ಪಿಎಸ್​ಐ ವಿರುದ್ಧ ದೂರು ಸ್ವೀಕರಿಸಲು ಪಟ್ಟು

ಅಜ್ಜಂಪುರ: ಕರ್ತವ್ಯದ ವೇಳೆ ಹಲ್ಲೆ ಮಾಡಿರುವ ಪಿಎಸ್​ಐ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಆಗ್ರಹಿಸಿ ಪೊಲೀಸ್ ಪೇದೆಯ ತಾಯಿ, ಪತ್ನಿ ಮತ್ತು ಮಕ್ಕಳು ಅಜ್ಜಂಪುರ ಪೊಲೀಸ್ ಠಾಣೆ ಎದುರು ಶುಕ್ರವಾರ ಧರಣಿ ಆರಂಭಿಸಿದ್ದಾರೆ. ಲಕ್ಕವಳ್ಳಿ ಪೊಲೀಸ್ ಠಾಣೆ ಪೇದೆ ಶಿವಣ್ಣ ಅವರ ತಾಯಿ ತಿಮ್ಮಮ್ಮ ಹಾಗೂ ಪತ್ನಿ ಆಶಾ, ಇಬ್ಬರು ಮಕ್ಕಳು ಶುಕ್ರವಾರ ಧರಣಿ ಕುಳಿತಿದ್ದು, ಎಫ್​ಐಆರ್ ಹಾಕುವವರೆಗೆ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ನ. 20ರಂದು ಪೇದೆ ಶಿವಣ್ಣ ಅವರು ಅಜ್ಜಂಪುರ ಸಮೀಪದ ಭಕ್ತನಕಟ್ಟೆ ಜುಂಜಪ್ಪನ ಜಾತ್ರೆಯ ಕರ್ತವ್ಯದಲ್ಲಿದ್ದಾಗ ಅಜ್ಜಂಪುರ ಪಿಎಸ್​ಐ ರಫೀಕ್ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಅವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಧ್ಯಾಹ್ನ 12 ಗಂಟೆಗೆ ಠಾಣೆಗೆ ದೂರು ನೀಡಿದರೂ ಯಾವ ಅಧಿಕಾರಿಯೂ ದೂರು ಸ್ವೀಕರಿಸಿಲ್ಲ ಎಂದು ಧರಣಿ ನಿರತರು ಆರೋಪಿಸಿದರು.

ಎಫ್​ಐಆರ್ ದಾಖಲಿಸದಿದ್ದರೆ ಧರಣಿ ನಿಲ್ಲಿಸಲ್ಲ: ಪತಿ ಮೇಲೆ ಹಲ್ಲೆ ಮಾಡಿರುವ ಪಿಎಸ್​ಐ ವಿರುದ್ಧ ಎಫ್​ಐಆರ್ ಹಾಕದಿದ್ದರೆ ಪೊಲೀಸ್ ಠಾಣೆ ಬಿಟ್ಟು ಕದಲುವುದಿಲ್ಲ ಎಂದು ಹಲ್ಲೆಗೀಡಾಗಿದ್ದಾರೆ ಎನ್ನಲಾದ ಪೇದೆಯ ಪತ್ನಿ ಆಶಾ ರಾಣಿ ಹೇಳಿದ್ದಾರೆ.

ಪತಿ ಜುಂಜಪ್ಪ ಜಾತ್ರೆಯಲ್ಲಿ ಕರ್ತವ್ಯ ಮುಗಿಸಿ ಊಟಕ್ಕೆ ತೆರಳಿದ್ದರು. ಊಟ ಮಾಡಿ ಬರುತ್ತಿರುವಾಗ ತಡೆದ ಪಿಎಸ್​ಐ ಜಗಳವಾಡಿ ಹಲ್ಲೆ ಮಾಡಿದ್ದರು. ಮನೆಗೆ ಬಂದಾಗ ಪತಿ ಎದೆ ನೋವಿನಿಂದ ಬಳಲುತ್ತಿದ್ದರು. ಕೂಡಲೇ ಲಕ್ಕವಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು ಈಗ ್ಯ ತರೀಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತಿ ಖಿನ್ನತೆಗೆ ಒಳಗಾಗಿದ್ದಾರೆ. ಹಿರಿಯ ಅಧಿಕಾರಿಗಳು ರಾಜಿ ಸಂಧಾನ ಮಾಡಿಕೊಳ್ಳಿ ಎನ್ನುತ್ತಿದ್ದಾರೆ. ಎಫ್​ಐಆರ್ ದಾಖಲಾಗದೆ ನಾನು ಪೊಲೀಸ್ ಠಾಣೆ ಬಿಟ್ಟು ಕದಲುವುದಿಲ್ಲ ಎಂದು ಆಶಾ ಧರಣಿ ಕೂತಿದ್ದಾರೆ.