ಮಧುಕರ ಶೆಟ್ಟಿ ಅಂತಿಮ ದರ್ಶನ, ಪೊಲೀಸ್​ ಇಲಾಖೆಯ ಕಣ್ಣೀರ ನಮನ

ಬೆಂಗಳೂರು: ತೀವ್ರ ಅನಾರೋಗ್ಯದಿಂದಾಗಿ ಹೈದರಾಬಾದ್​ನಲ್ಲಿ ಶುಕ್ರವಾರ ರಾತ್ರಿ ಕೊನೆಯುಸಿರೆಳೆದ ರಾಜ್ಯದ ಪೊಲೀಸ್​ ಅಧಿಕಾರಿ ಮಧುಕರ ಶೆಟ್ಟಿ ಅವರ ಪಾರ್ಥಿವ ಶರೀರವನ್ನು ಯಲಹಂಕದ ಪೊಲೀಸ್​ ತರಬೇತಿ ಕೇಂದ್ರದಲ್ಲಿ ಇರಿಸಲಾಗಿದ್ದು, ಪೊಲೀಸ್​ ಅಧಿಕಾರಿಗಳು, ಗಣ್ಯರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಮಧುಕರ ಶೆಟ್ಟಿ ಅವರು ಶುಕ್ರವಾರ ರಾತ್ರಿ ಆಸ್ಪತ್ರೆಯಲ್ಲೇ ಇಹಲೋಕ ತ್ಯಜಿಸಿದ್ದರು. ಅವರ ಶರೀರವನ್ನು ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು. ಅಲ್ಲಿಂದ ರಸ್ತೆ ಮಾರ್ಗವಾಗಿ ಯಲಹಂಕದ ಪೊಲೀಸ್​ ತರಬೇತಿ ಕೇಂದ್ರಕ್ಕೆ ತಂದು ಅಂತಿಮ ದರ್ಶನಕ್ಕೆ ಇರಿಸಲಾಗಿದೆ.

ಯಲಹಂಕಕ್ಕೆ ಆಗಮಿಸಿದ ಪೊಲೀಸ್ ಇಲಾಖೆಯ ಬಹುತೇಕ ಎಲ್ಲ ಅಧಿಕಾರಿಗಳು ಮಧುಕರ ಶೆಟ್ಟಿ ಅವರಿಗೆ ಹೂಗುಚ್ಛ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು. ಡಿಜಿ- ಐಜಿಪಿ‌ ನೀಲಮಣಿ‌ ಎನ್ ರಾಜು, ಲೋಕಾಯುಕ್ತ ವಿಶ್ವನಾಥ್​ ಶೆಟ್ಟಿ, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಬಿ.ಕೆ.ಸಿಂಗ್, ಡಿಜಿ ಎಂ.ಎನ್.ರೆಡ್ಡಿ, ಲಾಬೂರಾಮ್, ಸಲೀಂ, ರವೀಂದ್ರನಾಥ್, ಸಂದೀಪ್ ಪಾಟೀಲ್, ಚೇತನ್ ಸಿಂಘ್​ ರಾಠೋರ್, ರವಿ ಡಿ ಚನ್ನಣ್ಣವರ್​, ಪ್ರವೀಣ್​ ಸೂದ್​, ಶಂಕರ್​ ಬಿದರಿ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದುಕೊಂಡರು.

ಸಾರ್ವಜನಿಕರ ಆಕ್ರೋಶ

ಹೈದರಾಬಾದ್​ನಿಂದ ಬಂದ ಮಧುಕರಶೆಟ್ಟಿ ಅವರ ಪಾರ್ಥಿವ ಶರೀರವನ್ನು ಯಲಹಂಕಕ್ಕೆ ತಂದಿರಿಸಿ ಎಷ್ಟು ಹೊತ್ತಾದರೂ ಸರ್ಕಾರದ ಯಾವೊಬ್ಬ ಸಚಿವರಾಗಲಿ, ರಾಜಕಾರಣಿಗಳಾಗಲಿ ದರ್ಶನಕ್ಕೆ ಆಗಮಿಸದೇ ಹೋಗಿದ್ದು ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು.

ಇದಾದ ನಂತರವೇ ಗೃಹ ಸಚಿವ ಎಂ.ಬಿ ಪಾಟೀಲ್​ ಅವರು ಯಲಹಂಕಕ್ಕೆ ಆಗಮಿಸಿ ಮಧುಕರ ಶೆಟ್ಟಿ ಅವರ ಅಂತಿಮ ದರ್ಶನ ಪಡೆದರು.

ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿರುವ ಯಲಹಂಕದ ಪೊಲೀಸ್​ ತರಬೇತಿ ಕೇಂದ್ರದಲ್ಲಿ ಮಧುಕರ್ ಶೆಟ್ಟಿ ಪತ್ನಿ ಕ್ಷಮಾ ಮತ್ತು ಮಗಳು ಸಮುದಾ ಸೇರಿದಂತೆ ಕುಟುಂಬ ವರ್ಗದವರೂ ಹಾಜರಿದ್ದಾರೆ.

ಇಂದು ಸಂಜೆಯ ವರೆಗೆ ಮಧುಕರ ಶೆಟ್ಟಿ ಅವರ ಶರೀರರವನ್ನು ಬೆಂಗಳೂರಿನಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ಸಂಜೆ ನಂತರ ಉಡುಪಿಯ ಹುಟ್ಟೂರಿಗೆ ಕೊಂಡೊಯ್ಯಲಾಗುವುದು ಎಂದು ತಿಳಿದು ಬಂದಿದೆ.