ರೆಡ್ಡಿಗೆ ಚಿನ್ನದ ಖೆಡ್ಡಾ!

ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಪಾಲಾಗಿ ನಾಲ್ಕು ವರ್ಷದ ಬಳಿಕ ಜಾಮೀನಿನ ಮೇಲೆ ಹೊರಬಂದು ನಿಟ್ಟುಸಿರು ಬಿಟ್ಟಿದ್ದ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಈಗ ‘ಬಂಗಾರ’ದ ಖೆಡ್ಡಾದಲ್ಲಿ ಸಿಲುಕಿದ್ದಾರೆ. ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಆಂಬಿಡೆಂಟ್ ಮಾರ್ಕೆಟಿಂಗ್ ಪ್ರೖೆ.ಲಿ. ಕಂಪನಿ ಮಾಲೀಕ ಸೈಯದ್ ಅಹಮದ್ ಫರೀದ್​ನನ್ನು ಪ್ರಕರಣದಿಂದ ರಕ್ಷಿಸುವುದಕ್ಕಾಗಿ 18 ಕೋಟಿ ರೂ. ಮೌಲ್ಯದ 57 ಕೆಜಿ ಚಿನ್ನದ ಬಿಸ್ಕತ್ತುಗಳನ್ನು ಪಡೆದಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ರೆಡ್ಡಿ ಬಂಧನಕ್ಕೆ ಬೆಂಗಳೂರು ಪೊಲೀಸರು ಬಲೆ ಬೀಸಿದ್ದಾರೆ.

ರೆಡ್ಡಿ ಪತ್ತೆಗೆ 4 ತಂಡ: ಆಂಬಿಡೆಂಟ್ ವಂಚನೆ ಪ್ರಕರಣ ಮತ್ತು ಜನಾರ್ದನ ರೆಡ್ಡಿ ಚಿನ್ನದ ಬಿಸ್ಕತ್ತು ಪಡೆದ ಪ್ರಕರಣದ ತನಿಖೆಗೆ ಸಿಸಿಬಿಯ 4 ವಿಶೇಷ ತಂಡ ರಚಿಸಲಾಗಿದೆ. ಸದ್ಯ ನಾಪತ್ತೆಯಾಗಿರುವ ರೆಡ್ಡಿ ಬಂಧನಕ್ಕಾಗಿ ಬೆಂಗಳೂರು, ಬಳ್ಳಾರಿ ಮತ್ತು ಹೈದರಾಬಾದ್​ನಲ್ಲಿ ಬಲೆಬೀಸಲಾಗಿದೆ. ಬೆಂಗಳೂರಿನ ಪಾರಿಜಾತ ನಿವಾಸದ ಮೇಲೆ ಸಿಸಿಬಿ ಪೊಲೀಸರು ಬುಧವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಏನಿದು ಪ್ರಕರಣ?

2017ರಲ್ಲಿ ಬಹುಕೋಟಿ ವಂಚನೆ ಆರೋಪದಲ್ಲಿ ಆಂಬಿಡೆಂಟ್ ಕಂಪನಿ ವಿರುದ್ಧ ದೇವರಜೀವನಹಳ್ಳಿ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ಇ.ಡಿ. ಅಧಿಕಾರಿಗಳು ಜನವರಿಯಲ್ಲಿ ಕಂಪನಿ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಆನಂತರ ಮತ್ತೊಂದು ದೂರು ದಾಖಲಾದ ಕಾರಣ ಕೇಸನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು.

ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಅಲೋಕ್​ಕುಮಾರ್, ಸಿಸಿಬಿ ಡಿಸಿಪಿ ಎಸ್.ಗಿರೀಶ್ ನೇತೃತ್ವದ ತಂಡ ಆಂಬಿಡೆಂಟ್ ಕಂಪನಿ ಮಾಲೀಕ ಸೈಯದ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.

