ಡ್ಯೂಟಿಗೆ ಚಕ್ಕರ್ ಸಂಬಳಕ್ಕೆ ಹಾಜರ್

| ಕೀರ್ತಿನಾರಾಯಣ ಸಿ.

ಬೆಂಗಳೂರು: ವರ್ಗಾವಣೆ ಆದೇಶವಾಗಿ ಬರೋಬ್ಬರಿ 3 ತಿಂಗಳು ಕಳೆದರೂ 70ಕ್ಕೂ ಹೆಚ್ಚು ಇನ್​ಸ್ಪೆಕ್ಟರ್​ಗಳು ಹಾಗೂ ಡಿವೈಎಸ್ಪಿಗಳು ಈವರೆಗೆ ಕರ್ತವ್ಯಕ್ಕೆ ಹಾಜರಾಗದೆ ಮನೆಯಲ್ಲೇ ಕುಳಿತು ಬಿಟ್ಟಿ ಸಂಬಳ ಎಣಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಡಿಜಿಪಿ ನೀಲಮಣಿ ಎನ್.ರಾಜು, ಕಾರಣ ಕೇಳಿ 2 ಬಾರಿ ನೋಟಿಸ್ ಜಾರಿ ಮಾಡಿದ್ದರೂ (ಅ.31 ಮತ್ತು ನ.16) ಮೂರ್ನಾಲ್ಕು ಜನರನ್ನು ಬಿಟ್ಟು ಉಳಿದವರ್ಯಾರೂ ಕ್ಯಾರೆ ಎನ್ನುತ್ತಿಲ್ಲ.

ಆಡಳಿತಾತ್ಮಕ ಹಾಗೂ ಸಾರ್ವಜನಿಕರ ಹಿತದೃಷ್ಟಿ ಕಾರಣದಿಂದ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದ ಸಮ್ಮಿಶ್ರ ಸರ್ಕಾರ ಹಲವು ಐಪಿಎಸ್ ಅಧಿಕಾರಿಗಳು ಹಾಗೂ 300ಕ್ಕೂ ಅಧಿಕ ಇನ್​ಸ್ಪೆಕ್ಟರ್​ಗಳು ಮತ್ತು ಡಿವೈಎಸ್ಪಿಗಳನ್ನು ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ವರ್ಗಾವಣೆ ಮಾಡಿತ್ತು. ಈ ಪೈಕಿ ಕಾರ್ಯುತರ ಹುದ್ದೆಗಳಿಗೆ (ನಾನ್ ಎಕ್ಸಿಕ್ಯೂಟಿವ್) ವರ್ಗಾವಣೆಯಾದವರು ಕರ್ತವ್ಯಕ್ಕೆ ಹೋಗದೆ ರಾಜಕೀಯ ಪ್ರಭಾವ ಬಳಸಿ ಮತ್ತೆ ಎಕ್ಸಿಕ್ಯೂಟಿವ್ ಹುದ್ದೆ ಗಿಟ್ಟಿಸಲು ತೆರೆಮರೆ ಕಸರತ್ತು ನಡೆಸುತ್ತಿದ್ದಾರೆ.

ವರ್ಗಾವಣೆಗೊಂಡ ಕೆಲವರು ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ. ಈ ಬಗ್ಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಕರ್ತವ್ಯಲೋಪ ಎಸಗಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ. ಕೆಲವರು ಅನಾರೋಗ್ಯದ ಬಗ್ಗೆ ಸಲ್ಲಿಸಿರುವ ವೈದ್ಯಕೀಯ ವರದಿಯ ಸತ್ಯಾಸತ್ಯತೆ ಬಗ್ಗೆಯೂ ಪರಿಶೀಲಿಸಲಾಗುತ್ತದೆ.

| ಡಾ.ಎಸ್.ಪರಶಿವಮೂರ್ತಿ, ರಾಜ್ಯ ಎಡಿಜಿಪಿ (ಆಡಳಿತ)

ಆ ಹುದ್ದೆ ಮೇಲ್ಯಾಕೆ ಸಿಟ್ಟು?

  • ನಾನ್ ಎಕ್ಸಿಕ್ಯೂಟಿವ್ ಹುದ್ದೆಗೆ ಎಫ್​ಐಆರ್ ದಾಖಲು ಅಧಿಕಾರ ಇಲ್ಲ.
  • ಪತ್ರಾಂಕಿತ ವ್ಯವಹಾರ ನೋಡಿಕೊಳ್ಳುವ ಜವಾಬ್ದಾರಿಗೆ ಸೀಮಿತ
  • ಎಫ್​ಐಆರ್ ದಾಖಲಿಸುವ ಅಧಿಕಾರವಿದ್ದರೆ ಗೌರವದ ಜತೆ ಆದಾಯ.

ಯಾವ ನಿಯಮ?

ವರ್ಗಾವಣೆ ಸ್ಥಳಕ್ಕೆ ಹೋಗದ ಅಧಿಕಾರಿಗಳಿಗೆ 1966ರ ಕರ್ನಾಟಕ ನಾಗರಿಕ ಸೇವಾ ನಿಯಮ 3(1),(2),(3)ದಡಿ ನೋಟಿಸ್ ಜಾರಿ ಮಾಡಿ 7 ದಿನದಲ್ಲಿ ಸಮಜಾಯಿಷಿ ನೀಡುವಂತೆ ಸೂಚಿಸಲಾಗಿತ್ತು.

ಅನಾರೋಗ್ಯದ ನೆಪ

ಗೈರುಹಾಜರಾಗುವ ಅಧಿಕಾರಿಗಳು ಅನಾರೋಗ್ಯವೆಂದು ವೈದ್ಯಕೀಯ ವರದಿ ಸಲ್ಲಿಸಿ ಬಚಾವಾಗುತ್ತಾರೆ. ಇಂಥ ಪ್ರಕರಣಗಳ ನಿಯಂತ್ರಣಕ್ಕೆ ಸುಳ್ಳು ವೈದ್ಯಕೀಯ ವರದಿ ಸಲ್ಲಿಸಿದರೆ ಕಡ್ಡಾಯ ನಿವೃತ್ತಿ ಶಿಕ್ಷೆಗೆ ಗುರಿಪಡಿಸುವುದಾಗಿ ಸರ್ಕಾರ ಆದೇಶಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.