ಕೊರಿಯರ್​ ಬಾಯ್​ಗಳ ಗಮನ ಬೇರೆಡೆ ಸೆಳೆದು ಚೆಕ್ ಕದ್ದು ನಗದು ಮಾಡಿಕೊಳ್ಳುತ್ತಿದ್ದ ಐವರ ಸೆರೆ

ಬೆಂಗಳೂರು: ಕೊರಿಯರ್ ಬಾಯ್​ಗಳ  ಗಮನ ಬೇರೆಡೆ ಸೆಳೆದು ಚೆಕ್​ಗಳನ್ನು ಕದ್ದು, ಬ್ಯಾಂಕ್​ಗಳಿಂದ ಹಣ ಪಡೆಯುತ್ತಿದ್ದ ಐವರನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.

ತ್ಯಾಗರಾಜನಗರದ ನಿವಾಸಿ ನಿವೃತ್ತ ಸರ್ಕಾರಿ ನೌಕರ ಜಿ.ಎಸ್. ಶ್ರೀಪಾದ್, ಇವರ ಮಗ ಆನಂದ್ ತೀರ್ಥ, ರೌಡಿಶೀಟರ್​ಗಳಾದ ಪ್ರಶಾಂತ್, ಪ್ರತಾಪ್, ವೆಂಕಟೇಶ್ ಬಂಧಿತರು. ಪ್ರಕರಣದ ರೂವಾರಿಗಳಾದ ರೌಡಿಶೀಟರ್ ನವೀನ್ ಹಾಗೂ ರಾಜೇಶ್ ಶೆಟ್ಟಿ ತಲೆಮರೆಸಿಕೊಂಡಿದ್ದಾರೆ.

ಆರೋಪಿಗಳು ಕೊರಿಯರ್ ಬಾಯ್ಗಳ ಗಮನ ಬೆರೆಡೆ ಸೆಳೆದು ಅವರ ಬ್ಯಾಗ್​ನಲ್ಲಿದ್ದ ಅಸಲಿ ಚೆಕ್​ಗಳನ್ನು ಕಳ್ಳತನ ಮಾಡುತ್ತಿದ್ದರು. ರಾಸಾಯನಿಕ ಬಳಸಿ ಚೆಕ್​ನಲ್ಲಿರುತ್ತಿದ್ದ ಅಂಕಿ, ಅಕ್ಷರ ಬದಲಾಯಿಸಿಕೊಂಡು ತಮಗೆ ಇಷ್ಟ ಬಂದಷ್ಟು ಹಣ ಉಲ್ಲೇಖ ಮಾಡಿ, ಸಹಿ, ದಿನಾಂಕ ಹಾಕಿ ಅಸಲಿ ಚೆಕ್ ರೀತಿ ಬರೆಯುತ್ತಿದ್ದರು. ನಂತರ ಬ್ಯಾಂಕ್​ನಿಂದ ಹಣ ಪಡೆಯುತ್ತಿದ್ದರು.

ತಮಿಳುನಾಡಿನ ಶಾಸ್ತ್ರಿಭವನದ ಬಳಿ ಕೊರಿಯರ್ ಮೂಲಕ ಚೆಕ್​ನ್ನು ವಿವಿಧ ಕಂಪನಿಗಳಿಗೆ ನೀಡುವ ಕೆಲಸ ಮಾಡುತ್ತಿದ್ದ ಹುಡುಗನನ್ನು ಕೆಲ ದಿನಗಳ ಹಿಂದೆ ಆರೋಪಿಗಳು ಪತ್ತೆಹಚ್ಚಿದ್ದರು. ಆತನನ್ನು ಹಿಂಬಾಲಿಸಿಕೊಂಡು ಹೋದಾಗ ಆತ ತನ್ನ ಬ್ಯಾಗ್​ನ್ನು ಕಂಪನಿಯ ಹೊರಗಿಟ್ಟು, ಅಲ್ಲಿನ ಮುಖ್ಯಸ್ಥರಿಗೆ ನೀಡಬೇಕಿದ್ದ ಚೆಕ್​ನ್ನು ಮಾತ್ರ ತೆಗೆದುಕೊಂಡು ಒಳಗೆ ಹೋಗಿದ್ದ. ಆಗ ಆರೋಪಿಗಳು ಈತನ ಬ್ಯಾಗ್​ನಲ್ಲಿದ್ದ ಹಲವು ಚೆಕ್​ಗಳನ್ನು ಕಳ್ಳತನ ಮಾಡಿದ್ದಾರೆ. ವಿವಿಧ ಕಂಪನಿಗಳಿಗೆ ಬಂದಿದ್ದ ಸಾವಿರಾರು ರೂ. ಮೌಲ್ಯದ ಚೆಕ್​ಗಳಿಗೆ ರಾಸಾಯನಿಕ ಬಳಸಿ ಸಂಖ್ಯೆ ಬದಲಿಸಿದ್ದರು.