‘ರಿಯಲ್ ಎಸ್ಟೇಟ್ ಉದ್ಯಮಿ ಬ್ರಿಜೇಶ್ ರೆಡ್ಡಿ ಮೂಲಕ ಜನಾರ್ದನ ರೆಡ್ಡಿಯನ್ನು ಸಂರ್ಪಸಿ, ಇ.ಡಿ.ಯಲ್ಲಿ ದಾಖಲಾದ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸಹಾಯ ಕೋರಿದ್ದೆ. ಇದಕ್ಕೆ ಒಪ್ಪಿದ ಜನಾರ್ದನ ರೆಡ್ಡಿ, 20 ಕೋಟಿ ರೂ.ಗಳನ್ನು ಚಿನ್ನದ ರೂಪದಲ್ಲಿ ನೀಡುವಂತೆ ಹೇಳಿದ್ದರು. ಅದರ ಪ್ರಕಾರ ರೆಡ್ಡಿ ಆಪ್ತ ಅಲಿಖಾನ್​ಗೆ ಪರಿಚಯವಿದ್ದ ಬಳ್ಳಾರಿಯ ರಾಜಮಹಲ್ ಫ್ಯಾನ್ಸಿ ಜ್ಯುವೆಲರ್ಸ್ ರಮೇಶ್ ಎಂಬುವರ ಬ್ಯಾಂಕ್ ಖಾತೆಗೆ 18 ಕೋಟಿ ರೂ. ವರ್ಗಾವಣೆ ಮಾಡಿದೆ. ಆ ನಂತರ ರಮೇಶ್, ಬೆಂಗಳೂರಿನ ಅಂಬಿಕಾ ಸೇಲ್ಸ್ ಕಾಪೋರೇಷನ್ ಮಾಲೀಕ ರಮೇಶ್ ಕೊಠಾರಿಗೆ ಕೊಟ್ಟಿದ್ದರು. ಆತ 18 ಕೋಟಿ ರೂ. ಮೌಲ್ಯದ 57 ಕೆಜಿ ಚಿನ್ನದ ಬಿಸ್ಕತ್​ಗಳನ್ನು ಜನಾರ್ದನ ರೆಡ್ಡಿಗೆ ತಲುಪಿಸಿದ್ದ’ ಎಂದು ಸೈಯದ್ ಅಹಮದ್ ಫರೀದ್ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ.

ಈ ಮೇರೆಗೆ ರಮೇಶ್ ಕೊಠಾರಿಯನ್ನು ವಶಕ್ಕೆ ಪಡೆದು ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದು, ರೆಡ್ಡಿ ಮತ್ತು ಅಲಿಖಾನ್ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಕಮಿಷನರ್ ಮಾಹಿತಿ ನೀಡಿದರು.

ಚಿನ್ನಕ್ಕೆ ಹುಡುಕಾಟ

ರಮೇಶ್ ಕೊಠಾರಿ ಬಳಿ ಚಿನ್ನದ ಬಿಸ್ಕತ್ ಖರೀದಿ ಮಾಡಿ ರೆಡ್ಡಿಗೆ ಕೊಟ್ಟಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆ 57 ಕೆಜಿ ಚಿನ್ನ ಎಲ್ಲಿದೆ ಎಂಬುದು ನಿಗೂಢವಾಗಿದ್ದು, ಈ ಪ್ರಕರಣ ಮುಂದುವರಿಯಲು ಆ ಚಿನ್ನ ದೊರಕಬೇಕಾದುದು ಮುಖ್ಯವಾಗಿದೆ.

ಚುನಾವಣೆ ಕಾರಣಕ್ಕೆ ಬಂಧಿಸಿಲ್ಲ

20 ದಿನಗಳಿಂದ ಪ್ರಕರಣದ ತನಿಖೆ ನಡೆಯುತ್ತಿದ್ದು, ಪ್ರಮುಖ ಆರೋಪಿ ಸೈಯದ್ ಮತ್ತು ರಮೇಶ್​ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಆ ನಂತರ ನಿರೀಕ್ಷಣಾ ಜಾಮೀನು ಪಡೆದಿದ್ದ ಹಿನ್ನೆಲೆಯಲ್ಲಿ ಇಬ್ಬರನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಉಪಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ತಿರುವು ಪಡೆಯುತ್ತದೆ ಎಂಬ ಕಾರಣಕ್ಕೆ ರೆಡ್ಡಿಯನ್ನು ಬಂಧಿಸಿಲ್ಲ ಎನ್ನಲಾಗಿದೆ.

ಏನಿದು ಆಂಬಿಡೆಂಟ್ ಕಂಪನಿ?

