ಜನರ ಸಹಕಾರ ಅವಶ್ಯ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡುವುದರ ಜತೆಗೆ ವಿಭಿನ್ನವಾಗಿ ಯೋಚಿಸಲು ಆರಂಭಿಸಿದರೆ ಅಪರಾಧ ಚಟುವಟಿಕೆಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಎಪಿಎಂಸಿ- ನವನಗರ ಠಾಣೆ ಇನ್ಸ್​ಪೆಕ್ಟರ್ ಪ್ರಭು ಸೂರಿನ್ ಹೇಳಿದರು.

ಇಲ್ಲಿನ ಸಂಗೊಳ್ಳಿ ರಾಯಣ್ಣ ನಗರದಲ್ಲಿ ಹಮ್ಮಿಕೊಂಡಿದ್ದ ‘ಅಂತರ್ಜಾಲ ಅಪರಾಧ ತಡೆ ಹಾಗೂ ಮಾದಕ ದ್ರವ್ಯದ ದುಷ್ಪರಿಣಾಮಗಳ ಕುರಿತ ಅರಿವು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಂತ್ರಜ್ಞಾನ ಬೆಳೆದಂತೆ ಅಪರಾಧಿಗಳು ಯೋಚಿಸುವ ರೀತಿ, ದುಷ್ಕೃತ್ಯಗಳ ವಿಧಾನವೂ ಬದಲಾಗುತ್ತದೆ. ಆ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಯೋಚನಾ ವಿಧಾನ ಬದಲಿಸಿದರೆ ಅಪರಾಧಗಳ ಸಂಖ್ಯೆ ನಿಯಂತ್ರಿಸಲು ಸಾಧ್ಯ ಎಂದರು.

ಬೆಲೆ ಬಾಳುವ ಆಭರಣಗಳನ್ನು ಬ್ಯಾಂಕ್ : ಲಾಕರ್​ನಲ್ಲಿ ಇಡುವುದು, ಮನೆಯ ಸುತ್ತಮುತ್ತ ಸಿಸಿಟಿವಿ ಕ್ಯಾಮರಾ ಅಳವಡಿಸುವುದು, ಮುಖ್ಯ ಬಾಗಿಲುಗಳು ಭದ್ರವಾಗಿರುವಂತೆ ನೋಡಿಕೊಳ್ಳುವುದು, ಊರಿಗೆ ಹೋಗುವಾಗ ಮನೆಯಲ್ಲಿ ಯಾರಾದರೂ ಒಬ್ಬರು ಇರುವಂತೆ ನೋಡಿಕೊಳ್ಳುವುದು, ಅಪರಿಚಿತ ವ್ಯಕ್ತಿಗಳು ಮನೆಯ ಸುತ್ತಮುತ್ತ ಬಡಾವಣೆಯಲ್ಲಿ ಸಂಶಯಾಸ್ಪದವಾಗಿ ಸುಳಿದಾಡುವುದು ಕಂಡುಬಂದರೆ ತಕ್ಷಣ ಪೊಲೀಸರಿಗೆ ತಿಳಿಸಬೇಕು. ಇದರಿಂದ ಮುಂದೆ ನಡೆಯಬಹುದಾದ ಅಪರಾಧಗಳನ್ನು ಖಂಡಿತ ತಡೆಯಬಹುದು ಎಂದರು.

ಮಾದಕ ವ್ಯಸನದಿಂದ ಎಚ್ಚರ!: ಮಕ್ಕಳು ತಪ್ಪು ಹಾದಿ ತುಳಿಯದಂತೆ ಉತ್ತಮ ಸಂಸ್ಕಾರ ಕೊಡುವ ಜವಾಬ್ದಾರಿ ಪಾಲಕರ ಮೇಲಿದೆ. ಪ್ರೌಢಾವಸ್ಥೆಯಲ್ಲಿ ಮಕ್ಕಳ ಚಲನವಲನಗಳ ಮೇಲೆ ಪಾಲಕರು ನಿಗಾ ಇಡಬೇಕು. ಮಾದಕ ವ್ಯಸನದ ಕಡೆಗೆ ಸುಳಿಯದಂತೆ ಎಚ್ಚರ ವಹಿಸಬೇಕು. ಉತ್ತಮ ಸ್ನೇಹಿತರ ಸಂಪರ್ಕ ಹೊಂದುವಂತೆ ಪ್ರೇರೇಪಿಸಬೇಕು. ಮಾದಕ ವಸ್ತು ಮಾರಾಟ ಜಾಲ ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಅಂಥವರ ಹೆಸರು ಗೌಪ್ಯವಾಗಿ ಇಡಲಾಗುವುದು ಎಂದು ಇನ್ಸ್​ಪೆಕ್ಟರ್ ಪ್ರಭು ಸೂರಿನ್ ತಿಳಿಸಿದರು.

ಸಂಗೊಳ್ಳಿ ರಾಯಣ್ಣ ನಗರ ನಿವಾಸಿಗಳ ಕಲ್ಯಾಣ ಸಂಘದ ಅಧ್ಯಕ್ಷ ಎಸ್.ಸಿ. ಸಜ್ಜನಶೆಟ್ಟರ್, ಹಿರಿಯ ಸದಸ್ಯ ಪುಂಡಲೀಕ ಆಲೂರ್, ಕಾರ್ಯದರ್ಶಿ ವಿ.ಎಸ್. ಪಾಟೀಲ, ಎಂ.ಆರ್. ಶೇಠ್, ಎಸ್.ಎ. ಲಕ್ಷೆ್ಮೕಶ್ವರ, ಎಸ್.ಸಿ. ಬಿದರಿ, ವಾಳ್ವೇಕರ್, ಎನ್.ಎಸ್. ಕೃಷ್ಣ, ಸುಶ್ಮಾ ನಾಯಕ್, ಪುಷ್ಪಾ ಬುಲ್​ಬುಲೆ, ಪದ್ಮಾ ಪಾಟೀಲ, ಜಯಶ್ರೀ ಬಂಬೂರೆ ಮತ್ತಿತರರು ಉಪಸ್ಥಿತರಿದ್ದರು.