ಶಿಕ್ಷಕಿ ಜೀವ ಉಳಿಸಿದ ಪೊಲೀಸ್​ ಇನ್ಸ್​ಪೆಕ್ಟರ್​

ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ಶಿಕ್ಷಕಿ ಮೇಲೆ ಪರಿಚಿತ ವ್ಯಕ್ತಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಘಟನಾ ಸ್ಥಳದ ಸಮೀಪದಲ್ಲಿದ್ದ ಪೊಲೀಸ್ ಇನ್​ಸ್ಪೆಕ್ಟರ್ ಶಿಕ್ಷಕಿಯನ್ನು ಆಸ್ಪತ್ರೆಗೆ ಸಾಗಿಸಿ ರಕ್ತದಾನ ಮಾಡಿ ಜೀವ ಉಳಿಸಿದ್ದಾರೆ.

ಬನಶಂಕರಿ 3ನೇ ಹಂತ ದ್ವಾರಕಾನಗರದ ತನುಜಾ (40) ಹಲ್ಲೆಗೊಳಗಾದ ಶಿಕ್ಷಕಿ. ಆಕೆ ಮೇಲೆ ಹಲ್ಲೆ ನಡೆಸಿದ ಹೊಸಕೆರೆಹಳ್ಳಿಯ ಶೇಖರ್ (42) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಶಿಕ್ಷಕಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಕೊಡಿಸಿ ರಕ್ತದಾನ ಮಾಡಿ ಜೀವ ಉಳಿಸಿದ ಗಿರಿನಗರ ಠಾಣಾಧಿಕಾರಿ ಸಿದ್ದಲಿಂಗಯ್ಯ ಕರ್ತವ್ಯಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಹೊಸಕೆರೆ ಹಳ್ಳಿಯಲ್ಲಿರುವ ಈಶ್ವರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿರುವ ತನುಜಾ, ಮನೆ ಪಾಠವನ್ನೂ ಮಾಡುತ್ತಿದ್ದರು. ಮನೆ ಬ್ರೋಕರ್ ಶೇಖರ್, ತನ್ನ ಇಬ್ಬರು ಮಕ್ಕಳನ್ನು ಮನೆಪಾಠಕ್ಕೆ ಕಳುಹಿಸುತ್ತಿದ್ದ. ಶಿಕ್ಷಕಿಯ ವೈಯಕ್ತಿಕ ವಿಚಾರಕ್ಕೆ ದ್ವೇಷಕಾರಿದ ಶೇಖರ್, ಆಕೆ ಮೇಲೆ ಪ್ರತೀಕಾರಕ್ಕೆ ಮುಂದಾಗಿದ್ದ. ಗುರುವಾರ ಸಂಜೆ 4.30ರಲ್ಲಿ ಶಾಲೆಯಿಂದ ಮನೆಗೆ ತನುಜಾ ನಡೆದು ಹೋಗುತ್ತಿದ್ದಾಗ ಅಡ್ಡಗಟ್ಟಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.

ಶಿಕ್ಷಕಿ ಮೇಲೆ ಹಲ್ಲೆ ನಡೆಸುವ ಉದ್ದೇಶದಿಂದಲೇ ಸಿಟಿ ಮಾರ್ಕೆಟ್​ನಲ್ಲಿ ಮಚ್ಚು ಖರೀದಿ ಮಾಡಿದ್ದೆ ಎಂದು ಶೇಖರ್ ಹೇಳಿಕೆ ನೀಡಿದ್ದಾನೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಶೀಲ ಶಂಕಿಸಿ ಹಲ್ಲೆ?