ಸಿಕ್ಕಿ ಬಿದ್ದಿದ್ದ್ದು ಹೀಗೆ..: ಆರೋಪಿ ವೆಂಕಟೇಶ್ ಮತ್ತು ಪ್ರಶಾಂತ್ ತಮಿಳುನಾಡಿನ ಬ್ಯಾಂಕ್​ವೊಂದರಲ್ಲಿ ಈ ಚೆಕ್ ಬಳಸಿ ಹಣ ಡ್ರಾ ಮಾಡಲು ಮುಂದಾಗಿದ್ದರು. ಆರೋಪಿಗಳು ನೀಡಿದ ಚೆಕ್​ನ್ನು ಬ್ಯಾಂಕ್ ಸಿಬ್ಬಂದಿ ಪರಿಶೀಲಿಸಿದಾಗ ನಕಲಿ ಚೆಕ್ ಎಂಬುದು ಬೆಳಕಿಗೆ ಬಂದಿತ್ತು. ಕೂಡಲೇ ಬ್ಯಾಂಕ್ ಸಿಬ್ಬಂದಿ ಮ್ಯಾನೇಜರ್ ಗಮನಕ್ಕೆ ತಂದಿದ್ದರು. ಇಬ್ಬರು ಆರೋಪಿಗಳನ್ನು ತಮ್ಮ ಕೊಠಡಿಗೆ ಕರೆದ ಮ್ಯಾನೇಜರ್ ಈ ಬಗ್ಗೆ ಪ್ರಶ್ನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ವೇಳೆ ವೆಂಕಟೇಶ್ ಮತ್ತು ಪ್ರಶಾಂತ್ ತಮ್ಮ ಬಳಿಯಿದ್ದ ಪೆಪ್ಪರ್ ನೀರನ್ನು ಮ್ಯಾನೇಜರ್ ಮುಖಕ್ಕೆ ಸಿಂಪಡಿಸಿ ಬ್ಯಾಂಕ್​ನಿಂದ ಪರಾರಿಯಾಗಿದ್ದರು.

ತಪ್ಪಿಸಿಕೊಳ್ಳುವ ಭರದಲ್ಲಿ ಬೈಕ್​ನಲ್ಲಿ ವೇಗವಾಗಿ ಹೋಗುತ್ತಿದ್ದಾಗ ಸ್ಕೀಡ್ ಆಗಿ ಬೈಕ್ ಬಿದ್ದು, ವೆಂಕಟೇಶ್ ಕೈಗೆ ಪೆಟ್ಟಾಗಿತ್ತು. ಕೂಡಲೇ ತಮಿಳುನಾಡಿನ ಅಣ್ಣಾಸೆಲೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾರೆ. ಅಲ್ಲದೆ, ವಿಧಾನಸೌಧದ ಬಳಿಯಿರುವ ಎಸ್​ಬಿಐ ಬ್ಯಾಂಕ್​ಗೆ ಇದೇ ರೀತಿಯಾಗಿ ವಂಚಿಸಿರುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರು ವಿಧಾನಸೌಧ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.

