ಶಿರೂರು ಶ್ರೀ ಸಾವಿನ ಪ್ರಕರಣಕ್ಕೆ ತೆರೆ

ಮಂಗಳೂರು: ಉಡುಪಿ ಶಿರೂರು ಮಠಾಧೀಶರಾಗಿದ್ದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಸಾವಿನ ತನಿಖೆ ಕುರಿತ ಅಂತಿಮ ವರದಿಯನ್ನು ಪೊಲೀಸರು ಕುಂದಾಪುರ ಸಹಾಯಕ ಕಮಿಷನರ್​ಗೆ ಸಲ್ಲಿಸುವ ಮೂಲಕ ಪ್ರಕರಣಕ್ಕೆ ಅಂತಿಮ ತೆರೆ ಎಳೆದಿದ್ದಾರೆ.

ಶಿರೂರು ಸ್ವಾಮೀಜಿ ಲೀವರ್ ಸಿರೋಸಿಸ್ ಕಾಯಿಲೆಯಿಂದ ಸಹಜ ಸಾವಿಗೀಡಾಗಿದ್ದು, ವಿಷಪ್ರಾಶನದ ಯಾವುದೇ ಅಂಶಗಳು ತನಿಖೆಯಲ್ಲಿ ಬೆಳಕಿಗೆ ಬಂದಿಲ್ಲ ಎಂದು ಪೊಲೀಸರು ಅಂತಿಮ ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಶ್ರೀಗಳ ಸಾವಿನ ತನಿಖೆ ಕುರಿತ ಸಮಗ್ರ ವರದಿಯನ್ನು ಎರಡು ದಿನಗಳ ಹಿಂದೆ ಪೊಲೀಸರು ತಮಗೆ ಸಲ್ಲಿಸಿದ್ದಾರೆ ಎಂದು ಕುಂದಾಪುರದ ಸಹಾಯಕ ಕಮಿಷನರ್ ಭೂಬಾಲನ್ ‘ವಿಜಯವಾಣಿ’ಗೆ ಖಚಿತ ಪಡಿಸಿದ್ದಾರೆ.

ಜುಲೈ 19ರಂದು ಶಿರೂರು ಸ್ವಾಮೀಜಿ ಕೊನೆಯುಸಿರೆಳೆದಿದ್ದರು. ಅವರಿಗೆ ವಿಷಪ್ರಾಶನ ಆದಂತಿದೆ ಎಂದು ಚಿಕಿತ್ಸೆ ನೀಡಿದ್ದ ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯರ ಹೇಳಿಕೆ ಪ್ರಕರಣಕ್ಕೆ ಹೊಸ ತಿರುವು ನೀಡಿತ್ತು. ಬಳಿಕ ಪೊಲೀಸರು ಪ್ರಕರಣದ ಸಮಗ್ರ ತನಿಖೆ ಆರಂಭಿಸಿದ್ದರು. ಸ್ವಾಮೀಜಿ ಅವರ ಪೂರ್ವಾಶ್ರಮದ ಸಹೋದರ ಕೂಡ ಅಸಹಜ ಸಾವಿನ ಸಂಶಯ ವ್ಯಕ್ತಪಡಿಸಿ ದೂರು ನೀಡಿದ್ದರು. ಇದು ಅತ್ಯಂತ ಸೂಕ್ಷ್ಮಪ್ರಕರಣವಾದ್ದರಿಂದ ಒಂದು ತಿಂಗಳ ಕಾಲ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಿರುವ ಪೊಲೀಸರು, ಈಗ ಅಂತಿಮ ವರದಿ ಸಲ್ಲಿಸಿದ್ದಾರೆ.

ಈ ಮೂಲಕ ಅತ್ಯಂತ ಕುತೂಹಲ ಮೂಡಿಸಿದ್ದ ಪ್ರಕರಣದ ಕಡತಕ್ಕೆ ಅಂತಿಮ ಷರಾ ಹಾಕಲಾಗಿದೆ. ಅಸಹಜ ಸಾವು ಎಂದು ಶಂಕೆ ವ್ಯಕ್ತವಾದ ಕಾರಣ ಅಂತಿಮ ವರದಿಯನ್ನು ಎಸಿ ಅವರಿಗೆ ಸಲ್ಲಿಸಲಾಗಿದೆ.

ಬಾಯ್ತಪ್ಪಿ ವಿಷಪ್ರಾಶನ ಅಂದ್ವಿ ಎಂದ ವೈದ್ಯರು

ಸ್ವಾಮೀಜಿ ಸಾವಿಗೀಡಾದ ಸಂದರ್ಭ, ಮಾಧ್ಯಮಗಳ ಮುಂದೆ ವಿಷಪ್ರಾಶನ ಸಾಧ್ಯತೆ ಎಂದು ಬಾಯಿ ತಪ್ಪಿನಿಂದ ಹೇಳಲಾಗಿತ್ತು. ಇಂಗ್ಲಿಷ್​ನಿಂದ ಕನ್ನಡಕ್ಕೆ ತರ್ಜುಮೆ ಮಾಡುವ ಸಂದರ್ಭ ಆಗಿರುವ ಎಡವಟ್ಟು ಇದು ಎಂದು ಪೊಲೀಸ್ ವಿಚಾರಣೆ ವೇಳೆ ವೈದ್ಯರು ಸ್ಪಷ್ಟನೆ ನೀಡಿದ್ದಾರೆ. ಮರಣೋತ್ತರ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ (ಎಫ್​ಎಸ್​ಎಲ್)ದ ಪರೀಕ್ಷಾ ವರದಿಗಳನ್ನು ತಾಳೆ ಹಾಕಿದಾಗ ಅನಾರೋಗ್ಯವೇ ಸಾವಿಗೆ ಕಾರಣ ಎನ್ನುವುದು ಸ್ಪಷ್ಟವಾಗಿದೆ. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಸ್ವಾಮೀಜಿ, ವೈದ್ಯರ ಎಚ್ಚರಿಕೆ ನಿರ್ಲಕ್ಷಿಸಿದ್ದರಿಂದ ಕಾಯಿಲೆ ಉಲ್ಬಣಿಸಿತ್ತು. ಅದೇ ಕಾರಣಕ್ಕೆ ಸಾವು ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.