ಐದು ವರ್ಷಗಳ ಹಿಂದೆ ಶಿಕ್ಷಕಿ ತನುಜಾ ಪತಿ ಮೃತಪಟ್ಟಿದ್ದರು. ಅವರ ಬಳಿಗೆ ಶೇಖರ್ ತನ್ನ ಇಬ್ಬರು ಮಕ್ಕಳನ್ನು ಪಾಠಕ್ಕೆ ಕಳುಹಿಸುತ್ತಿದ್ದ. ಇತ್ತೀಚೆಗೆ ಶಿಕ್ಷಕಿ ಬೇರೆಯವರ ಜತೆ ಓಡಾಡುತ್ತಿದ್ದರು. ಇಂತಹವರು ನನ್ನ ಮಕ್ಕಳಿಗೆ ಪಾಠ ಮಾಡುವುದು ಸರಿಯಲ್ಲ ಎಂಬ ಕೋಪಕ್ಕೆ ಹಲ್ಲೆ ನಡೆಸಿದ್ದಾಗಿ ಶೇಖರ್ ಹೇಳುತ್ತಿದ್ದಾನೆ. ಆದರೆ, ಬೇರೆಯೇ ಕಾರಣ ಇರಬೇಕೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ರಕ್ತದ ಮಡುವಿನಲ್ಲಿ ಶಿಕ್ಷಕಿ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲು ಚುನಾವಣಾಧಿಕಾರಿಗಳ ಜತೆ ಸಮೀಪದಲ್ಲಿಯೇ ತೆರಳುತ್ತಿದ್ದ ಇನ್​ಸ್ಪೆಕ್ಟರ್ ಸಿದ್ದಲಿಂಗಯ್ಯ ಶಿಕ್ಷಕಿ ಮೇಲಿನ ಹಲ್ಲೆ ಕಂಡು ಸ್ಥಳಕ್ಕೆ ಧಾವಿಸಿ ಶೇಖರ್​ನನ್ನು ವಶಕ್ಕೆ ಪಡೆದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ತನುಜಾ ಅವರ ಕರುಳು ಹೊರಬಂದಿತ್ತು. ಕರುಳನ್ನು ಒಳಗೆ ತಳ್ಳಿ ಅವರ ಸೀರೆಯಿಂದಲೇ ಹೊಟ್ಟೆಯನ್ನು ಕಟ್ಟಿ ಸಮೀಪದ ಖಾಸಗಿ ಆಸ್ಪತ್ರೆಗೆ ಪೊಲೀಸ್ ಜೀಪ್​ನಲ್ಲಿ ದಾಖಲಿಸಿದರು. ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸುವಂತೆ

ಸಲಹೆ ನೀಡಿದರು. ವಿಷಯ ತಿಳಿದ ವಿವಿ ಪುರ ಉಪವಿಭಾಗ ಎಸಿಪಿ ವಿಕ್ಟೋರಿಯಾ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ತುರ್ತು ಚಿಕಿತ್ಸೆಗೆ ಮನವಿ ಮಾಡಿದರು. ಅದಕ್ಕೆ ಒಪ್ಪಿದ ವೈದ್ಯಾಧಿಕಾರಿಗಳು, ವೈದ್ಯರ ತಂಡ ರಚನೆ ಮಾಡಿ ಚಿಕಿತ್ಸೆಗೆ ಸಿದ್ಧವಾಗಿದ್ದರು.

ಎ ಪಾಸಿಟೀವ್ ರಕ್ತ: ಆಂಬುಲೆನ್ಸ್​ನಲ್ಲಿ ಸಿದ್ದಲಿಂಗಯ್ಯ ಅವರೇ ಶಿಕ್ಷಕಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದರು. ತಪಾಸಣೆ ನಡೆಸಿದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಬೇಕಿದೆ. ಹೆಚ್ಚು ರಕ್ತಸ್ರಾವ ಆಗಿರುವುದರಿಂದ ತಕ್ಷಣ ಎ ಪಾಸಿಟೀವ್ ರಕ್ತ ಬೇಕೆಂದು ಕೇಳಿದರು. ಸಿದ್ದಲಿಂಗಯ್ಯ ತಮ್ಮದೂ ಅದೇ ಗುಂಪಿನ ರಕ್ತವೆಂದು ತಿಳಿಸಿದರು. ವೈದ್ಯರು ಇನ್​ಸ್ಪೆಕ್ಟರ್ ರಕ್ತ ಪಡೆದು ಶಿಕ್ಷಕಿ ಶಸ್ತ್ರಚಿಕಿತ್ಸೆ ನಡೆಸಿದರು. ಇದೀಗ ಆಕೆ ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.