾ ಮಂಜುನಾಥ ಹಲಗಿ ಎಂಬ ಇಬ್ಬರು ಆರೋಪಿಗಳನ್ನು ದಾಳಿ ಸಂದರ್ಭದಲ್ಲಿ ಪತ್ತೆ ಮಾಡಿ, ವಶಕ್ಕೆ ಪಡೆದಿದ್ದಾರೆ. ಇಬ್ಬರೂ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಅವಳಿ ನಗರದಲ್ಲಿ ರೌಡಿಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಡಿಗೇರಿ ಠಾಣೆ ಪೊಲೀಸರು ಸೋಮವಾರ ಬೆಳಗಿನಜಾವ 5 ಗಂಟೆಗೆ ದಾಳಿ ನಡೆಸಿದ್ದಾರೆ.

ರೌಡಿಶೀಟರ್​ಗಳಾದ ರೋಹಿತ ವಿನೋದ ಕಲಾಲ, ಇಸ್ಮಾಯಿಲ್ ಮೆಹಬೂಬಸಾಬ ಭಾರದ್ವಾಲೆ, ಫಜಲ್ ತಾಜುದ್ದೀನ್ ಪುಣೆವಾಲೆ, ದಾವಲಸಾಬ ತಾಜುದ್ದೀನ್ ಪುಣೆವಾಲೆ, ವಿನೋದ ಪರಶುರಾಮ ಗುಡಿಹಾಲ, ಸಾಹಿಲ್​ಭಕ್ಷ ರಫಿಕ ಚಡ್ಡಾ, ಪ್ರದೀಪ ಪ್ರಕಾಶ ಕೂಗೋಡ ಹಾಗೂ ಪುಟ್ಟರಾಜು ಪ್ರಕಾಶ ಕೂಗೋಡ ಎಂಬುವವರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ರೌಡಿ ಶೀಟರ್​ಗಳ ಮನೆಗಳಲ್ಲಿ ಪರಿಶೀಲನೆ ನಡೆಸಿದ ಪೊಲೀಸರು, ಯಾವುದೇ ಕಾನೂನು ಬಾಹಿರ ಮತ್ತು ಗಾಂಜಾ ಮಾರಾಟ, ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ತಿರುಗಾಡುವುದು, ಸಾರ್ವಜನಿಕರ ನೆಮ್ಮದಿಗೆ ಭಂಗ ತರುವಂತಹ ಅಪರಾಧಿಕ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ. ರೌಡಿಸಂ ಚಟುವಟಿಕೆಗಳಲ್ಲಿ ತೊಡಗಿದ್ದಲ್ಲಿ ಗಡಿಪಾರುಗಳಂತಹ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಪೊಲೀಸ್ ಇನ್ಸಪೆಕ್ಟರ್ ಮಾರುತಿ ಗುಳ್ಳಾರಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಠಾಣೆಯ ಸಿಬ್ಬಂದಿ ಪಾಲ್ಗೊಂಡಿದ್ದರು. ಬೆಂಡಿಗೇರಿ ಠಾಣೆ ಪೊಲೀಸರ ಕಾರ್ಯಕ್ಕೆ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

See also  ಶಾಸಕ ಚವ್ಹಾಣ ದೂರು ನೀಡಿದರೆ ಕೇಂದ್ರ ಸಚಿವ ಖುಬಾ ವಿರುದ್ಧ ತನಿಖೆ ನಡೆಸುತ್ತೇವೆ ಎಂದ ಖರ್ಗೆ
Share This Article