ಆಂಬಿಡೆಂಟ್ ಕಂಪನಿಯನ್ನು ಸೈಯದ್ ಅಹಮದ್ ಫರೀದ್ ಸ್ಥಾಪಿಸಿದ್ದು, 4 ತಿಂಗಳಲ್ಲಿ ಶೇ.40 ರಿಂದ 50 ಬಡ್ಡಿ ನೀಡುವುದಾಗಿ ಆಮಿಷವೊಡ್ಡಿ 15 ಸಾವಿರ ಜನರಿಂದ 600 ಕೋಟಿ ರೂ. ಸಂಗ್ರಹಿಸಿದ್ದರು. ಹೂಡಿಕೆ ಹಣಕ್ಕೆ ಪ್ರಮಾಣಪತ್ರ ನೀಡಿದ್ದು, ವಾಪಸ್ ಲಾಭಾಂಶ ಕೊಡದೆ ವಂಚಿಸಿದ್ದರು. ಸಂತ್ರಸ್ತರು 2017ರಲ್ಲೇ ಆಂಬಿಡೆಂಟ್ ಕಂಪನಿ ವಿರುದ್ಧ ಪ್ರತಿಭಟನೆ ನಡೆಸಿ ದೂರು ನೀಡಿದ್ದರು.

ಸಿಸಿಬಿ ವಿರುದ್ಧ ಹಲ್ಲೆ ಆರೋಪ

ವಿಚಾರಣೆ ನೆಪದಲ್ಲಿ ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು ಹಲ್ಲೆ ನಡೆಸಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಬಳ್ಳಾರಿಯ ರಮೇಶ್ ಆರೋಪಿಸಿದ್ದಾರೆ. ಜತೆಗೆ ಗಾಯದ ಕೆಲ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ. ಈ ಕುರಿತು ತನಿಖೆ ನಡೆಸುವುದಾಗಿ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ಚಿತ್ರದುರ್ಗದಲ್ಲೂ ಶೋಧ?

ಸಿಸಿಬಿ ಪೊಲೀಸರು ಮಾಜಿ ಸಚಿವ ಜನಾರ್ದನ ರೆಡ್ಡಿಗಾಗಿ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕು ಕೆಳಗಳಹಟ್ಟಿ ಮತ್ತಿತರೆಡೆ ಶೋಧ ನಡೆಸಿದರೆನ್ನಲಾಗಿದೆ. ಆದರೆ, ಸಿಸಿಬಿ ತಂಡ ಅಥವಾ ಸ್ಥಳೀಯ ಪೊಲೀಸರು ಸಿಸಿಬಿ ಕೋರಿಕೆ ಮೇರೆಗೆ ತನಿಖೆ ನಡೆಸಿರುವುದು ಅಧಿಕೃತವಾಗಿ ದೃಢಪಟ್ಟಿಲ್ಲ.

ಅಲಿಖಾನ್ ತಂದೆಯ ದರ್ಪ

ಅಲಿಖಾನ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದಾಗ, ಸುದ್ದಿ ಮಾಡಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಅಲಿಖಾನ್ ತಂದೆ ಹಲ್ಲೆ ನಡೆಸಿ ರಂಪಾಟ ನಡೆಸಿದ್ದಾರೆ.

ಆರ್​ಟಿಜಿಎಸ್ ಮೂಲಕ ಬಂಗಾರ ಖರೀದಿ ಮಾಡಿರುವುದು ಸುಳ್ಳು. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಸಿಸಿಬಿ ಪೊಲೀಸರು ಭೇಟಿ ನೀಡಿಲ್ಲ. ಅದೇನಾಗಿದೆಯೋ ಎಂಬುದು ಈವರೆಗೂ ತಿಳಿದಿಲ್ಲ. ನಮಗೂ ಇಡಿ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ

| ಎಸ್. ಸುರೇಶ್, ರಮೇಶ್ ಸಹೋದರ

ರೆಡ್ಡಿ ಬಂಧನದ ಭೀತಿ ಸೇರಿ ಯಾವುದೇ ಮಾಹಿತಿ ನನಗಿಲ್ಲ. ಕಾನೂನು ಅದರ ಪಾಡಿಗೆ ಅದು ಕೆಲಸ ಮಾಡುತ್ತದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಈ ಬಗ್ಗೆ ನಾನೇನೂ ಪ್ರತಿಕ್ರಿಯಿಸಲಾರೆ.

| ಬಿ.ಶ್ರೀರಾಮುಲು, ಶಾಸಕ

ಇ.ಡಿ. ಅಧಿಕಾರಿಗಳ ಶಾಮೀಲು?

