ಕಾನೂನು ಸುವ್ಯವಸ್ಥೆ ಕಾಪಾಡಲು ಬಿಗಿ ಕ್ರಮ

ವಿಜಯವಾಣಿ ಸುದ್ದಿಜಾಲ ಹಾವೇರಿ

17ನೇಯ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ಚುನಾವಣೆ ಅಕ್ರಮಗಳು, ಸಂಘರ್ಷಗಳು ನಡೆಯದಂತೆ ಬಿಗಿ ಕ್ರಮ ಕೈಗೊಳ್ಳಲಾಗುವುದು. ಸುಗಮ ಹಾಗೂ ಶಾಂತಿಯುತ ಚುನಾವಣೆಗೆ ಜಿಲ್ಲಾಡಳಿತದೊಂದಿಗೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಎಸ್​ಪಿ ಕೆ. ಪರಶುರಾಮ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಹಾವೇರಿ ಲೋಕಸಭೆ ಕ್ಷೇತ್ರ ಹಾವೇರಿ ಮತ್ತು ಗದಗ ಜಿಲ್ಲೆಗಳ ಒಟ್ಟಾರೆ ಎಂಟು ತಾಲೂಕುಗಳನ್ನು ಒಳಗೊಂಡಿದ್ದರೂ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಹಾವೇರಿ ಜಿಲ್ಲೆಯ ಸಂಪೂರ್ಣ ಕಾನೂನು ಸುವ್ಯವಸ್ಥೆ ನಮ್ಮ ಹೊಣೆಯಾಗಿರುತ್ತದೆ. ಗದಗ ಜಿಲ್ಲೆಯ ಮೂರು ಕ್ಷೇತ್ರಗಳು ಹಾವೇರಿ ಲೋಕಸಭೆ ಕ್ಷೇತ್ರಕ್ಕೆ ಸೇರಿದರೂ ಸಹ ಅಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಾನೂನಿನ ಸುವ್ಯವಸ್ಥೆಯನ್ನು ನೋಡಿಕೊಳ್ಳುತ್ತಾರೆ. ಶಿಗ್ಗಾಂವಿ ವಿಧಾನಸಭೆ ಕ್ಷೇತ್ರ ಧಾರವಾಡ ಲೋಕಸಭೆ ಕ್ಷೇತ್ರಕ್ಕೆ ಸೇರಿದ್ದರೂ ಅಲ್ಲಿನ ಕಾನೂನು ಸುವ್ಯವಸ್ಥೆ ನಮ್ಮ ಜವಾಬ್ದಾರಿಯಾಗಿದೆ ಎಂದರು. ಜಿಲ್ಲೆಯಲ್ಲಿ 1,470 ಮತಗಟ್ಟೆಗಳಿವೆ. ಅದರಲ್ಲಿ 295 ಮತಗಟ್ಟೆ ಗಳನ್ನು ಅತಿಸೂಕ್ಷ್ಮ ಮತಗಟ್ಟೆ ಗಳೆಂದು ಹಾಗೂ 31ಮತಗಟ್ಟೆಗಳನ್ನು ದುರ್ಬಲ ವರ್ಗದವರು ಹೆಚ್ಚಾಗಿ ವಾಸಿಸುವ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಈ ಎಲ್ಲ ಮತಗಟ್ಟೆಗಳಲ್ಲೂ ಸೂಕ್ತ ಪೊಲೀಸ್ ವ್ಯವಸ್ಥೆ ಮಾಡಲಾಗುವುದು. ಜಿಲ್ಲೆಯಲ್ಲಿ 23ಚೆಕ್​ಪೋಸ್ಟ್​ಗಳನ್ನು ತೆರೆಯಲಾಗುವುದು. 24 ತಾಸು ಈ ಚೆಕ್​ಪೋಸ್ಟ್ ಗಳು ಕಾರ್ಯನಿರ್ವಹಿಸಲಿವೆ. ಪ್ರತಿ ಚೆಕ್​ಪೋಸ್ಟ್​ಗಳಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸ ಲಾಗುವುದು. ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಚುನಾವಣಾ ಅಕ್ರಮಗಳ ಬಗ್ಗೆ ತೀವ್ರ ನಿಗಾವಹಿಸಲಾಗುವುದು ಎಂದರು.

