ಸಿದ್ದರಾಮಯ್ಯ ಎಸ್ಕಾರ್ಟ್​ ವಾಹನ ಅಪಘಾತ: ಹೃದಯಾಘಾತದಿಂದ ಪೊಲೀಸ್​ ಅಧಿಕಾರಿ ಸಾವು

ಬೆಂಗಳೂರು: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎಸ್ಕಾರ್ಟ್​ ವಾಹನದ ಸರಣಿ ಅಪಘಾತದ ವೇಳೆ ಆಘಾತಕ್ಕೊಳಗಾಗಿದ್ದ ಪೊಲೀಸ್​ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮಂಡ್ಯ ಡಿಎಆರ್​ನಲ್ಲಿ ಎಆರ್​ಎಸ್​ಐ ಆಗಿದ್ದ ಮರೀಗೌಡ (56) ಮೃತ ಪೊಲೀಸ್​ ಅಧಿಕಾರಿ. ಅಪಘಾತದ ವೇಳೆ ಆಘಾತಕ್ಕೊಳಗಾಗಿದ್ದ ಮರೀಗೌಡ ಅವರು ಬುಧವಾರ ಸಂಜೆ ಮಂಡ್ಯ ಪೊಲೀಸ್​ ಕ್ವಾಟ್ರಸ್​ನ ನಿವಾಸದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.

ಬುಧವಾರ ಬೆಳಗ್ಗೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ. ಹೊಸೂರು ಗೇಟ್​ ಬಳಿ ಸರಣಿ ಅಪಘಾತ ನಡೆದಿತ್ತು. ಅಪಘಾತದಲ್ಲಿ ಮೂರು ಪೊಲೀಸ್​ ವಾಹನಗಳು ಮತ್ತು ಎರಡು ಖಾಸಗಿ ವಾಹನಗಳು ಜಖಂಗೊಂಡಿದ್ದವು. ಅಪಘಾತದಲ್ಲಿ ಯಾರಿಗೂ ಗಾಯಗಳಾಗಿರಲಿಲ್ಲ.