ಆಂಬಿಡೆಂಟ್ ಪ್ರಕರಣ ಮುಚ್ಚಿ ಹಾಕುವ ಕುತಂತ್ರದಲ್ಲಿ ರೆಡ್ಡಿ ಜತೆ ಜಾರಿ ನಿರ್ದೇಶನಾಲಯದ(ಇ.ಡಿ.) ಅಧಿಕಾರಿಗಳು ಶಾಮೀಲಾಗಿರುವ ಆರೋಪ ಕೇಳಿಬಂದಿತ್ತು. ಈ ಕುರಿತು ಮಾಹಿತಿ ನೀಡಿದ ಬೆಂಗಳೂರು ಪೊಲೀಸ್ ಕಮಿಷನರ್ ಟಿ. ಸುನೀಲ್​ಕುಮಾರ್, ಸಿಸಿಬಿಯ ಐಜಿಪಿ, ಎಸ್​ಪಿ ದರ್ಜೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಆಂಬಿಡೆಂಟ್ ವಂಚನೆ ಕೇಸಿನ ತನಿಖೆ ನಡೆಸುತ್ತಿರುವ ಇ.ಡಿ. ಅಧಿಕಾರಿಗಳ ವಿವರ ಪಡೆದು ಇ.ಡಿ. ಮೇಲಧಿಕಾರಿಗಳ ಜತೆ ಚರ್ಚೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಚಾರ್ಜ್​ಶೀಟ್

# ದುಬಾರಿ ಬಡ್ಡಿ ಆಸೆ ತೋರಿಸಿ ಆಂಬಿಡೆಂಟ್ ಕಂಪನಿಯಿಂದ 15 ಸಾವಿರಕ್ಕೂ ಹೆಚ್ಚು ಜನರಿಗೆ ವಂಚನೆ

#? ಸಿಸಿಬಿ ಪೊಲೀಸರಿಂದ ಮಾಲೀಕ ಫರೀದ್ ಬಂಧನ

# ವಿಚಾರಣೆಯಲ್ಲಿ ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ, ಸಂಸ್ಥೆಯ ಹಣಕಾಸು ವ್ಯವಹಾರ ಸ್ಥಗಿತಗೊಳಿಸಿದ್ದ ಇ.ಡಿ.

# ಇ.ಡಿ. ಸಂಕೋಲೆಯಿಂದ ಪಾರು ಮಾಡಲು ಅಲಿಖಾನ್ ಮೂಲಕ ರೆಡ್ಡಿ ಸಹಾಯ ಕೋರಿದ್ದ ಫರೀದ್

# 20 ಕೋಟಿ ರೂ.ಗಳನ್ನು ಚಿನ್ನದ ರೂಪದಲ್ಲಿ ಪಡೆದಿದ್ದ ಜನಾರ್ದನ ರೆಡ್ಡಿ

ಆಂಬಿಡೆಂಟ್ ಮಾಲೀಕರ ಜತೆಗಿನ ಫೋಟೋದಲ್ಲಿ ಇದ್ದಾರೆಂಬ ಕಾರಣಕ್ಕೆ ಆರೋಪಿಸುವುದು ಸರಿಯಲ್ಲ. ಕಾಂಗ್ರೆಸ್ ಪ್ರಮುಖ ನಾಯಕರ ಜತೆಯೂ ಫರೀದ್ ಫೋಟೋ ತೆಗೆಸಿಕೊಂಡಿರುವ ಸಾಕ್ಷ್ಯಗಳಿವೆ. ಈ ಕೇಸಿನಲ್ಲಿ ಪ್ರಮುಖ ಆರೋಪಿ ಸೇರಿ ಎಲ್ಲ ಆರೋಪಿಗಳಿಗೂ ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿಗೂ ಜಾಮೀನು ಸಿಗುವ ಸಾಧ್ಯತೆ ಇದೆ.

| ಆರ್.ಪಿ.ಚಂದ್ರಶೇಖರ್ ಅಲಿಖಾನ್ ಪರ ವಕೀಲ