ಪೊಲೀಸ್ ಶ್ವಾನ ದ್ರೋಣನಿಗೆ ಚಿನ್ನದ ಪದಕ

 <ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದಲ್ಲಿ ಪ್ರಥಮ ಸ್ಥಾನ>

ಉಡುಪಿ: ಉತ್ತರ ಪ್ರದೇಶದ ಲಕ್ನೋದಲ್ಲಿ ಜುಲೈ 19ರಂದು ಆಯೋಜಿಸಲಾದ ಅಖಿಲ ಭಾರತ ಮಟ್ಟದ ಪೊಲೀಸ್ ಕರ್ತವ್ಯ ಕೂಟದ (ಆಲ್ ಇಂಡಿಯಾ ಪೊಲೀಸ್ ಡ್ಯೂಟಿ ಮೀಟ್) ಶ್ವಾನದಳ ವಿಭಾಗದಲ್ಲಿ ರಾಜ್ಯದ ಬೆಂಗಳೂರು ದಕ್ಷಿಣ ನಗರ ಸಶಸ್ತ್ರ ಮೀಸಲು ಪಡೆಯ ಅಪರಾಧ ಪತ್ತೆ ಶ್ವಾನ ದ್ರೋಣ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗೆದ್ದಿದೆ.

ದೇಶದ ಎಲ್ಲ ರಾಜ್ಯಗಳ ಪೊಲೀಸ್ ಶ್ವಾನಗಳು, ಅರೆಸೇನಾ ಪಡೆಗಳ ಶ್ವಾನ ಸೇರಿದಂತೆ 100ಕ್ಕೂ ಅಧಿಕ ಶ್ವಾನಗಳು ಈ ಕೂಟದಲ್ಲಿ ಭಾಗವಹಿಸಿವೆ. ಕೂಟದಲ್ಲಿ ನಡೆದ ಅಣಕು ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ತೋರಿದ ದ್ರೋಣ ಉತ್ತಮ ಅಂಕ ಗಳಿಸಿ ಚಿನ್ನದ ಪದಕ ಮುಡಿಗೇರಿಕೊಳ್ಳುವ ರಾಜ್ಯ ಪೊಲೀಸ್ ಇಲಾಖೆ ಹೆಮ್ಮೆ ಪಡುವಂತೆ ಮಾಡಿದೆ.

ರವಿದೇಶ್ ಭಂಡಾರಿ ಇದರ ಹ್ಯಾಂಡ್ಲರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಡಾಬರ್‌ಮನ್ ತಳಿಯ ದ್ರೋಣ ಕಳೆದ 6 ವರ್ಷಗಳಿಂದ ಪೊಲೀಸ್ ಇಲಾಖೆ, ಅಪರಾಧ ಪತ್ತೆ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದೆ.

ಶಂಕರ್ ಕುಲಾಲ್ ತೃತೀಯ:  ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದಲ್ಲಿ ನಡೆದ ವಾಹನ ತಪಾಸಣಾ (ಬಾಂಬ್ ಪತ್ತೆ )ವಿಭಾಗದಲ್ಲಿ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ, ವಿದ್ವಂಸಕ ಕೃತ್ಯ ತಪಾಸಣಾ ದಳದಲ್ಲಿ ಸೇವೆ ಸಲ್ಲಿಸುತ್ತಿರುವ ಉಡುಪಿಯ ಶಂಕರ್ ಕುಲಾಲ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *