ಪೊಲೀಸರ ಸೂಚನೆ ಕಡ್ಡಾಯವಾಗಿ ಪಾಲಿಸಿ

blank

ಕೊಳ್ಳೇಗಾಲ: ತಾಲೂಕಿನ ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ಕ್ಷೇತ್ರದಲ್ಲಿ ಜ.10 ರಿಂದ 5 ದಿನಗಳ ಕಾಲ ಲಕ್ಷಾಂತರ ಭಕ್ತರ ಸಮೂಹದೊಂದಿಗೆ ನಡೆಯಲಿರುವ ಜಾತ್ರೆ ಸ್ಥಳಕ್ಕೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹಾಗೂ ಅಧಿಕಾರಿಗಳು ಗುರುವಾರ ಭೇಟಿ ನೀಡಿ, ಅಗತ್ಯ ಸಿದ್ಧತೆ ಕೈಗೊಳ್ಳಲು ಪರಿಶೀಲಿಸಿದರು.

ಮೊದಲು ಸಿದ್ದಪ್ಪಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಜಿಲ್ಲಾಧಿಕಾರಿ, ನಂತರ ಹಳೇ ಮತ್ತು ಹೊಸ ಮಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ದೇಗುಲದ ಉಸ್ತುವಾರಿಯಾದ ಹಳೇ ಮಠದ ಸಂಚಾಲಕ ಚೇತನ್ ಅವರೊಂದಿಗೆ ಜಾತ್ರೆ ಸಿದ್ಧತೆ ಕುರಿತು ಕೆಲಕಾಲ ಚರ್ಚಿಸಿದರು.

ಜಾತ್ರೆಗೆ ರಾಜ್ಯಾದ್ಯಂತ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ಅವರ ಸುರಕ್ಷತೆ ಕುರಿತು ಕ್ರಮ ವಹಿಸಿರುವ ತಾಲೂಕಿನ ಪೊಲೀಸರ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಚೇತನ್ ಅವರಿಗೆ ಡಿಸಿ ಸೂಚಿಸಿದರು.
ಜಾತ್ರೆಯ ಹೆಚ್ಚು ಆದಾಯವನ್ನು ನೀವು ಪಡೆಯುವುದರಿಂದ ಭಕ್ತರಿಗೆ ಮೂಲಸೌಕರ್ಯ ಒದಗಿಸಲು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ತೆಳ್ಳನೂರು ಗ್ರಾಮ ಪಂಚಾಯಿತಿಯ ಆಡಳಿತಕ್ಕೆ ಹೆಚ್ಚಿನ ಹೊರೆ ನೀಡಕೂಡದು. ಪೊಲೀಸರು ತಿಳಿಸಿದ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಬಿ.ಬಿ.ಕಾವೇರಿ ತಿಳಿಸಿದರು.
ಮುಡಿಸೇವೆ ಕೇಂದ್ರದಲ್ಲಿ ಸ್ವಚ್ಛತೆ ಕಾಪಾಡಬೇಕು. ಮುಡಿ ನೀಡುವ ಪ್ರತಿಯೊಬ್ಬರಿಗೂ ಹೊಸಬ್ಲೇಡ್ ಹಾಗೂ ಬಿಸಿ ನೀರು ಕಲ್ಪಿಸಬೇಕು. ಶೌಚಗೃಹ ಮತ್ತು ಕುಡಿಯುವ ನೀರಿನ ಸೌಲಭ್ಯವಿರಬೇಕು. ಭಕ್ತರ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ದೂರದಲ್ಲಿ ವ್ಯಾಪಾರ ವಹಿವಾಟಿನ ಅಂಗಡಿಗಳನ್ನು ನಿರ್ಮಿಸಲು ಸೂಚನೆ ನೀಡಬೇಕು ಎಂದು ಆದೇಶಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಚೇತನ್, 100ಕ್ಕೂ ಹೆಚ್ಚು ಟ್ಯೂಬ್‌ಲೈಟ್, ಸಿಸಿ ಕ್ಯಾಮರಾ, ಶೌಚಗೃಹದ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪೊಲೀಸರು ನೀಡುವ ಇತರ ಜವಾಬ್ದಾರಿ ವಹಿಸಿಕೊಳ್ಳುವ ಭರವಸೆ ನೀಡಿದರು.

ಕಾಮಗಾರಿ ಬೇಗ ಮುಗಿಯಲಿ: ಜಾತ್ರೆಗೆ ಜ.10 ರಿಂದಲೇ ಹೆಚ್ಚಿನ ಭಕ್ತರು ಆಗಮಿಸುವುದರಿಂದ ಸಿದ್ದಪ್ಪಾಜಿ ದೇಗುಲದ ಸುತ್ತ ಪ್ರಗತಿಯಲ್ಲಿರುವ ಪಡಸಾಲೆ ಕಾಮಗಾರಿಯನ್ನು ಬೇಗ ಮುಗಿಸಿ ಎಂದು ನಿರ್ಮಿತಿ ಕೇಂದ್ರದ ಇಂಜಿನಿಯರ್ ರವಿಕುಮಾರ್‌ಗೆ ಡಿಸಿ ಬಿ.ಬಿ.ಕಾವೇರಿ ಸೂಚನೆ ನೀಡಿದರು.

ಕಾಮಗಾರಿಗೆ ಯಾವುದೇ ರೀತಿಯಲ್ಲಿ ಅಡ್ಡಿಪಡಿಸದಂತೆ ಸ್ಥಳದಲ್ಲಿದ್ದ ಹಳೇ ಮಠಾಧ್ಯಕ್ಷ ಬಿ.ಎಲ್.ಪ್ರಭುದೇವರಾಜೇ ಅರಸ್ ಅವರ ಪುತ್ರ ಭರತ್, ದೇವಸ್ಥಾನದ ಸಂಚಾಲಕರಾದ ಚೇತನ್ ಮತ್ತು ಅಶ್ವಥ್‌ನಾರಾಯಣ್ ಅವರಿಗೆ ಸೂಚಿಸಿದರು.

ಈ ಬಾರಿಯೂ ಪ್ರಾಣಿಬಲಿ ನಿಷೇಧ: ಕಳೆದ ವರ್ಷದಂತೆ ಈ ಬಾರಿಯೂ ಜಾತ್ರೆಯಲ್ಲಿ ಕುರಿ, ಮೇಕೆ, ಕೋಳಿ ಸೇರಿದಂತೆ ಪ್ರಾಣಿಬಲಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತಿಳಿಸಿದರು.

