ಕೊಲೆಗೆ ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು, ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಬಂಧನ
ಆನೇಕಲ್: ಮೂರು ದಿನದ ಹಿಂದೆ ಆನೇಕಲ್ ಪುರಸಭೆಯ ಸದಸ್ಯ ರವಿ ಕೊಲೆ ಪ್ರಕರಣದಲ್ಲಿ ಆರೋಪಿ ಕಾರ್ತಿಕ್ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದ ಪೊಲೀಸರು, ಶನಿವಾರ ತಾಲೂಕಿನ ಬನ್ನೇರುಟ್ಟ ಸಮೀಪದ ರಾಗಿಹಳ್ಳಿ ಕಾಡಂಚಿನಲ್ಲಿ ಅಡಗಿದ್ದ ದುರುಳನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.
ವೆಂಕಟರಾಜ್ ಬಂಧಿತ. ಈತ ಒಂದು ಕೊಲೆ, ಮೂರು ಕೊಲೆ ಯತ್ನ ಸೇರಿ ಹಲವು ಪ್ರಕರಣಗಳಲ್ಲಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ.
15 ದಿನದ ಹಿಂದೆ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಮಾಯಸಂದ್ರ ಸಮೀಪ ವೆಂಕಟರಾಜು ಹಾಗೂ ಆತನ ಗ್ಯಾಂಗ್ ಮುನೇಂದ್ರ ಎಂಬುವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿತ್ತು. ಇದಲ್ಲದೆ ಸೂರ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರ್ಷದ ಹಿಂದೆ ಇಬ್ಬರ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ. ಶನಿವಾರ ಸಂಜೆ ಬನ್ನೇರುಟ್ಟ ಸಮೀಪದ ರಾಗಿಹಳ್ಳಿ ಕಾಡಂಚಿನಲ್ಲಿ ಆರೋಪಿ ಇರುವ ಮಾಹಿತಿ ಮೇರೆಗೆ ಬಂಧನಕ್ಕೆ ಸಿಬ್ಬಂದಿ ತೆರಳಿದಾಗ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಜಿಗಣಿ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ಸೂಚನೆ ನೀಡಿದರೂ ಸುಮ್ಮನಾಗದ ಆರೋಪಿ, ಅಪರಾಧ ವಿಭಾಗದ ಪೇದೆ ವಿನಯ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಇನ್ಸ್ಪೆಕ್ಟರ್ ಮಂಜುನಾಥ್, ವೆಂಕಟರಾಜು ಕಾಲಿಗೆ ಗುಂಡೇಟು ಹೊಡೆದು ವಶಕ್ಕೆ ಪಡೆದಿದ್ದಾರೆ. ಗಾಯಗೊಂಡಿದ್ದ ವೆಂಕಟರಾಜು ಹಾಗೂ ಪೊಲೀಸ್ ಅಪರಾಧ ವಿಭಾಗದ ಪೇದೆ ವಿನಯ್ ಇಬ್ಬರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅಡಿಷನಲ್ ಎಸ್ಪಿ ಕೆ.ಎಸ್.ನಾಗರಾಜ್ ಮತ್ತು ಡಿವೈಎಸ್ಪಿ ಮೋಹನ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬನ್ನೇರುಟ್ಟ ಇನ್ಸ್ಪೆಕ್ಟರ್ ಕೃಷ್ಣಕುಮಾರ್, ಇನ್ಸ್ಪೆಕ್ಟರ್ ಸಂಜೀವ್ ಮಹಾಜನ್, ಜಿಗಣಿ ಸಿಪಿಐ ಮಂಜುನಾಥ್, ಅತ್ತಿಬೆಲೆ ಪಿಎಸ್ಐ ಮುರಳಿ ಇದ್ದರು.
ಚುನಾವಣೆ ಸಂದರ್ಭದಲ್ಲೂ ತಲೆಮರೆಸಿಕೊಂಡಿದ್ದ: ಕಳೆದ ಚುನಾವಣೆ ಸಂದರ್ಭದಲ್ಲಿ ಸೂರ್ಯನಗರ ಪೊಲೀಸರು ವೆಂಕಟರಾಜ್ನನ್ನು ಗಡಿಪಾರು ಮಾಡಿದ್ದರು. ಆದರೂ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡು ಓಡಾಡಿಕೊಂಡಿದ್ದ. ಹೀಗಾಗಿ ಈತನ ಬಂಧನ ಮಾಡಲೇಬೇಕು ಎಂದು ಹಿರಿಯ ಪೊಲೀಸರು ಸೂಚನೆ ಕೊಟ್ಟಿದ್ದರು. ಅಂತೆಯೇ, ಮಾಹಿತಿ ಕಲೆಹಾಕಿದ ಪೊಲೀಸರು, ರಾಗಿಹಳ್ಳಿ ಸಮೀಪದ ಅರಣ್ಯದಲ್ಲಿ ಆರೋಪಿ ಬರುತ್ತಿದ್ದ ಬೈಕ್ಗೆ ಅಡ್ಡ ಹಾಕಿದ್ದಾರೆ. ಈ ವೇಳೆ ಸೂರ್ಯ ನಗರ ಇನ್ಸ್ಪೆಕ್ಟರ್ ಸಂಜೀವ್ ಮಹಾಜನ್ ಹಾಗೂ ಪೇದೆ ವಿನಯ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಆತ್ಮ ರಕ್ಷಣೆಗೆ ಇನ್ಸ್ಪೆಕ್ಟರ್ ಮಂಜುನಾಥ್, ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.