ವಿಧಾನಸೌಧ ಠಾಣೆಯಲ್ಲಿ ದೂರು

ಎಕೆಸಿಟಿ ಚಿದಂಬರಂ ಕಾಟನ್ ಮಿಲ್ ಪ್ರೖೆ.ಲಿ ಕಂಪನಿಗೆ ಸೇರಿದ ಚೆಕ್​ನ್ನು, ಶ್ರೀಪಾದ್ ಎಂಬುವರು ಅಸಲಿ ಚೆಕ್​ನಲ್ಲಿದ್ದ 57,750 ರೂ.ಮೊತ್ತವನ್ನು ಅಂಕಿ ಹಾಗೂ ಅಕ್ಷರಗಳಲ್ಲಿ ಸುಳ್ಳು ಸೃಷ್ಟಿಸಿಕೊಂಡು ತಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಫೆ.1 ರಂದು ಎಸ್​ಬಿಐ ಬ್ಯಾಂಕ್ ವಿಧಾನಸೌಧ ಶಾಖೆಯ ಚೀಫ್ ಮ್ಯಾನೇಜರ್ ಅಶೋಕ್ ರಾಮಮೂರ್ತಿ ವಿಧಾನಸೌಧ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಶ್ರೀಪಾದ್​ನನ್ನು ವಿಚಾರಣೆ ನಡೆಸಿದಾಗ ಇವರ ಮಗ ಆನಂದ್ ತೀರ್ಥ ಚೆಕ್ ಹಾಕಿರುವುದು ಬೆಳಕಿಗೆ ಬಂದಿತ್ತು.

ಮಗನ ತಪ್ಪಿಗೆ ತಂದೆಗೆ ಶಿಕ್ಷೆ

ಆರೋಪಿ ವೆಂಕಟೇಶ್ ಜೈಲಿನಲ್ಲಿದ್ದಾಗ ರೌಡಿಗಳಾದ ಪ್ರಶಾಂತ್, ಪ್ರತಾಪ್ ಪರಿಚಯವಾಗಿತ್ತು. ಇವರು ಈ ಹಿಂದೆ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದ ನವೀನ್ ಜತೆ ಸೇರಿ ಕೃತ್ಯ ಎಸಗುತ್ತಿದ್ದರು. ನಂತರ ವೆಂಕಟೇಶ್ ಕೈ ಜೋಡಿಸಿದ್ದ. ಲೋನ್ ಕೊಡಿಸುವ ಕೆಲಸ ಮಾಡುತ್ತಿದ್ದ ಹರೀಶ್​ಗೆ, ಕದ್ದಿದ್ದ ಚೆಕ್ ಬದಲಾಯಿಸಿ ನಗದು ಮಾಡಿಕೊಟ್ಟರೆ ಕಮಿಷನ್ ಕೊಡುವುದಾಗಿ ಪ್ರತಾಪ್ ಹೇಳಿದ್ದ. ಮತ್ತೊಂದೆಡೆ ಲಕ್ಷಾಂತರ ರೂ. ಸಾಲ ಮಾಡಿ ಅಲೆಯುತ್ತಿದ್ದ ಆನಂದ್ ತೀರ್ಥನನ್ನು ಪರಿಚಯಿಸಿಕೊಂಡ ಹರೀಶ್, ಆತನಿಗೆ ಹಣದ ಆಮಿಷವೊಡ್ಡಿದ್ದ. ಹಣದ ಆಸೆಗಾಗಿ ಆನಂದ್ ತೀರ್ಥ ತಂದೆ ಶ್ರೀಪಾದ್​ನ ವಿಧಾನಸೌಧ ಶಾಖೆಯ ಎಸ್​ಬಿಐ ಬ್ಯಾಂಕ್ ಖಾತೆಗೆ ನಕಲಿ ಚೆಕ್ ನೀಡಿ ಹಣ ಡ್ರಾ ಮಾಡಿಕೊಂಡಿದ್ದ. ಮಗ ಮಾಡಿದ ತಪ್ಪಿಗೆ ಶ್ರೀಪಾದ್ ಶಿಕ್ಷೆ ಅನುಭವಿಸುವಂತಾಗಿದೆ.