ಐವತ್ತು ಸಾವಿರ ಮಿತಿ: ಸಾರ್ವಜನಿಕರು ಪ್ರಯಾಣಿಸುವಾಗ ತಮ್ಮೊಂದಿಗೆ ಐವತ್ತು ಸಾವಿರ ರೂ.ಗಳವರೆಗೆ ಸೂಕ್ತ ದಾಖಲೆಯೊಂದಿಗೆ ತೆಗೆದುಕೊಂಡು ಹೋಗಬಹುದು. ಯಾವುದೇ ರಾಜಕೀಯ ಉದ್ದೇಶ, ಚುನಾವಣಾ ಪ್ರಚಾರಕ್ಕಾಗಿ ಹಣ ಬಳಕೆಗೆ ತೆಗೆದುಕೊಂಡು ಹೋಗುತ್ತಿದ್ದರೆ ಮೊಕದ್ದಮೆ ದಾಖಲಿಸಲಾಗುವುದು ಎಂದರು.

ಸಾರಿಗೆ ವ್ಯವಸ್ಥೆ:ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಸಾರಿಗೆ ವ್ಯವಸ್ಥೆಯ ಯೋಜನೆ ರೂಪಿಸಲಾಗಿದೆ. ಮತಪೆಟ್ಟಿಗೆಗಳನ್ನು ಸಾಗಿಸಲು 260ರಾಜ್ಯ ರಸ್ತೆ ಸಾರಿಗೆ ಬಸ್​ಗಳು, 36ಮ್ಯಾಕ್ಸಿಕ್ಯಾಬ್ ವ್ಯವಸ್ಥೆ ಮಾಡಲಾಗಿದೆ. 21 ಜೀಪ್​ಗಳನ್ನು ಎಂಸಿಟಿ ಮತ್ತು ಇಇಎಂ ಟೀಮ್ಳಿಗೆ ಒದಗಿಸಲಾಗುವುದು. ಜಿಲ್ಲೆಯ ಎಲ್ಲ ಗ್ರಾಮಗಳಿಗೂ ಸಂಪರ್ಕ ಸಾಧನೆಯ ವ್ಯವಸ್ಥೆ ಇದ್ದು, ಎಲ್ಲೆಡೆ ದೂರವಾಣಿ ಅಥವಾ ಮೊಬೈಲ್ ಸಂಪರ್ಕವಿರುವುದರಿಂದ ಜಿಲ್ಲೆಯಲ್ಲಿ ಸಂಪರ್ಕ ರಹಿತ ಯಾವುದೇ ಗ್ರಾಮಗಳಿಲ್ಲ ಎಂದು ಎಸ್​ಪಿ ತಿಳಿಸಿದರು.

1,302 ರೌಡಿಶೀಟರ್: ಜಿಲ್ಲೆಯಲ್ಲಿ 1,302ರೌಡಿ ಶೀಟರ್​ಗಳಿದ್ದು, ಇದರಲ್ಲಿ 1,265 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. 116 ಕೋಮು ಗೂಂಡಾಗಳಿದ್ದಾರೆ. ಇದರಲ್ಲಿ 95 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. 214ಪ್ರಭಾವಿ ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಇವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕಳೆದ ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ 37ಜನರ ವಿರುದ್ಧ ಗಡಿಪಾರು ಪ್ರಕರಣ ದಾಖಲಿಸಲು ಶಿಫಾರಸು ಮಾಡಲಾಗಿತ್ತು. ಇದರಲ್ಲಿ 21ಜನರ ಮೇಲೆ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. 11 ಜನರ ಮೇಲೆ ಪ್ರಕರಣ ದಾಖಲಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ವಿಧಾನಸಭೆ ಕ್ಷೇತ್ರವಾರು ಧ್ವನಿವರ್ಧಕಗಳ ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗುವುದು ಎಂದು ಎಸ್ಪಿ ತಿಳಿಸಿದರು.