ಬಂಧಿಸಲು ಹೋದಾಗ ತಮ್ಮ ಮೇಲೆ ಮಚ್ಚು ಎತ್ತಿದ ಆರೋಪಿಗೆ ಗುಂಡು ಹಾರಿಸಿದ ಪೊಲೀಸರು…

ಬೆಂಗಳೂರು: ಗುರಾಯಿಸಿದ್ದನ್ನು ಪ್ರಶ್ನಿಸಿದ ಪೇಂಟರ್​ಗಳ ಮೇಲೆ ಮತ್ತು ಜಗಳ ಬಿಡಿಸಲು ಬಂದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ರೌಡಿಗೆ ಅಶೋಕನಗರ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ವಿವೇಕನಗರದ ಪೆನ್ಷನ್ ಮೊಹಲ್ಲಾದ ವಿನೋದ್ ಅಲಿಯಾಸ್ ಪಚ್ಚಿ (24) ಬಂಧಿತ.

ಪೇಂಟಿಂಗ್ ಕೆಲಸ ಮಾಡುತ್ತಿದ್ದ ವಿನೋದ್ ಕೆಲ ವರ್ಷಗಳಿಂದ ವಾಹನ ಕಳ್ಳತನ, ಸುಲಿಗೆ, ದರೋಡೆ ಸೇರಿ 9 ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಮೇ 14ರ ರಾತ್ರಿ 8.30ರಲ್ಲಿ ಆನೆಪಾಳ್ಯದ ಚಾರ್ಲಿ ಎಂಬಾತ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಪಿಂಟೋ ಎಂಬಾತನ ಮನೆ ಬಳಿ ಹೋಗಿ ಮಾತನಾಡುತ್ತಾ ನಿಂತಿದ್ದ. ಆರೋಪಿ ವಿನೋದ್ ಇವರನ್ನು ಗುರಾಯಿಸುತ್ತಿದ್ದ. ಏಕೆ ಗುರಾಯಿಸುತ್ತಿಯಾ ಎಂದು ಪ್ರಶ್ನೆ ಮಾಡಿದಾಗ ಇಬ್ಬರ ಮೇಲೆ ಚಾಕು ಮತ್ತು ಬಿಯರ್ ಬಾಟಲ್​ನಿಂದ ಹಲ್ಲೆ ಮಾಡಿದ್ದ. ತಪ್ಪಿಸಿಕೊಂಡು ಮನೆಗೆ ಓಡಿದಾಗ ತನ್ನ ಇಬ್ಬರು ಸಹಚರರ ಜತೆಗೆ ಅಲ್ಲಿಗೂ ನುಗ್ಗಿದ ಆರೋಪಿ ಚಾಕು ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದ. ಸ್ಥಳಕ್ಕೆ ಬಂದ ಸಂಬಂಧಿಕರ ಮೇಲೂ ಹಲ್ಲೆ ಮಾಡಿದ್ದ. ಗಲಾಟೆ ಬಿಡಿಸಲು ಬಂದ ನೆರೆ ಮನೆಯ ಕಿಶೋರ್ ಎಂಬುವರ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು.

ಈ ಸಂಬಂಧ 2 ಪ್ರತ್ಯೇಕ ಕೊಲೆ ಯತ್ನ ಪ್ರಕರಣಗಳು ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು. ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದರು. ಶನಿವಾರ ಬೆಳಗಿನ ಜಾವ 4 ಗಂಟೆಯಲ್ಲಿ ಬನ್ನೇರುಘಟ್ಟ ರಸ್ತೆ ಇಂಡಿಯನ್ ಕ್ರಿಶ್ಚಿಯನ್ ಸೆಮಿಟರಿಯಲ್ಲಿ ವಿನೋದ್ ಅಡಗಿರುವ ಮಾಹಿತಿ ಗೊತ್ತಾಗಿದೆ. ಅಶೋಕನಗರ ಠಾಣೆ ಇನ್​ಸ್ಪೆಕ್ಟರ್ ಶಶಿಧರ್ ನೇತೃತ್ವದ ತಂಡ ಬಂಧನಕ್ಕೆ ಸೆಮಿಟರಿಗೆ ತೆರಳಿತ್ತು. ಪೊಲೀಸರನ್ನು ನೋಡುತ್ತಿದ್ದಂತೆ ಆರೋಪಿ ಮಾರಕಾಸ್ತ್ರಗಳಿಂದ ಪೇದೆ ನಯಾಜ್ ಮೇಲೆ ಹಲ್ಲೆ ನಡೆಸಿದ. ಪ್ರಾಣರಕ್ಷಣೆಗಾಗಿ 2 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ ಪೊಲೀಸರು, ಶರಣಾಗುವಂತೆ ಎಚ್ಚರಿಕೆ ನೀಡಿದರು. ಅದಕ್ಕೂ ಬಗ್ಗದ ಆರೋಪಿ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಇನ್​ಸ್ಪೆಕ್ಟರ್ ಕಾಲುಗಳಿಗೆ ಗುಂಡು ಹಾರಿಸಿದ್ದಾರೆ. ಕುಸಿದು ಬಿದ್ದ ವಿನೋದ್​ನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಲಿಗೆ, ದರೋಡೆ ಸೇರಿ 8 ಪ್ರಕರಣಗಳಲ್ಲಿ ಜೈಲು ಸೇರಿದ್ದ ವಿನೋದ್, ಒಂದೂವರೆ ತಿಂಗಳ ಹಿಂದೆ ಬಿಡುಗಡೆಯಾಗಿದ್ದ. ನಂತರ 2 ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ.

| ದೇವರಾಜ್, ಕೇಂದ್ರ ವಿಭಾಗ ಡಿಸಿಪಿ

Leave a Reply

Your email address will not be published. Required fields are marked *