ಪ್ರಾಣಿಬಲಿ ನಿಷೇಧ ಕುರಿತು ಕೋರ್ಟ್ ಆದೇಶ ಪಾಲನೆಗೆ ಜಿಲ್ಲಾಡಳಿತ ಬದ್ಧವಾಗಿದೆ. ಮತ್ತಿಪುರ ಕ್ರಾಸ್, ಕೊತ್ತನೂರು, ಬಾಣೂರು ಕ್ರಾಸ್, ತೆಳ್ಳನೂರು, ರಾಚಪ್ಪಾಜಿ ನಗರದಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆದು ಪ್ರಾಣಿ ಸಾಗಣೆಯನ್ನು ತಡೆಯಲಾಗುವುದು. ಇದನ್ನು ಉಲ್ಲಂಘಿಸಿ ಜಾತ್ರೆಗೆ ಸಾಗಿಸುವ ಪ್ರಾಣಿಗಳನ್ನು ವಶಪಡಿಸಿಕೊಳ್ಳಲಾಗುವುದು. ಈ ವಿಚಾರದಲ್ಲಿ ಸಾರ್ವಜನಿಕರು ಹಾಗೂ ಭಕ್ತರು ಜಿಲ್ಲಾಡಳಿತಕ್ಕೆ ಉತ್ತಮ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಮೊಸಳೆ ಹಿಡಿಸಿ: ಚಿಕ್ಕಲ್ಲೂರು ಕ್ಷೇತ್ರದ ಹೊಸ ಮಠದ ಬಳಿಯಲ್ಲಿ ನೀರು ತುಂಬಿದ ಹಳ್ಳದಲ್ಲಿ ಆಗಿಂದ್ದಾಗ್ಗೆ ಮೊಸಳೆ ಕಾಣಿಸಿಕೊಳ್ಳುತ್ತಿದೆ. ಜಾತ್ರೆಗೆ ಬರುವ ಭಕ್ತರು ಈ ಹಳ್ಳದ ನೀರಿನಲ್ಲಿ ಸ್ನಾನಕ್ಕೆ ತೆರಳುವುದರಿಂದ ಅವಘಡ ಸಂಭವಿಸಬಹುದು ಎಂದು ಸ್ಥಳೀಯರು ಇದೇ ವೇಳೆ ಡಿಸಿಗೆ ಮನವಿ ಮಾಡಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿ, ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳವ ಭರವಸೆ ನೀಡಿದರು. ಎಡಿಸಿ ಆನಂದ್, ಎಸಿ ನಿಖಿತಾ ಎಂ.ಚಿನ್ನಸ್ವಾಮಿ, ತಹಸೀಲ್ದಾರ್ ಕುನಾಲ್, ತಾಪಂ ಇಒ ಎಚ್.ಶಶಿಧರ್, ಡಿವೈಎಸ್ಪಿ ನವೀನ್ ಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಮನೋಜ್ ಕುಮಾರ್, ತೆಳ್ಳನೂರು ಗ್ರಾಪಂ ಅಧ್ಯಕ್ಷೆ ಮಹದೇವಮ್ಮ, ಪಿಡಿಒ ಗೋಪಾಲ್ ಕೃಷ್ಣ ಇತರರು ಇದ್ದರು.

Share This Article

ಬೇಸಿಗೆ ತಂಪಾಗಿರಲು ಹಾಲು ಹಾಕದ ಮಿಲ್ಕ್ ಶೇಕ್

ಬೇಸಿಗೆಯಲ್ಲೂ ನಮ್ಮನ್ನು ತಂಪಾಗಿಟ್ಟು, ಸಾಮಾನ್ಯವಾಗಿ ಆಗುವ ಸುಸ್ತನ್ನು ಕಡಿಮೆ ಮಾಡುವ ವಿಶೇಷ ಮಿಲ್ಕ್ ಶೇಕ್ ಬಗ್ಗೆ…

ಈ ಮಸಾಲೆಗಳು ವಿಟಮಿನ್ ಬಿ 12 ವೇಗವಾಗಿ ಹೆಚ್ಚಾಗಲು ಸಹಕರಿಸುತ್ತವೆ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಜೀವಸತ್ವಗಳು ದೇಹದ ಕಾರ್ಯನಿರ್ವಹಣೆಗೆ ಮಾತ್ರ ಅಗತ್ಯವಲ್ಲ, ಅವು ಶಕ್ತಿಯನ್ನು ಸಹ ಒದಗಿಸುತ್ತವೆ. ಅವುಗಳ ಕೊರತೆಯು ನರಗಳು,…

ಪಿರಿಯಡ್ಸ್​ ನೋವನ್ನು ಕಡಿಮೆ ಮಾಡುವುದು ಹೇಗೆ?; ಮಹಿಳೆಯರು ತಿಳಿದುಕೊಳ್ಳಲೆಬೇಕಾದ ಮಾಹಿತಿ | Health Tips

ಋತುಬಂಧವನ್ನು ಈ ರೀತಿ ಅರ್ಥಮಾಡಿಕೊಳ್ಳಬಹುದು. ಋತುಬಂಧ ಎಂಬ ಪದವು ಎರಡು ಗ್ರೀಕ್ ಪದಗಳಿಂದ ಬಂದಿದೆ. ಮೆನೊ…